Home » Kannada » ಕನ್ನಡ ವಿಕಿಪೀಡಿಯದಲ್ಲಿ ಹುಡುಕು ಮತ್ತು ಬದಲಿಸು

ಕನ್ನಡ ವಿಕಿಪೀಡಿಯದಲ್ಲಿ ಹುಡುಕು ಮತ್ತು ಬದಲಿಸು

ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳನ್ನು ಓದುವಾಗ ಕೆಲವು ಪದಗಳನ್ನು ತಪ್ಪು ರೂಪದಲ್ಲಿ ಬಳಸಲಾಗಿದೆ ಎಂದು ಅನಿಸಿರಬಹುದಲ್ಲವೇ? ಉದಾಹರಣೆಗೆ ವಿಶೇಷ ಎಂಬ ಪದದ ಬದಲಿಗೆ ವಿಷೇಶ ಎಂದು ಬಳಸಿರುವುದು. ಹಲವು ಪದಗಳನ್ನು ತಪ್ಪಾಗಿ ಬಳಸುವುದನ್ನು ನಾವು ಪ್ರತಿದಿನವೂ ಎಲ್ಲ ಸ್ಥಳಗಳಲ್ಲೂ ಕಾಣುತ್ತಿರುತ್ತೇವೆ. ವಿಕಿಪೀಡಿಯವೂ ಇದಕ್ಕೆ ಹೊರತಲ್ಲ. ಇಂತಹ ಪದಗಳನ್ನು ಹುಡುಕಿ ಬದಲಿಸುವುದು ಸ್ವಲ್ಪ ಕಷ್ಟದ ಕೆಲಸ. ಯಾವ ಯಾವ ಲೇಖನದಲ್ಲಿ ಇಂತಹ ತಪ್ಪು ರೂಪಗಳಿವೆ ಎಂದು ಮೊದಲು ಪ್ತತೆ ಹಚ್ಚಿ, ಆಯಾ ಲೇಖನವನ್ನು ತೆರೆದು ಒಂದೊಂದಾಗಿ ಪದಗಳನ್ನು ಹುಡುಕಿ ಬದಲಿಸುವುದು ನಿಜಕ್ಕೂ ಸಣ್ಣ ಕೆಲಸವೇನಲ್ಲ. ಇಂತಹ ಮತ್ತು ಇನ್ನೂ ಹಲವು ಕೆಲಸಗಳನ್ನು ಸುಲಭವಾಗಿಸಲು ಅಟೋವಿಕಿಬ್ರೌಸರ್ ಎಂಬ ತಂತ್ರಾಂಶ ಲಭ್ಯವಿದೆ. ಇದರ ಬಗ್ಗೆ ಹೆಚ್ಚಿನ ವಿವರ ಈ ಪುಟದಲ್ಲಿದೆ – https://en.wikipedia.org/wiki/Wikipedia:AutoWikiBrowser. ಇದು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಮಾತ್ರ ಕೆಲಸ ಮಾಡುತ್ತದೆ. ಲಿನಕ್ಸ್ ಬಳಸುವವರು ವೈನ್ ಮೂಲಕ ಬಳಸಬಹುದು. ಈ ತಂತ್ರಾಂಶವನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು – http://sourceforge.net/projects/autowikibrowser/. ಈ ತಂತ್ರಾಂಶವನ್ನು ಇನ್ನೂ ಹಲವು ಕೆಲಸಗಳನ್ನು ಮಾಡಲು ಬಳಸಬಹುದು. ಈ ತಂತ್ರಾಂಶವನ್ನು ಬಳಸಿ ಕನ್ನಡ ವಿಕಿಪೀಡಿಯದಲ್ಲಿ ತಪ್ಪಾಗಿ ಬಳಕೆಯಾದ ಪದವೊಂದನ್ನು ಬದಲಾಯಿಸುವುದು ಹೇಗೆ ಎಂದು ಈ ಬ್ಲಾಗಿನಲ್ಲಿ ನಾವು ನೋಡೋಣ.

 
Screenshot-AutoWikiBrowser (5) ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಂಡು ಅದನ್ನು ಪ್ರಾರಂಭಿಸಿ. ಮೆನುವಿನಲ್ಲಿ ಕಾಣಿಸುವ Options ಮೆನುವಿನಲ್ಲಿ Preferences ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಈಗ ಕಾಣಿಸುವ ಡಯಲಾಗ್ ಬಾಕ್ಸ್‌ನಲ್ಲಿ site ಟ್ಯಾಬ್‌ನಲ್ಲಿ Project ಎಂಬಲ್ಲಿ wikipedia ಎಂದು ಮತ್ತು Language ಎಂಬಲ್ಲಿ kn ಎಂದು ಆಯ್ಕೆ ಮಾಡಿಕೊಂಡು Ok ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ. ಮೆನುವಿನಲ್ಲಿ Login/Profiles ಎಂಬುದನ್ನು ಆಯ್ಕೆ ಮಾಡಿ. ಮೊದಲ ಬಾರಿಗೆ ಬಳಸುವವರು ಇಲ್ಲಿ ಕನ್ನಡ ವಿಕಿಪೀಡಿಯದಲ್ಲಿನ ನಿಮ್ಮ ಬಳೆಕದಾರ ಹೆಸರು ಮತ್ತು ಪ್ರವೇಶಪದ(ಪಾಸ್‌ವರ್ಡ್)ಗಳನ್ನು ಇಲ್ಲಿ ದಾಖಲಿಸಿ ಇಟ್ಟುಕೊಂಡರೆ ಅದನ್ನೇ ಮತ್ತೆ ಮತ್ತೆ ಬಳಸಬಹುದು. ಮೊದಲ ಬಾರಿಗೆ ಬಳಸುವವರು Add ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ ತಮ್ಮ ಬಳೆಕದಾರ ಹೆಸರು ಮತ್ತು ಪ್ರವೇಶಪದ ದಾಖಲಿಸಿಟ್ಟುಕೊಳ್ಳಬಹುದು. ನಂತರ Login ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿದರೆ ಕನ್ನಡ ವಿಕಿಪೀಡಿಯಕ್ಕೆ ನೀವು ಲಾಗಿನ್ ಆಗಿರುತ್ತೀರಿ. ಇದನ್ನು ಅದು ಬಲಮೂಲೆಯಲ್ಲಿ ಕೆಳಗಡೆ ತೋರಿಸುತ್ತದೆ. Screenshot-AutoWikiBrowser (2) Screenshot-AutoWikiBrowser (1)

 

ಈಗ Make list ಎಂದು ಬರೆದುದರ ಕೆಳಗೆ ಕಾಣಿಸುವ Source: ಎಂಬಲ್ಲಿ Wiki search (text) ಎಂದು ಆಯ್ಕೆ ಮಾಡಿಕೊಳ್ಳಿ. ನಂತರ ಅದರ ಕೆಳಗಡೆ ಕಾಣಿಸುವ Wiki search: ಎಂಬ ಶೀರ್ಷಿಕೆ ಇರುವ ಟೆಕ್ಸ್ಟ್ ಬಾಕ್ಸ್‌ನಲ್ಲಿ ನೀವು ಹುಡುಕಬೇಕಾದ (ಹಾಗೂ ಬದಲಿಸಬೇಕಾದ) ಪದವನ್ನು ಟೈಪಿಸಿ. ಹೀಗೆ ಟೈಪ್ ಮಾಡಲು ನಿಮ್ಮ ಗಣಕದಲ್ಲಿ ಕನ್ನಡ ಯುನಿಕೋಡ್‌ನಲ್ಲಿ ಟೈಪ್ ಮಾಡಲು ಅನುಕೂಲ ಮಡಿಕೊಡುವ ಸವಲತ್ತು ಅಗತ್ಯ. ವಿಂಡೋಸ್ ಗಣಕಗಳಲ್ಲಿ ಈ ಸೌಲಭ್ಯ ಇದೆ. ಅದನ್ನು ಚಾಲನೆಗೊಳಿಸಬೇಕು ಅಷ್ಟೆ. ಬರಹ ಡೈರೆಕ್ಟ್ ಅಥವಾ ಪದ ತಂತ್ರಾಂಶದಲ್ಲಿ ದೊರೆಯುವ ಕೀಲಿಮಣೆ ಸವಲತ್ತನ್ನೂ ಬಳಸಬಹುದು. ನಂತರ Make list ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಅಲ್ಲೇ ಕೆಳಗೆ ಎಡ ಮೂಲೆಯಲ್ಲಿರುವ ಟೆಕ್ಸ್ಟ್‌ಬಾಕ್ಸ್‌ನಲ್ಲಿ ಅದು ನೀವು ದಾಖಲಿಸಿದ ಪದ ಇರುವ ಎಲ್ಲ ಲೇಖನಗಳ ಶೀರ್ಷಿಕೆಗಳನ್ನು ಪಟ್ಟಿ ಮಾಡುತ್ತದೆ. ಅದು ನೀಡಿದ ಪಟ್ಟಿ ಸರಿಯಿದೆಯೇ ಎಂದು ನೀವು ಬೇಕಿದ್ದರೆ ಪರಿಶೀಲನೆ ಮಾಡಿಕೊಳ್ಳಬಹುದು.
Screenshot-AutoWikiBrowser (4)
 

AutoWikiBrowserನ ಕೆಳ ಅರ್ಧಭಾಗದ ಮಧ್ಯದಲ್ಲಿ ಕಂಡುಬರುವ ಹಲವು ಟ್ಯಾಬ್‌ಗಳಲ್ಲಿ ಮೊದಲನೆಯದು Options ಎಂಬುದು. ಈ ಟ್ಯಾಬ್‌ ಅನ್ನು ಆಯ್ಕೆ ಮಾಡಿಕೊಂಡಾಗ (ಅಂದರೆ Options ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿದಾಗ)  ಕೆಳಗಡೆ Find and replace ಎಂಬ ಅಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಿ. ನಂತರ Normal settings ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಮೂಡಿಬರುವ ಡಯಲಾಗ್ ಬಾಕ್ಸ್‌ನಲ್ಲಿ Find ಎಂದು ಬರೆದುದರ ಕೆಳಗಿರುವ ಟೆಕ್ಸ್ಟ್‌ಬಾಕ್ಸ್‌ನಲ್ಲಿ ತಪ್ಪಾಗಿರುವ ಪದವನ್ನು ದಾಖಲಿಸಿ. ಉದಾಹರಣೆಗೆ ಬಾರತ. Replace with  ಎಂದು ಬರೆದುದರ ಕೆಳಗಿರುವ ಟೆಕ್ಸ್ಟ್‌ಬಾಕ್ಸ್‌ನಲ್ಲಿ ಸರಿಯಾದ ಪದವನ್ನು ದಾಖಲಿಸಿ. ಈ ಉದಾಹರಣೆಯಲ್ಲಿ ಭಾರತ. ನಂತರ Ok ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಮತ್ತೆ AutoWikiBrowserನ ಕೆಳ ಅರ್ಧಭಾಗದ ಮಧ್ಯದಲ್ಲಿ ಕಂಡುಬರುವ ಹಲವು ಟ್ಯಾಬ್‌ಗಳಲ್ಲಿ Start ಎಂದು ಬರೆದ ಟ್ಯಾಬ್ (ಬಟನ್) ಮೇಲೆ ಕ್ಲಿಕ್ ಮಾಡಿ. ಈಗ ಕೆಳಗಡೆ ಮೂಡಿ ಬಂದ Start ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ. ಮೇಲ್ಭಾಗದಲ್ಲಿ ಈಗ ಪರದೆ ಎರಡು ಭಾಗವಾಗಿ ಎಡ ಭಾಗದಲ್ಲಿ ಹಳೆಯ ಆವೃತ್ತಿ ಮತ್ತು ಬಲಭಾಗದಲ್ಲಿ ಹೊಸ ಆವೃತ್ತಿ ಮೂಡಿಬರುತ್ತವೆ. ಮೇಲೆ ಕೆಳಗೆ ಸ್ಕ್ರಾಲ್ ಮಾಡಿ ಎಲ್ಲ ಸರಿಯಾಗಿದೆ ಎಂದು ತೃಪ್ತಿಯಾದರೆ ಕೆಳ ಅರ್ಧಭಾಗದ ಮಧ್ಯದಲ್ಲಿ ಕಂಡುಬರುವ Save ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿದರೆ ಎಲ್ಲ ಬದಲಾವಣೆಗಳು ಉಳಿಸಲ್ಪಡುತ್ತವೆ. ಈಗ ಒಂದು ಲೇಖನದಲ್ಲಿ ಬದಲಾವಣೆ ಆಗಿರುತ್ತದೆ. ಇದೇ ಮಾದರಿಯಲ್ಲಿ ಎಲ್ಲ ಲೇಖನಗಳನ್ನೂ ಬದಲಾಯಿಸಿ ಬದಲಾವಣೆಗಳನ್ನು ಉಳಿಸಬಹುದು.
Screenshot-AutoWikiBrowser (3)

One thought on “ಕನ್ನಡ ವಿಕಿಪೀಡಿಯದಲ್ಲಿ ಹುಡುಕು ಮತ್ತು ಬದಲಿಸು

  1. This is a good effort; and it should be followed at most care.

Leave a Reply

Your email address will not be published. Required fields are marked *

*
*