ಭೈರಪ್ಪನವರ “ಯಾನ” ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್‌ಗಳ ಮಾತುಕತೆ ನಡೆಸಿದ್ದು -ಹೀಗೆಲ್ಲ ಅವರೇ ಹಿನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅವುಗಳ ಬಗ್ಗೆ ಪತ್ರಿಕೆಯಲ್ಲೀ ಈಗಾಗಲೆ ಬಂದಿದೆ. ಆದುದರಿಂದ ಅಂತರಿಕ್ಷಯಾನ, ಅದರಲ್ಲಿ ನಡೆಯುವ ಚಟುವಟಿಕೆಗಳು, ಅದರಿಂದ ಮನಸ್ಸಿನ ಮೇಲೆ ಆಗುವ ಪರಿಣಾಮ, ಅಲ್ಲಿಯ ಜೀವನ, ಆಹಾರ, ಇತ್ಯಾದಿ ಹಲವು ಕಲ್ಪನೆಗಳು ಮೂಡುತ್ತವೆ. ಆದರೆ ಇದು ವೈಜ್ಞಾನಿಕ ಕಾದಂಬರಿ ಅಲ್ಲ, ಅವುಗಳನ್ನು ಆಶಿಸಬೇಡಿ ಎಂದು ಅವರೇ ಸಂದರ್ಶನದಲ್ಲಿ ಹೇಳಿದುದನ್ನು ಓದಿದ ನೆನಪು. ಅಂದ ಮೇಲೆ ಇದರಲ್ಲಿ ವೈಜ್ಞಾನಿಕ ಮಾಹಿತಿಗಳಿಲ್ಲ, ಇರುವ ವಿವರಣೆಗಳಲ್ಲೂ ಹಲವು ತಪ್ಪುಗಳಿವೆ ಎಂಬುದನ್ನು ಬಿಟ್ಟುಬಿಡೋಣ.
ಇನ್ನುಳಿದಂತೆ ಇದು ಭೈರಪ್ಪನವರ ಇತರೆ ಹಲವು ಕಾದಂಬರಿಗಳಲ್ಲಿ ಈಗಾಗಲೆ ಬಂದು ಹೋದ ಬೀಜ-ಕ್ಷೇತ್ರ ಜಿಜ್ಞಾಸೆ, ಮನುಷ್ಯ-ಮನುಷ್ಯರ ಸಂಬಂಧಗಳ ಜಿಜ್ಞಾಸೆ, ಹೆಣ್ಣು-ಗಂಡು, ಇತ್ಯಾದಿ ಎಲ್ಲ ಭೈರಪ್ಪನವರು ಹಲವು ಸಲ ಬರೆದ ವಿಷಯಗಳೇ ಆಗಿವೆ. ಭೈರಪ್ಪ ಎಂದೊಡನೆ ಅತಿಯಾದ ಅಪೇಕ್ಷೆ ಇಟ್ಟುಕೊಂಡು ಓದಿದರೆ ನಿರಾಸೆ ಖಚಿತ.
ಕನ್ನಡದಲ್ಲಿ ಪ್ರಕಟವಾಗುವ ಹಲವು ಕಾದಂಬರಿಗಳ ಮಟ್ಟಕ್ಕೆ ಹೋಲಿಸಿದರೆ ಇದೇನೂ ಕಳಪೆ ಕಾದಂಬರಿ ಅಲ್ಲ. ಆದರೆ ಭೈರಪ್ಪ ಎಂದೊಡನೆ ಅವರ ಕಾದಂಬರಿಗೆ ನಾವೇ ಒಂದು ಕಲ್ಪಿತ ಮಟ್ಟವನ್ನು ಹಾಕಿಕೊಂಡಿರುತ್ತೇವೆ. ಅದನ್ನು ಇದು ತಲುಪಿಲ್ಲ ಎಂದು ನಿರಾಸೆಯಾಗುತ್ತದೆ.
ಇನ್ನು ಭೈರಪ್ಪನವರನ್ನು ದೂಷಿಸಲು ಕಾತರರಾಗಿರುವವರಿಗೆ ಈ ಕಾದಂಬರಿಯಲ್ಲಿ ಅವರು ಹಲವು ಅನುಕೂಲಗಳನ್ನು ತಾವಾಗಿಯೇ ಮಾಡಿಕೊಟ್ಟಿದ್ದಾರೆ. ಈಗಾಗಲೆ ಒಬ್ಬರು ಅಂತಹ ದೋಷಗಳನ್ನು ಮಾತ್ರವೇ ಹುಡುಕಿ ಜಾಲತಾಣವೊಂದರಲ್ಲಿ ಬರೆದೂ ಇದ್ದಾರೆ.
ಇದರ ,PDF link ತಿಳಿಸಿ. ದಯವಿಟ್ಟು.