ಮನೆಗೆ ಬಂತು ಪಿ.ಸಿ.
ಬಹುಶಃ 1989 ರ ಸಮಯ. ಬಿಎಆರ್‌ಸಿಯು ವಿಜ್ಞಾನಿಗಳಿಗೆ ತಮ್ಮ ಮನೆಯಲ್ಲಿ ಬಳಸಲು ಖಾಸಾ ಗಣಕ ಅರ್ಥಾತ್ ಪರ್ಸನಲ್ ಕಂಪ್ಯೂಟರ್ ಅಥವಾ ಸರಳವಾಗಿ ಪಿಸಿ ಕೊಳ್ಳಲು ಬಡ್ಡಿಯಿಲ್ಲದ ಸಾಲ ಕೊಡಲು ಪ್ರಾರಂಭಿಸಿತು. ಆಗ ನಾನು ಒಂದು ಪಿಸಿ ಕೊಂಡುಕೊಂಡೆ. ಅದು ಪಿಸಿ-ಎಕ್ಸ್‌ಟಿ ಆಗಿತ್ತು. ಅದರಲ್ಲಿದ್ದುದು 20 ಎಂ.ಬಿ.ಯ ಹಾರ್ಡ್‌ಡಿಸ್ಕ್ ಮತ್ತು 640 ಕೆ.ಬಿ.ಯ ಫ್ಲಾಪಿ ಡ್ರೈವ್. ಆಗಿನ್ನೂ ಬಣ್ಣದ ಪರದೆ ಅಂದರೆ ಕಲರ್ ಮೋನಿಟರ್‌ಗಳು ಕೈಗೆಟುಕುವ ಬೆಲೆಗೆ ಮಾರುಕಟ್ಟೆಗೆ ಬಂದಿರಲಿಲ್ಲ. ನಂತರ ಒಂದು ಡಾಟ್ ಮಾಟ್ರಿಕ್ಸ್ ಪ್ರಿಂಟರ್ ಕೂಡ ಕೊಂಡುಕೊಂಡೆ. ಇದ್ದಬಿದ್ದ ತಂತ್ರಾಂಶಗಳನ್ನೆಲ್ಲ ಅಲ್ಲಿಂದಿಲ್ಲಿಂದ ಪ್ರತಿ ಮಾಡಿ ತರುವುದು, ಅವುಗಳನ್ನು ಕಲಿಯುವುದು, ಇವೇ ತುಂಬ ಸಮಯ ತಿಂದವು. ಅದರಲ್ಲೇನೋ ಒಂದು ರೀತಿಯ ಥ್ರಿಲ್ ಇರುತ್ತಿತ್ತು. ಆಗ ಬಳಕೆಯಲ್ಲಿದ್ದ ತಂತ್ರಾಂಶಗಳು – ಡಿಬೇಸ್-3, ಲೋಟಸ್ 1-2-3, ವರ್ಡ್‌ಸ್ಟಾರ್, ಇತ್ಯಾದಿ. ಪುಟವಿನ್ಯಾಸ ಅಂದರೆ ಡಿಟಿಪಿ ಮಾಡಲು ಬಳಸುತ್ತಿದ್ದುದು ಜೆಮ್ ವೆಂಚುರಾ. ಗ್ರಾಫಿಕ್ಸ್‌ಗೆ ಬಳಸುತ್ತಿದ್ದುದು ಕೋರೆಲ್‌ಡ್ರಾ 3. ಇಂಜಿಯರಿಂಗ್ ಡ್ರಾಯಿಂಗ್‌ಗಳಿಗೆ ಆಟೋಕ್ಯಾಡ್ 2.0. ಆಟಗಳು ಆಗಷ್ಟೆ ಬರಲು ಪ್ರಾರಂಭಿಸಿದ್ದವು. ಆಗಿನ ತುಂಬ ಜನಪ್ರಿಯ ಆಟಗಳೆಂದರೆ ಟೆಟ್ರಿಸ್, ಪ್ಯಾಕ್‌ಮ್ಯಾನ್, ಪ್ರಿನ್ಸ್ ಆಫ್ ಪರ್ಷಿಯ ಇತ್ಯಾದಿ.
ಗಣಕದಲ್ಲಿ ಕನ್ನಡ
ಒಂದು ದಿನ ಪತ್ರಿಕೆಯಲ್ಲಿ ಒಂದು ಜಾಹೀರಾತು ನೋಡಿದೆ. ಅದು ಆಕೃತಿ ಎಂಬ ಡಿಟಿಪಿ ತಂತ್ರಾಂಶದ್ದು. ಅದು ಭಾರತದ 11 ಭಾಷೆಗಳಲ್ಲಿ ಲಭ್ಯ ಎಂದಿತ್ತು. ಅದರ ವಿಳಾಸ ಹುಡುಕಿಕೊಂಡು ಗೊರೆಗಾಂವ್‌ಗೆ ಹೋದೆ. ಅದರ ಬೆಲೆ ಆಗ ರೂ.11,000 ಇತ್ತು. ನಮ್ಮ ಕನ್ನಡ ಸಂಘದ ವತಿಯಿಂದ ಅದನ್ನು ಕೊಂಡುಕೊಳ್ಳುವ ತೀರ್ಮಾನ ಮಾಡಿದೆವು. ಮುಂದುವರೆಸುವ ಮೊದಲು ಬಿಏಆರ್‌ಸಿ ಕನ್ನಡ ಸಂಘ ಮತ್ತು ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಹೇಳಬೇಕು.
ಭಾಭಾ ಪರಮಾಣು ಸಂಶೋಧನಾ ಕೇಂದ್ರದ (ಬಿಏಆರ್‌ಸಿ) ಕನ್ನಡ ವಿಜ್ಞಾನಿಗಳ ಸಂಘವೊಂದಿತ್ತು. ನಾವು ಕನ್ನಡ ಭಾಷೆಯಲ್ಲಿ ವಿಜ್ಞಾನ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದ್ದವು. ಬೆಳಗು ಎಂಬ ವಿಜ್ಞಾನ ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದೆವು. ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳ ಪುಸ್ತಕಗಳನ್ನೂ ಹೊರತರುತ್ತಿದ್ದೆವು. ಇವುಗಳನ್ನು ಮುಂಬಯಿಯಲ್ಲಿದ್ದ ಕನ್ನಡ ಮುದ್ರಣಾಲಯಗಳಲ್ಲಿ ಮುದ್ರಿಸುತ್ತಿದ್ದವು. ಮುಂಬಯಿಯಲ್ಲಿ ಹಲವು ಕನ್ನಡ ಸಂಘಗಳು, ಶಾಲೆಗಳು, ಪತ್ರಿಕೆಗಳು, ಮ್ಯಾಗಝಿನ್‌ಗಳು ಎಲ್ಲ ಇದ್ದವು. ಎಲ್ಲವೂ ಮುಂಬಯಿಯಲ್ಲೇ ಮುದ್ರಣವಾಗುತ್ತಿದ್ದವು. ನನಗೆ ನೆನಪಿದ್ದಂತೆ 3-4 ಕನ್ನಡ ಮುದ್ರಕರಿದ್ದರು. ಅಲ್ಲಿಯ ಮುದ್ರಕರಿಗೆ ದೊಡ್ಡ ಸಮಸ್ಯೆಯಾಗುತ್ತಿದ್ದುದು ನಮ್ಮ ಪತ್ರಿಕೆ ಹಾಗೂ ಪುಸ್ತಕಗಳ ಮುದ್ರಣ. ನಾವು ವಿಜ್ಞಾನದ ಚಿತ್ರಗಳು, ಕೋಷ್ಟಕಗಳು, ಸಮೀಕರಣಗಳನ್ನೆಲ್ಲ ಬಳಸುತ್ತಿದ್ದೆವು. ಇವುಗಳನ್ನು ಆಗಿನ ಕಾಲದ ಅಚ್ಚಿನ ಮೊಳೆಗಳ ಮುದ್ರಕಗಳಲ್ಲಿ (ಲೆಟರ್ ಪ್ರೆಸ್) ಮುದ್ರಿಸಲು ಅವರಿಗೆ ಬಹಳ ಕಷ್ಟವಾಗುತ್ತಿತ್ತು. ಪ್ರತಿಯೊಂದಕ್ಕೂ ಪ್ರತ್ಯೇಕ ಬ್ಲಾಕ್ ಮಾಡಿಸಿ ಮುದ್ರಿಸಬೇಕಿತ್ತು. ಹಲವು ತಪ್ಪುಗಳು ಆಗುತ್ತಿದ್ದವು. ಈ ಕಷ್ಟವನ್ನು ನೋಡಿ ನೋಡಿ ಬೇಸತ್ತಿದ್ದ ನಮ್ಮ ಕನ್ನಡ ಸಂಘದ ವಿಜ್ಞಾನಿಗಳಿಗೆ ಕನ್ನಡದ ಡಿಟಿಪಿ ತಂತ್ರಾಂಶ ಕೊಂಡು ಬಳಸೋಣ ಎಂಬ ನನ್ನ ಸಲಹೆ ಆಪ್ಯಾಯಮಾನವಾಗಿತ್ತು.
ನನ್ನ ಪಿಸಿಯಲ್ಲಿ ಆಕೃತಿ ಕನ್ನಡ ಡಿಟಿಪಿ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಲಾಯಿತು. ನಾನು ಮತ್ತು ನನ್ನ ಹೆಂಡತಿ ಕನ್ನಡ ಬೆರಳಚ್ಚು (ಟೈಪಿಂಗ್) ಕಲಿತೆವು. ಆಗ ಬಳಕೆಯಲ್ಲಿದ್ದುದು ಇನ್‌ಸ್‌ಕ್ರಿಪ್ಟ್ ಕೀಲಿಮಣೆ ವಿನ್ಯಾಸ. ಡಾಸ್‌ನಲ್ಲಿ ಟೈಪ್ ಮಾಡಿ ನಂತರ ಅದನ್ನು ವೆಂಚುರಾದಲ್ಲಿ ಪುಟವಿನ್ಯಾಸ (ಡಿಟಿಪಿ) ಮಾಡುತ್ತಿದ್ದೆ. ಕೊನೆಗೆ ಪ್ರಿಂಟ್ ಟು ಫೈಲ್ ಎಂದು ಮಾಡಿ ಆ ಫೈಲ್‌ಗಳನ್ನು ಫ್ಲಾಪಿಯಲ್ಲಿ ಹಾಕಿ ಮುದ್ರಕರಲ್ಲಿಗೆ ಹೋಗಿ ಅಲ್ಲಿ ಟ್ರೇಸಿಂಗ್ ಶೀಟ್‌ನಲ್ಲಿ ಪ್ರಿಂಟ್ ಮಾಡಿಸಿ ಕೊನೆಗೆ ಆಫ್‌ಸೆಟ್ ವಿಧಾನದಲ್ಲಿ ಮುದ್ರಣ ಮಾಡಿಸುತ್ತಿದ್ದೆವು. ಆಗ ನಾನು ಕೋರೆಲ್‌ಡ್ರಾ ಎಲ್ಲ ಕಲಿತೆ. ಯಾಕೆಂದರೆ ನಮಗೆ ವಿಜ್ಞಾನದ ಲೇಖನಗಳಿಗೆ ಅಗತ್ಯವಾದ ಚಿತ್ರಗಳನ್ನು ಮಾಡಬೇಕಿತ್ತು. ಮುಂಬಯಿಯಲ್ಲಿ ಕನ್ನಡ ಡಿಟಿಪಿ ಪ್ರಾರಂಭಿಸಿದವನು ನಾನು ಎನ್ನಬಹುದು.
ಮುಂಬಯಿಯಲ್ಲಿ ನಾವು ಯಾವ ಮುದ್ರಕರಿಂದ ಪುಸ್ತಕ ಮಾಡಿಸುತ್ತದ್ದೆವೋ (ಅವರೆಲ್ಲ ಕನ್ನಡಿಗರು) ಅವರಿಗೆ ಈ ಕನ್ನಡ ಡಿಟಿಪಿ ತುಂಬ ಉಪಯುಕ್ತ ಎಂದು ಅರಿವಾಯಿತು. ಕನ್ನಡದ ಪುಸ್ತಕಗಳನ್ನು ಡಿಟಿಪಿ ಮಾಡಿ ಕೊಡಲು ನನ್ನನ್ನು ಕೇಳಿಕೊಂಡರು. ಸಾಯಂಕಾಲ ಮತ್ತು ವಾರಾಂತ್ಯ ಈ ಕೆಲಸ ಮಾಡುತ್ತಿದ್ದೆ. ಕೊನೆಗೆ ಈ ರಗಳೆ ಯಾಕೆ ಎಂದು ಮುದ್ರಕರು ಕಳಿಸಿಕೊಟ್ಟ ಒಂದಿಬ್ಬರಿಗೆ ಕನ್ನಡ ಡಿಟಿಪಿ ಹೇಳಿಕೊಟ್ಟೆ. ಆ ನಂತರ ನಮ್ಮ ಮನೆಯಲ್ಲಿ ನಮ್ಮ ಕನ್ನಡ ಸಂಘದ ಕೆಲಸಕ್ಕೆ ಮಾತ್ರ ಕನ್ನಡ ಡಿಟಿಪಿ ಮಾಡುತ್ತಿದ್ದೆವು. ಕನ್ನಡ ಡಿಟಿಪಿಯಲ್ಲಿ ಪುಟವಿನ್ಯಾಸ ನಾನು ಮಾಡುತ್ತಿದ್ದೆ, ಟೈಪಿಂಗ್ ನನ್ನ ಹೆಂಡತಿ ಮಾಡುತ್ತಿದ್ದಳು.
(ಗಣಕಾವಲೋಕನದ ಇತರೆ ಸಂಚಿಕೆಗಳನ್ನು ಓದಲು ಕೆಳಗೆ ಕಾಣುವ ಗಣಕಾವಲೋಕನ ಎಂಬ ಟ್ಯಾಗ್ ಮೇಲೆ ಕ್ಲಿಕ್ ಮಾಡಿ).