Home » Kannada » ಕನ್ನಡ ಹೋರಾಟಗಾರರಿಗೆ

ಕನ್ನಡ ಹೋರಾಟಗಾರರಿಗೆ

ಕನ್ನಡ ಭಾಷೆಯನ್ನು ರಕ್ಷಿಸಲು ಹೋರಾಡಲು ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆಯೋ ಅದಕ್ಕಿಂತಲೂ ಹೆಚ್ಚು ವೇದಿಕೆ, ಪಡೆಗಳಿವೆ. ಹಲವು ಮಂದಿಗೆ ಇದು ಪೂರ್ಣಪ್ರಮಾಣದ ಉದ್ಯೋಗವಾಗಿದೆ. ಹಾಗಿದ್ದರೂ ಕನ್ನಡದ ಸ್ಥಿತಿ ಉತ್ತಮವಾಗಿಲ್ಲ. ಈ ಹೋರಾಟಗಾರರು ಸಾಮಾನ್ಯವಾಗಿ ಪ್ರತಿಭಟನೆಗಳನ್ನು ಏರ್ಪಡಿಸುವಲ್ಲಿ ಸಿದ್ಧಹಸ್ತರು. ಪ್ರತಿಭಟನೆಗಳು ಅತೀ ಅಗತ್ಯ ಎಂದು ವಾದಿಸುವವರು. ಪ್ರತಿಭಟನೆ ಹೋರಾಟಗಳಿಂದ ಕನ್ನಡ ಭಾಷೆಯ ಉಳಿದು ಬೆಳೆಯುತ್ತದೆಯೇ? ಅದು ನಿಜವಾಗಿದ್ದರೆ ಇಷ್ಟು ಹೊತ್ತಿಗೆ ಈ ಎಲ್ಲ ವೇದಿಕೆ, ಪಡೆಗಳು ಬಾಗಿಲು ಹಾಕಬೇಕಾಗಿತ್ತು. ಯಾಕೆಂದರೆ ಕನ್ನಡ ಬೆಳೆದು ಅವುಗಳ ಅಗತ್ಯವಿಲ್ಲದಾಗುತ್ತಿತ್ತು. ಹಾಗೇನೂ ಆದಂತಿಲ್ಲ. ಅಥವಾ ಹೋರಾಟ ಇನ್ನೂ ಫಲ ನೀಡಿಲ್ಲ, ಫಲ ನೀಡುವ ಹಾದಿಯಲ್ಲಿದ್ದೇವೆಯಷ್ಟೆ ಎಂದು ಹೇಳುತ್ತೀರಾ? ಸರಿ ಸ್ವಾಮಿ, ಒಪ್ಪೋಣ. ನೀವೆಲ್ಲ ದೊಡ್ಡ ದೊಡ್ಡ ಹೋರಾಟಗಳನ್ನು ಮಾಡಿದವರು, ಮಾಡುತ್ತಿರುವವರು. ಹೋರಾಟ ಮಾಡಲು ಇಲ್ಲಿ ಒಂದೆರಡು ವಿಷಯಗಳಿವೆ. ಸ್ವಲ್ಪ ಗಮನ ಹರಿಸುತ್ತೀರಾ?

 

ಮಾಹಿತಿ ತಂತ್ರಜ್ಞಾನ ಮತ್ತು ಅಂತರಜಾದಲ್ಲಿ ಕೆಲವು ಕಡೆ ಕನ್ನಡವನ್ನು ಕಡೆಗಣಿಸಲಾಗಿದೆ. ಇದನ್ನು ಸರಿಪಡಿಸಲು ನಾವು ಕೆಲವು ತಂತ್ರಜ್ಞರು ಹಲವು ಸಲ ಇ-ಪ್ರಯತ್ನ ಮಾಡಿದ್ದೇವೆ (ಇ-ಮೈಲ್, ಟ್ವಿಟ್ಟರ್, ಬ್ಲಾಗ್, ಇತ್ಯಾದಿ). ಅವು ಫಲ ನೀಡಲಿಲ್ಲ. ಆದುದರಿಂದ ಕನ್ನಡ ಹೋರಾಟಗಾರರು ಇಲ್ಲಿ ಹೋರಾಟ ಮಾಡಬಹುದು. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡುತ್ತಿದ್ದೇನೆ.

 

ಗೂಗ್ಲ್ ನ್ಯೂಸ್

ಹಲವು ಸುದ್ದಿ ಪೋರ್ಟಲ್ ಮತ್ತು ಸುದ್ದಿ ಪತ್ರಿಕೆಗಳ ಜಾಲತಾಣಗಳಿಂದ ಸುದ್ದಿಗಳ ಮುಖ್ಯಾಂಶವನ್ನು ಕಾಲಕಾಲಕ್ಕೆ ನವೀಕರಿಸಿ ನೀಡುವ ಜಾಲತಾಣ ಗೂಗ್ಲ್ ನ್ಯೂಸ್ (news.google.com). ಇದರಲ್ಲಿ ಕೆಲವು ಭಾರತೀಯ ಭಾಷೆಗಳಿವೆ. ಆದರೆ ಕನ್ನಡವಿಲ್ಲ. ಹಲವು ವರ್ಷಗಳಿಂದ ಗೂಗ್ಲ್ ಜೊತೆ ನಾನು ಈ ಬಗ್ಗೆ ಹಲವು ಸಲ ಮಾತನಾಡಿದ್ದೇನೆ. ಮಾಹಿತಿ ತಂತ್ರಜ್ಞಾನದಲ್ಲಿ ಮತ್ತು ಅಂತರಜಾಲದಲ್ಲಿ ಭಾರತೀಯ ಭಾಷೆಗಳ ಸ್ಥಿತಿಗತಿ ಬಗೆಗಿನ ಹಲವು ವಿಚಾರಸಂಕಿರಣಗಳಲ್ಲಿ ನಾನು ಭಾಗವಹಿಸಿದ್ದೆ. ಅಲ್ಲೆಲ್ಲ ಗೂಗ್ಲ್ ಪ್ರತಿನಿಧಿಗಳು ಸಿಕ್ಕದರೆ ಈ ಬಗ್ಗೆ ಅವರನ್ನು ವಿಚಾರಿಸಿದ್ದೇನೆ. ಕೆಲವು ವರ್ಷಗಳ ಹಿಂದೆ ಕನ್ನಡದ ಪತ್ರಿಕೆಗಳ ಜಾಲತಾಣಗಳು ಮತ್ತು ಕನ್ನಡದ ಸುದ್ದಿ ಪೋರ್ಟಲ್‌ಗಳ ಸಂಖ್ಯೆ ತುಂಬ ಕಡಿಮೆ ಇತ್ತು. ನನ್ನ ಪ್ರಶ್ನೆಗೆ ಗೂಗ್ಲ್‌ನವರ ಸಿದ್ಧ ಉತ್ತರವೇನಿರುತ್ತಿತ್ತೆಂದರೆ “ಕನ್ನಡ ಭಾಷೆಯ ಸುದ್ದಿ ಜಾಲತಾಣಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ” ಎಂದು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ಆದರೂ ಗೂಗ್ಲ್‌ನವರು ಕನ್ನಡದ ಸುದ್ದಿಗಳನ್ನು ನೀಡುತ್ತಿಲ್ಲ. ಗೂಗ್ಲ್‌ನವರ ಜೊತೆ ಈ ಬಗ್ಗೆ ಹೋರಾಡಬೇಕಾಗಿದೆ.

ಗೂಗ್ಲ್ ಆಡ್‌ಸೆನ್ಸ್

ನೀವು ಜಾಲತಾಣಗಳನ್ನು ತೆರೆದಾಗ ಬದಿಯಲ್ಲಿ ಅಥವಾ ಮಧ್ಯದಲ್ಲಿ ಅಲ್ಲಲ್ಲಿ ಜಾಹೀರಾತುಗಳು ಬರುವುದನ್ನು ಗಮನಿಸಿರಬಹುದು. ಇವುಗಳಲ್ಲಿ ಕೆಲವು ಗೂಗ್ಲ್ ಮೂಲಕ ಬಂದಿರುತ್ತವೆ. ಈ ಜಾಹೀರಾತನ್ನು ಕ್ಲಿಕ್ ಮಾಡಿದರೆ ಆ ಜಾಲತಾಣವನ್ನು ನಿರ್ಮಿಸಿದವನಿಗೆ ಗೂಗ್ಲ್ ಹಣ ನೀಡುತ್ತದೆ. ಗೂಗ್ಲ್‌ಗೆ ಜಾಹೀರಾತುದಾರರು ಹಣ ನೀಡುತ್ತಾರೆ. ಗೂಗ್ಲ್‌ನವರು ಒಂದು ಕ್ಲಿಕ್‌ಗೆ ಇಂತಿಷ್ಟು ಎಂದು ಹಣ ನೀಡುತ್ತಾರೆ. ನೀವು ಗಮನಿಸರಬಹದು. ಈ ಜಾಹೀರಾತು ಸಾಮಾನ್ಯವಾಗಿ ನೀವು ಓದುತ್ತಿರುವ ವಿಷಯದ ಅಥವಾ ಓದುತ್ತಿರುವ ಲೇಖನದಲ್ಲಿ ಬರುವ ಪದಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಗೂಗ್ಲ್‌ನವರು ಏನು ಮಾಡುತ್ತಾರೆ ಅಂದರೆ ಲೇಖನದಲ್ಲಿರುವ ಪದಗಳಿಗೆ ಸಂಬಂಧಿಸಿದ ವಿಷಯದ ಜಾಹೀರಾತನ್ನು ಜಾಲತಾಣಕ್ಕೆ ತಳ್ಳುತ್ತಾರೆ. ಇದಕ್ಕಾಗಿ ಅವರು ಹಲವು ಪದಗಳ ಪಟ್ಟಿಯನ್ನು ಇಟ್ಟುಕೊಂಡಿರುತ್ತಾರೆ. ಜಾಹೀರಾತುದಾರರು ಈ ಪದಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗೂಗ್ಲ್ ಜಾಹೀರಾತು ನಿಮ್ಮ ಜಾಲತಾಣದಲ್ಲಿ ಬರಬೇಕು ಮತ್ತು ಆ ಮೂಲಕ ನಿಮಗೆ ಸ್ವಲ್ಪ ಹಣ ಸಂಪಾದನೆ ಆಗಬೇಕಾದರೆ ನೀವು ಗೂಗ್ಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕೆ ಗೂಗ್ಲ್ ಆಡ್‌ಸೆನ್ಸ್‌ ಎನ್ನುತ್ತಾರೆ. ಈ ಗೂಗ್ಲ್ ಆಡ್‌ಸೆನ್ಸ್‌ನಲ್ಲಿ ಕನ್ನಡವಿಲ್ಲ. ಅಂದರೆ ನಿಮ್ಮ ಜಾಲತಾಣದ ಭಾಷೆ ಕನ್ನಡವಾಗಿದ್ದಲ್ಲಿ ನಿಮ್ಮ ಜಾಲತಾಣದಲ್ಲಿ ಗೂಗ್ಲ್ ಮೂಲಕ ಜಾಹೀರಾತು ಮೂಡಿಬರುವುದಿಲ್ಲ ಮತ್ತು ಆ ಮೂಲಕ ನಿಮಗೆ ಹಣ ಸಂಪಾದನೆ ಆಗುವುದಿಲ್ಲ. ಅರ್ಥಾತ್ ಕನ್ನಡದಲ್ಲಿ ಬ್ಲಾಗ್ ಬರೆಯುವ ಮೂಲಕ ಅಥವಾ ಕನ್ನಡ ಜಾಲತಾಣ ನಡೆಸುವ ಮೂಲಕ ನಿಮಗೆ ಗೂಗ್ಲ್ ಜಾಹೀರಾತು ಮೂಲಕ ಹಣ ಸಂಪಾದನೆ ಸಾಧ್ಯವಿಲ್ಲ. ಗೂಗ್ಲ್‌ನವರ ಜೊತೆ ಈ ಬಗ್ಗೆ ಹೋರಾಡಬೇಕಾಗಿದೆ.

ಅಮೆಝಾನ್ ಕಿಂಡಲ್

ಈಗ ಇ-ಪುಸ್ತಕಗಳ (e-book) ಕಾಲ ಬಂದಿದೆ. ಇ-ಪುಸ್ತಕಗಳನ್ನು ಓದಲು ಇ-ಬುಕ್ ರೀಡರ್ ಎಂಬ ಸಾಧನ ದೊರೆಯುತ್ತದೆ. ಇವುಗಳಲ್ಲಿ ಪ್ರಮುಖವಾದುದು ಅಮೆಝಾನ್ ಕಿಂಡಲ್. ಇ-ಪುಸ್ತಕದಲ್ಲಿ ಹಲವು ಸವಲತ್ತುಗಳಿವೆ. ಅಕ್ಷರಗಳನ್ನು ಚಿಕ್ಕದು ದೊಡ್ಡದು ಮಾಡುವುದು, ಪುಟ ಮಗುಚಿದ ಅನುಭವ, ಓದುತ್ತಿರುವ ವಿಷಯದ ಬಗ್ಗೆ ಅಲ್ಲಲ್ಲೇ ಟಿಪ್ಪಣಿ ಬರೆಯುವುದು, ಪಠ್ಯದಿಂದ ಧ್ವನಿಗೆ, ಹೀಗೆ ಹಲವು ಉಪಯುಕ್ತ ಸವಲತ್ತುಗಳಿವೆ. ಆರಂಭದಲ್ಲಿ ಅಮೆಝಾನ್ ಕಿಂಡಲ್‌ನಲ್ಲಿ ಕನ್ನಡ ಫಾಂಟ್ ಇರುತ್ತಿರಲಿಲ್ಲ. ಅಂದರೆ ಕನ್ನಡದ ಇ-ಪುಸ್ತಕ ಓದಬೇಕಿದ್ದರೆ ಅದನ್ನು ಪಿಡಿಎಫ್ ಆಗಿ ಪರಿವರ್ತಿಸಿ ಬಳಸಬೇಕಾಗಿತ್ತು. ಪಿಡಿಎಫ್ ಪುಸ್ತಕದಲ್ಲಿ ಇ-ಬುಕ್ ರೀಡರ್‌ನ ಹಲವು ಸವಲತ್ತುಗಳು ದೊರೆಯುವುದಿಲ್ಲ. ಈಗ ಆ ಸಮಸ್ಯೆಯಿಲ್ಲ. ಹೊಸ ಕಿಂಡಲ್‌ನಲ್ಲಿ ಕನ್ನಡದ ಇ-ಪುಸ್ತಕವನ್ನು ಓದಬಹುದು. ನೀವು ಸ್ವತಃ ಲೇಖಕರಾಗಿದ್ದರೆ ಅಮೆಜಾನ್‌ ಕಿಂಡಲ್‌ಗೆ ನೀವೇ ಪುಸ್ತಕ ಬರೆಯಬಹುದು. ಇದಕ್ಕಾಗಿ ನೀವು ಅಮೆಝಾನ್ ಕಿಂಡಲ್‌ನಲ್ಲಿ ಲೇಖನ ಎಂದು ನೋಂದಣಿ ಮಾಡಿಕೊಂಡು ಕಿಂಡಲ್ ಕ್ರಿಯೇಟರ್ ಎಂಬ ತಂತ್ರಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಸಬೇಕು. ಆದರೆ ಇದರಲ್ಲಿ ಕನ್ನಡ ಭಾಷೆಯ ಆಯ್ಕೆ ಇಲ್ಲ. ಅಮೆಝಾನ್‌ನ ಕಿಂಡಲ್‌ ಪುಸ್ತಕಗಳ ವಿಭಾಗಕ್ಕೆ ಹೋಗಿ ಭಾರತೀಯ ಭಾಷೆಗಳ ವಿಭಾಗಕ್ಕೆ ಹೋದರೆ ಅಲ್ಲಿ ಕನ್ನಡ ಎಂಬ ಆಯ್ಕೆ ಇಲ್ಲ. ಈ ಬಗ್ಗೆ ಅಮೆಝಾನ್ ಜೊತೆ ಹಲವು ಸಲ ಇ-ಮಾತುಕತೆ ಆಗಿದೆ. ಏನೂ ಪ್ರಯೋಜನವಾಗಿಲ್ಲ. ಕನ್ನಡ ಸಾಹಿತಿಗಳು ಕನ್ನಡದಲ್ಲಿ ಪುಸ್ತಕ ಬರೆದು ಅವನ್ನು ಕಿಂಡಲ್ ಆವೃತ್ತಿಯನ್ನಾಗಿಸಿ ಅದನ್ನು ಅಮೆಝಾನ್‌ನಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುವಂತಿಲ್ಲ. ಅಮೆಝಾನ್ ಜೊತೆ ಈ ಬಗ್ಗೆ ಹೋರಾಡಬೇಕಾಗಿದೆ.

ಕನ್ನಡ ಹೋರಾಟಗಾರರು ಗಮನಿಸುತ್ತಿದ್ದೀರಾ?

Leave a Reply

Your email address will not be published. Required fields are marked *

*
*