Home » Kannada » ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ

ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ

‌ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ

 

ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಸ್ಕೂಟರ್ ಅನ್ನು ೨೦ ವರ್ಷ ಓಡಿಸಿ ನಂತರವೂ ಲಾಭಕ್ಕೆ ಮಾರುತ್ತಿದ್ದರೆಂದರೆ ಈಗಿನ ಕಾಲದವರಿಗೆ ನಂಬಲು ಕಷ್ಟವಾಗಬಹುದು. ನಾನು ಆ ಕಾಲದವನು. ನನ್ನ ಬಜಾಜ್ ಸೂಪರ್ ಸ್ಕೂಟರಿನ ಟೂಲ್ ಬಾಕ್ಸ್‌ನಲ್ಲಿ ಕ್ಲಚ್ ಮತ್ತು ಬ್ರೇಕ್ ಕೇಬಲ್‌ಗಳು ಯಾವಾಗಲೂ ಇರುತ್ತಿದ್ದವು. ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಸ್ಪಾರ್ಕ್ ಪ್ಲಗ್ ಸ್ವಚ್ಛ ಮಾಡುವುದು, ಕೇಬಲ್ ಬದಲಿಸುವುದು ಸಾಮಾನ್ಯ ದೃಶ್ಯಗಳಾಗಿರುತ್ತಿದ್ದವು. ನಾನಂತೂ ಪಾಯಿಂಟ್ ಸೆಟ್ ಕೂಡ ಸರಿಪಡಿಸುತ್ತಿದ್ದೆ. ಅದು ಅಂದಿನ ಕಾಲ! ಈಗ ಕಾಲ ಬದಲಾಗಿದೆ. ಒಂದು ಸ್ಕೂಟರನ್ನು ೫ ವರ್ಷ, ಅಬ್ಬಬ್ಬಾ ಅಂದರೆ ೧೦ ವರ್ಷಕ್ಕಿಂತ ಹೆಚ್ಚು ಯಾರೂ ಓಡಿಸುವುದಿಲ್ಲ. ಹಲವು ನಮೂನೆಯ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿವೆ. ಒಂದು ಕಾಲದಲ್ಲಿ ಸ್ಕೂಟರ್ ಅಂದರೆ ಬಜಾಜ್ ಅನ್ನುತ್ತಿದ್ದರೆ ಇಂದು ಬಜಾಜ್ ಕಂಪೆನಿ ಸ್ಕೂಟರನ್ನೇ ತಯಾರಿಸುತ್ತಿಲ್ಲ.

 

ನಾನು ಬೆಂಗಳೂರಿಗೆ ಬಂದ ಹೊಸದರಲ್ಲಿ ಬಜಾಜ್ ಸೂಪರನ್ನು ಮೂಲೆಗುಂಪು ಮಾಡಿ ಕೈನೆಟಿಕ್ ತೆಗೆದುಕೊಂಡೆ. ಅದನ್ನು ೫ ವರ್ಷ ಓಡಿಸಿ ನಂತರ ಅದರದೇ ಇನ್ನೊಂದು ಮಾದರಿ ತೆಗೆದುಕೊಂಡೆ. ಅದಾದ ನಂತರ ಮಗಳಿಗೆ ಸ್ಕೂಟರ್ ತೆಗೆದುಕೊಳ್ಳಲು ಹೊರಟಾಗ ಮಾರುಕಟ್ಟೆಯಲ್ಲಿರುವ ಹಲವು ಸ್ಕೂಟರುಗಳ ಪರಿಶೀಲನೆ ನಡೆಸಿದೆವು. ಮುಖ್ಯವಾಗಿ ಅವಳಿಗೆ ಕಡಿಮೆ ಎತ್ತರದ ಸ್ಕೂಟರ್ ಬೇಕಿತ್ತು. ಆಗ ನಾವು ಅಂತಿಮವಾಗಿ ತೀರ್ಮಾನಿಸಿದ್ದು ಹೀರೋ ಪ್ಲೆಶರ್ ಯಾಕೆಂದರೆ ಅದು ಎಲ್ಲಕಿಂತ ಕಡಿಮೆ ಎತ್ತರದ್ದಾಗಿತ್ತು. ಈ ಒಂದು ವಿಷಯ ಮುಖ್ಯವಲ್ಲವಾಗಿದ್ದರೆ ನಾವು ಕೊಳ್ಳಲು ಯೋಚಿಸಿದ್ದು ಟಿವಿಎಸ್ ಜ್ಯುಪಿಟರ್. ಅದು ಆಗ ತಾನೆ ಮಾರುಕಟ್ಟೆಗೆ ಬಂದಿತ್ತು. ಅದರ ಗುಣಲಕ್ಷಣಗಳು ನಮಗೆ ಹಿಡಿಸಿದ್ದವು.

 

ಈ ಪೀಠಿಕೆಯ ನಂತರ ಟಿವಿಎಸ್ ಬಗ್ಗೆ ಬರೆಯುತ್ತೇನೆ. ಬೆಂಗಳೂರಿನಿಂದ ಸುಮಾರು ೫೦ ಕಿ.ಮೀ. ದೂರದಲ್ಲಿ ಹೊಸೂರು ಪಕ್ಕ, ಕೆಲಮಂಗಲಕ್ಕೆ ಹೋಗುವ ದಾರಿಯಲ್ಲಿ ಕರ್ನಾಟಕದ ಗಡಿ ದಾಟಿದ ತಕ್ಷಣ, ತಮಿಳುನಾಡಿನಲ್ಲಿ ಟಿವಿಎಸ್ ಫ್ಯಾಕ್ಟರಿ ಇದೆ. ನಾವು ಈ ದಾರಿಯಲ್ಲಿ ಸುಮಾರು ವರ್ಷಗಳಿಂದ ಹೋಗುತ್ತಿದ್ದೇವೆ. ಯಾಕೆಂದರೆ ಕೆಲಮಂಗಲದಿಂದ ೭ ಕಿ.ಮೀ. ದೂರದಲ್ಲಿ ಅಣುಸೋಣಿ ಎಂಬಲ್ಲಿ ಸ್ವಾಮಿ ವಿರಾಜೇಶ್ವರ ಅವರ ಹಂಸಾಶ್ರಮವಿದೆ. ಅದರ ಬಗ್ಗೆ ಪ್ರತ್ಯೇಕ ಬರೆಯಬೇಕು. ಹಾಗೆ ಹೋಗುವಾಗೆಲ್ಲ ಟಿವಿಎಸ್ ಫ್ಯಾಕ್ಟರಿ ಮುಂದೆಯೇ ಹೋಗುವುದು. ಇಂಡಿಬ್ಲಾಗರ್‌ನವರು ಟಿವಿಎಸ್ ಫ್ಯಾಕ್ಟರಿಗೆ ಭೇಟಿ ಇದೆ ಬರುತ್ತೀರಾ ಎಂದಾಗ ನನಗೆ ಗೊತ್ತಿರುವ ಸ್ಥಳವೇ ಎಂದು ಅನ್ನಿಸಿತು. ಕೂಡಲೇ ಹ್ಞೂಂ ಅಂದೆ. ಜುಲೈ ೧೦, ೨೦೧೮ರಂದು ಎಂಟು ಜನ ಬ್ಲಾಗರುಗಳ ಭೇಟಿಯಲ್ಲಿ ನಾನೂ ಸೇರಿದ್ದೆ.

 

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಬರುವ, ಇಂಡಿಬ್ಲಾಗರ್‌ನವರು ಏರ್ಪಡಿಸಿದ್ದ,  ವ್ಯಾನ್‌ನಲ್ಲಿ ನಾನು ಹೋಗದೆ ನಾನೇ ಅಲ್ಲಿಗೆ ಕಾರು ಚಲಾಯಿಸಿಕೊಂಡು ಹೋದೆ. ಹೇಳಿದ ಸಮಯಕ್ಕೆ ಸರಿಯಾಗಿ ನಾನು ಅಲ್ಲಿದ್ದೆ. ಆದರೆ ಬೆಂಗಳೂರಿನ ಕುಪ್ರಸಿದ್ಧ ಟ್ರಾಫಿಕ್‌ನಿಂದಾಗಿ ವ್ಯಾನ್ ಒಂದೂಕಾಲು ಗಂಟೆ ತಡವಾಗಿ ಬಂತು. ಅಷ್ಟು ಹೊತ್ತಿಗೆ ನಾನು ಫೋನಿನಲ್ಲಿ ಒಂದು ಸಿನಿಮಾ ನೋಡಿ ಮುಗಿಸಿದ್ದೆ?.

 

ಟಿವಿಎಸ್ ಫ್ಯಾಕ್ಟರಿ ೪೦೫ ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿ ಅವರು ತಮ್ಮ ಎಲ್ಲ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಾರೆ. ಟಿವಿಎಸ್‌ನವರು ಮಾರುತ್ತಿರುವ ಸ್ಕೂಟರುಗಳಲ್ಲಿ ಅತಿ ಜನಪ್ರಿಯವಾದುದು ಮತ್ತು ಅಧಿಕ ಮಾರಾಟವಾಗುತ್ತಿರುವುದು ಜ್ಯುಪಿಟರ್. ಆ ಸ್ಕೂಟರೂ ಇಲ್ಲೇ ತಯಾರಾಗುವುದು. ಮೊದಲಿಗೆ ನಮ್ಮನ್ನೆಲ್ಲ ಒಳಗೆ ಕೆರದುಕೊಂಡು ಹೋಗಿ ಒಂದು ಸೆಮಿನಾರ್ ಹಾಲಿನಲ್ಲಿ ಕುಳ್ಳಿರಿಸಿ ಕಂಪೆನಿ ಮತ್ತು ಸ್ಕೂಟರ್ ಬಗ್ಗೆ ಸ್ಲೈಡ್ ಶೋ ಸಮೇತ ವಿವರಿಸಿದರು.

 

ಜ್ಯುಪಿಟರ್ ಸ್ಕೂಟರ್ ೨೦೧೩ ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಂತು. ಕಂಪೆನಿಯವರು ಹೇಳಿಕೊಳ್ಳುವಂತೆ ಇದು ೩೦ ರಿಂದ ೪೫ ವರ್ಷ ಪ್ರಾಯದ ಮಧ್ಯಮವರ್ಗದ ಭಾರತೀಯ ಸಂಸಾರಸ್ತ ಗಂಡಸರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಮಾಡಿದ್ದು. ನಾನು ಗಮನಿಸಿದಂತೆ ಮಹಿಳೆಯರೂ ಇದನ್ನು ಓಡಿಸುತ್ತಾರೆ. ಅಷ್ಟೇಕೆ? ನನ್ನ ಮಗಳಿಗೇ ನಾನು ಇದನ್ನು ಕೊಳ್ಳಲು ಯೋಚಿಸಿದ್ದೆ. ಎತ್ತರ ಸ್ವಲ್ಪ ಕಡಿಮೆ ಇದ್ದರೆ ಕೊಂಡುಕೊಂಡೂ ಬಿಡುತ್ತಿದ್ದೆ. ಜ್ಯುಪಿಟರ್ ಈಗ ದೇಶದ ಸ್ಕೂಟರ್ ಮಾರುಕಟ್ಟೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಸಪ್ಟೆಂಬರ್ ೨೦೧೭ಕ್ಕೆ ಅದು ೨೦ ಲಕ್ಷ ಮಾರಾಟದ ಗುರಿಯನ್ನು ತಲುಪಿತು. ೧೧೦ ಸಿಸಿಯ ೪-ಸ್ಟ್ರೋಕ್, ೭.೮೮ ಅಶ್ವಶಕ್ತಿ (5.88kW), 7500 RPM, ಇವು ಈ ಸ್ಕೂಟರಿನ ಇಂಜಿನ್‌ನ ಕೆಲವು ಪ್ರಮುಖ ಗುಣವೈಶಿಷ್ಟ್ಯಗಳು. ಕಂಪೆನಿಯವರು ಹೇಳಿಕೊಂಡಂತೆ ಇದು ೧೧.೨ ಸೆಕೆಂಡುಗಳಲ್ಲಿ ೦ ಯಿಂದ ಗಂಟೆಗೆ ೬೦ ಕಿ.ಮೀ. ವೇಗವನ್ನು ಪಡೆಯಬಲ್ಲುದು. ಭಾರತೀಯರು ಬಹಳ ಮುಖ್ಯವಾಗಿ ಕೇಳುವ ಪ್ರಶ್ನೆ ಲೀಟರಿಗೆ ಎಷ್ಟು ಕೊಡುತ್ತದೆ? ಇದು ಪ್ರತಿ ಲೀಟರಿಗೆ ೬೨ ಕಿ.ಮೀ. ನೀಡುತ್ತದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ಈ ಸಂಖ್ಯೆ ಎಂದಿನಂತೆ under ideal test conditions.  ಸ್ಕೂಟರಿನಲ್ಲಿ ಕಾಲಿಡಲು ಇರುವ ಜಾಗ ವಿಶಾಲವಾಗಿದೆ. ಅಂತೆಯೇ ಸೀಟಿನ ಕೆಳಗಿರುವ ಸ್ಟೋರೇಜ್ ಸ್ಪೇಸ್ ಕೂಡ ದೊಡ್ಡದಾಗಿದೆ. ಅದರ ಒಳಗೆ ಒಂದು ಯುಎಸ್‌ಬಿ ಚಾರ್ಜಿಂಗ್ ಕಿಂಡಿ ಕೂಡ ಇದೆ. ಇದು ೧ ಆಂಪಿಯರ್ ಶಕ್ತಿಯದ್ದು. ಆಧುನಿಕ ಫೋನ್‌ಗಳಿಗೆ ೨ ಆಂಪಿಯರ್ ಇದ್ದರೆ ಒಳ್ಳೆಯದು. ಕಡಿಮೆ ಬೆಲೆಯ ಫೋನ್‌ಗಳಿಗೆ ೧ ಆಂಪಿಯರ್ ಸಾಕು. ೨ ಆಂಪಿಯರ್ ಬೇಕಾದ ಫೋನನ್ನು ೧ ಆಂಪಿಯರ್‌ನಲ್ಲಿ ಚಾರ್ಜ್ ಮಾಡಬಾರದೆಂದೇನಿಲ್ಲ. ಸ್ವಲ್ಪ ನಿಧಾನವಾಗಿ ಚಾರ್ಜ್ ಆಗುತ್ತದೆ, ಅಷ್ಟೆ. ಈ ಸ್ಕೂಟರಿನ ಪೆಟ್ರೋಲ್ ಟ್ಯಾಂಕ್‌ನ ಮುಚ್ಚಳ ಸೀಟಿನ ಕೆಳಗಿಲ್ಲ. ಪೆಟ್ರೋಲ್ ಹಾಕಿಸಲು ಸ್ಕೂಟರಿನಿಂದ ಕೆಳಗೆ ಇಳಿಯಬೇಕಾಗಿಲ್ಲ.

 

ಜ್ಯುಪಿಟರ್ ಸ್ಕೂಟರಿಗೆ ೨೦೧೪ರಲ್ಲಿ ವರ್ಷದ ಸ್ಕೂಟರ್ ಎಂಬ ಪ್ರಶಸ್ತಿ ದೊರೆತಿದೆ. ಈ ಸ್ಕೂಟರ್ ೮ ಬಣ್ಣಗಳಲ್ಲಿ ಲಭ್ಯ. ಜೆ.ಡಿ. ಪವರ್ ನೀಡುವ ಅತಿ ಆಕರ್ಷಕ ಸ್ಕೂಟರ್ ಎಂಬ ೨೦೧೮ರ ಪ್ರಶಸ್ತಿ ಇದಕ್ಕೆ ದೊರೆತಿದೆ. ಈ ಪ್ರಶಸ್ತಿಗೆ ಇದು ಅರ್ಹ ಕೂಡ. ನಿಜಕ್ಕೂ ನೋಡಲು ಆಕರ್ಷಕವಾಗಿದೆ. ಕ್ಲಾಸಿಕ್ ಎಂಬ ಹೆಸರಿನ ವಿಶೇಷ ಆವೃತ್ತಿಯೂ ಇದೆ.

 

ಟಿವಿಎಸ್ ಫ್ಯಾಕ್ಟರಿಯನ್ನು ನಮಗೆ ತೋರಿಸಲಾಯಿತು. ರೋಬೋಟ್‌ಗಳು ಇಂಜಿನನ್ನು ತಯಾರಿಸುವುದನ್ನು ನೋಡಿದೆವು. ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದಾಗ ರೋಬಾಟ್‌ಗಳು ಆಗಷ್ಟೆ ಭಾರತಕ್ಕೆ, ಬಿಎಆರ್‌ಸಿಗೆ ಬಂದಿದ್ದವು. ನಮಗೆಲ್ಲ ಅವು ಕುತೂಹಲದ ವಸ್ತುವಾಗಿತ್ತು. ಇಲ್ಲಿ ಹಲವು ಕೆಲಸಗಳನ್ನು ರೋಬೋಟ್‌ಗಳೇ ಮಾಡುತ್ತವೆ. ಪಕ್ಕದಲ್ಲಿ ಅಸೆಂಬ್ಲಿ ಲೈನ್ ಇದೆ. ಅಲ್ಲಿ ಕನ್ವೆಯರ್ ಬೆಲ್ಟ್‌ನಲ್ಲಿ ಸ್ಕೂಟರ್‌ನ ಚೇಸಿಸ್‌ಗೆ ಇಂಜಿನ್ ಜೋಡಿಸಿ ಬೆಲ್ಟ್‌ನಲ್ಲಿ ಬರುತ್ತದೆ. ಅಲ್ಲಿ ಸಾಲಾಗಿ ಒಬ್ಬೊಬ್ಬರು ಒಂದೊಂದು ಅಂಗವನ್ನು ಜೋಡಿಸುತ್ತಾರೆ. ಪ್ರತಿಯೊಬ್ಬರಿಗೂ ತಾವು ಜೋಡಿಸಬೇಕಾದ ಭಾಗವನ್ನು ಜೋಡಿಸಲು ದೊರೆಯುವ ಸಮಯ ಕೇವಲ ಏಳು ಸೆಕೆಂಡು. ಕೊನೆಯಲ್ಲಿ ಒಬ್ಬರು ಇಂಜಿನ್ ಆನ್ ಮಾಡಿ ನೋಡುತ್ತಾರೆ. ಅಲ್ಲಿಂದ ಮುಂದೆ ಅದು ಟೆಸ್ಟ್ ಡ್ರೈವ್‌ಗೆ ಹೋಗುತ್ತದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಲ್ಲಿ ೯೦% ಮಹಿಳೆಯರು. ದುರದೃಷ್ಟಕ್ಕೆ ಅಲ್ಲಿ ಫೋಟೋಗ್ರಫಿಗೆ ಅವಕಾಶವಿಲ್ಲ.

 

ಊಟದ ನಂತರ ಟೆಸ್ಟ್ ಡ್ರೈವ್‌ ಟ್ರ್ಯಾಕ್‌ಗೆ ನಮ್ಮನ್ನೆಲ್ಲ ಕರೆದುಕೊಂಡು ಹೋದರು. ಅಲ್ಲಿ ಸ್ಕೂಟರುಗಳು ಸಾಲಾಗಿ ನಿಂತುಕೊಂಡು ನಮಗೆ ಕಾಯುತ್ತಿದ್ದವು. ಪಕ್ಕದಲ್ಲೇ ಒಂದು ಅಂಬುಲೆನ್ಸ್ ಸಹಾ ನಿಂತಿತ್ತು! ಸ್ಕೂಟರ್ ಚಲಾಯಿಸುವ ಮೊದಲು ಸುರಕ್ಷತೆಗಾಗಿ ದಪ್ಪನೆಯ ಜಾಕೆಟ್, ಮೊಣಗಂಟಿಗೆ ಪಟ್ಟಿ, ಕೈಗೆ ಗ್ಲೌಸ್, ತಲೆಗೆ ಹೆಲ್ಮೆಟ್ ಎಲ್ಲ ಧರಿಸಬೇಕಿತ್ತು. ನೋಡಿದರೆ ಗಗನಯಾತ್ರಿಯಂತೆ ಕಂಡುಬರುತ್ತಿತ್ತು. ಆಗ ತೆಗೆದ ಫೋಟೋ ನೋಡಿ. ಈ ವ್ಯಕ್ತಿಗಳಲ್ಲಿ ನಾನು ಯಾರು ಎಂದು ಗುರುತಿಸಿ ನೋಡೋಣ! ಈ ಟೆಸ್ಟ್ ಟ್ರ್ಯಾಕ್ ೧.೭ ಕಿ.ಮೀ ಉದ್ದ ಇದೆ. ಅದಕ್ಕೆ ಎರಡು ಸುತ್ತು ಬಂದೆವು. ಜ್ಯುಪಿಟರ್ ಓಡಿಸುವ ಅನುಭವ ಉತ್ತಮವಾಗಿತ್ತು. ತುಂಬ ನಯವಾಗಿ ಓಡಿಸಬಹುದು. ನಾನು ಮೊದಲೇ ಹೇಳಿದಂತೆ ಈ ಸ್ಕೂಟರನ್ನು ಕೊಳ್ಳುವ ಬಗ್ಗೆ ಒಮ್ಮೆ ಯೋಚಿಸಿದ್ದೆವು. ನೀಡುವ ಹಣಕ್ಕೆ ತಕ್ಕ ಸ್ಕೂಟರ್ ಎಂದು ಖಂಡಿತವಾಗಿ ಹೇಳಬಹುದು.

 

ಈ ಕಾರ್ಯಕ್ರಮ ಆಯೋಜಿಸಿದ್ದ ಇಂಡಿಬ್ಲಾಗರ್‌ಗೆ ಧನ್ಯವಾದಗಳು.

5 thoughts on “ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ

 1. H S RAMESH says:

  ಪವನಜರೆ, ನಿಮ್ಮ ನಿರೂಪಣೆ ಚೆನ್ನಾಗಿದೆ. ನಾನು ಸ್ಕೂಟರ್ ತೆಗೆದುಕೊಳ್ಳುವ ಹೊತ್ತಿಗೆ ಈ ಜ್ಯೂಪಿಟರ್ ಮಾಡೆಲ್ ಲಾಂಚ್ ಆಗಿರಲಿಲ್ಲ. ನೀವು ಹೇಳಿದಂತೆ ಚಾರ್ಜಿಂಗ್ ನ್ನು 1 ರಿಂದ2 ಆಂಪಿಯರಿಗೆ ಏರಿಸಿದರೆ ಒಳ್ಳೆಯದು.

 2. ಟಿವಿಎಸ್ ಫ್ಯಾಕ್ಟರಿ ಪ್ರವಾಸ ಅನುಭವ ಚೆನ್ನಾಗಿತ್ತು. ನಿಮ್ಮನ್ನು ಭೇಟಿಯಾಗುವ ಅವಕಾಶವೂ ದೊರಕಿತು

 3. ಟಿವಿಎಸ್ ಫ್ಯಾಕ್ಟರಿ ಭೇಟಿ ಮತ್ತು Jupiter ವಾಹನದ ಬಗ್ಗೆ ಕೊಟ್ಟ ವಿವರಗಳು ಚೆನ್ನಾಗಿವೆ. ನಾನು ಕೂಡ ಗಮನಿಸಿದಂತೆ ಈ ಜುಪಿಟರ್ ಮಾಡೆಲ್ ಇತ್ತೀಚಿನ ವರ್ಷಗಳಲ್ಲಿ ಟೂ ವೀಲರ್ ಮಾರುಕಟ್ಟೆಯ ಲೀಡಿಂಗ್ ಮಾಡೆಲ್ ಗಳಲ್ಲಿ ಒಂದಾಗಿದ್ದು ಬಹಳ ಆಕರ್ಷಕವಾಗಿ ಬರುತ್ತಿದೆ ಮತ್ತು ಒಳ್ಳೆ performance ಕೊಡುತ್ತಿದೆ ಎಂದು ಕೇಳ್ಪಟ್ಟಿದ್ದೇನೆ. ನಮ್ಮ ಸ್ವದೇಶಿ ಕಂಪನಿ TVSಗೆ , ಮಾಹಿತಿ ತಿಳಿಸಿದ ನಿಮಗೆ thumbs up.

 4. Banashankar Aradhya says:

  ನಿಮ್ಮ ಬರಹ ಸುಲಲಿತವಾಗಿದೆ.
  ನಾನು ಅತ್ಯಂತ ಇಷ್ಟಪಡುವ ಆಟೋಮೊಬೈಲ್ ಕಂಪೆನಿ‌ ಟಿವಿಎಸ್. ರೈತ, ಹಾಲು ಮಾರುವವ, ಕಾಲೇಜು ಹುಡುಗ, ಸಂಸಾರಸ್ಥ, ಕಾಲೇಜು ಹುಡುಗಿ, ಗೃಹಿಣಿ, ನೌಕರ ಹೀಗೆ ಎಲ್ಲ ವರ್ಗದವರಿಗೂ ಅವರಲ್ಲಿ ದ್ವಿ ಚಕ್ರ ವಾಹನಗಳಿವೆ. ಮತ್ತು ಎಲ್ಲವೂ ಆ ವರ್ಗದಲ್ಲಿ ಬೇರೆ ಕಂಪೆನಿಗಳ ಮಾಡೆಲ್‌ ಗಳಿಗಿಂತ ಗುಣಮಟ್ಟದಲ್ಲಿ ಉತ್ಕೃಷ್ಟ. ದರದಲ್ಲಿ ಮಿತವ್ಯಯ. ವೈಶಿಷ್ಟ್ಯ ಗಳಲ್ಲಿ ಬಹಳ ಮುಂದು.
  ಒಂದು ಉದಾಹರಣೆ, ಹೋಂಡಾ ಆಕ್ಟೀವಾದಲ್ಲಿ‌ 110 Cc ಮಾಡೆಲ್ ನಲ್ಲಿ‌ ಸೀಟ್ ನಿಂದ ಇಳಿದೇ ಪೆಟ್ರೋಲ್ ಹಾಕಿಸಬೇಕು. ಜುಪಿಟರ್ ನಲ್ಲಿ ಆ ಕಷ್ಟ ಇಲ್ಲ. ಜುಪಿಟರ್ ನ ಮುಂದಿನ ಚಕ್ರದ ಶಾಕ್ ಅಬ್ಸಾರ್ಬರ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಇದ್ದರೆ, ಹಿಂದಿನ ಚಕ್ರಕ್ಕೆ ಗ್ಯಾಸ್ ಚಾರ್ಜಡ್ ಮೊನೋ ಶಾಕ್ಸ್ ಇದೆ. ಆಕ್ಟೀವಾದಲ್ಲಿ ಹಳೆ ಮಾದರಿಯ ಸ್ಪ್ರಿಂಗ್ ಹೈಡ್ರಾಲಿಕ್ ಟೈಪ್ ಇದೆ. ಹೀಗಾಗಿ ಜುಪಿಟರ್ ನಲ್ಲಿ ನಯವಾಗಿ ಹೆಚ್ಚು ಕುಲುಕದಂತೆ ಸವಾರಿಸಬಹುದು. ಮತ್ತು ಜುಪಿಟರ್ ನಲ್ಲಿ ಅಲಾಯ್ ವೀಲ್ ಇದೆ. ಆಕ್ಟೀವಾ 110 Cc ಗೆ ಅಲಾಯ್ ವೀಲ್ ಇಲ್ಲ! 125 Cc ಗೆ ಮಾತ್ರ ಇದೆ.
  ಬೈಕ್ ಗಳೂ ಅಷ್ಟೇ…tvs ಅತ್ಯುತ್ತಮ.
  ಪ್ರತಿಯೊಂದು specifications ತುಲನೆ ಮಾಡಿದರೆ ಸತ್ಯ ತಿಳಿಯುತ್ತದೆ. ಆದರೆ ಸಾಮಾನ್ಯ ಜನರು ಜಾಹೀರಾತು ಮತ್ತು ಬೇರೆಯವರು ಕೊಂಡಿರುವುದನ್ನು ನೋಡಿ ಕಡಿಮೆ ಸವಲತ್ತು ಇರುವ ವಸ್ತುಗಳಿಗೆ ಹೆಚ್ಚು ಬೆಲೆ ನೀಡಿ ಖರೀದಿಸುತ್ತಾರೆ.

Leave a Reply

Your email address will not be published. Required fields are marked *

*
*