Home » Kannada » ನನ್ನ ಗಣಕಾವಲೋಕನ – ೬

ನನ್ನ ಗಣಕಾವಲೋಕನ – ೬

ಗಣಕಾಜ್ಞಾನಿಗಳೊಡನೆ ಗುದ್ದಾಟ

ಗಣಕ ಜ್ಞಾನಿಗಳ ಒಡನಾಟದಿಂದ ನಮಗೆ ಲಾಭವಿದೆ. ನಾವು ಅಂತಹವರದ್ದೇ ಒಂದು ತಂಡವನ್ನು ಬಿಏಆರ್‌ಸಿಯಲ್ಲಿ ಕಟ್ಟಿಕೊಂಡಿದ್ದೆವು. ಆಗ ಫ್ಲಾಪಿಗಳ ಕಾಲ. ಒಬ್ಬರಿಗೊಬ್ಬರು ಹೊಸ ತಂತ್ರಾಂಶ (ಸಾಫ್ಟ್‌ವೇರ್) ಹಂಚಿಕೊಳ್ಳುವುದು, ಹೊಸ ಆಟಗಳನ್ನು ಆಡುವಾಗ ಯಾವ ಹಂತದಲ್ಲಿ ಹೇಗೆ ಆಡಿ ಗೆಲ್ಲಬೇಕು, ಗಣಿತ ಅಥವಾ ರಸಾಯನ ವಿಜ್ಞಾನದ ಸಮೀಕರಣಗಳನ್ನು ಹೇಗೆ ಮೂಡಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳು, ಜ್ಞಾನ ಹಂಚುವಿಕೆ ಎಲ್ಲ ಆಗುತ್ತಿದ್ದವು. ಒಂದು ಹೊಸ ವಿಷಯ ಗೊತ್ತಾದೊಡನೆ ಅದನ್ನು ಇನ್ನೊಬ್ಬರೊಡನೆ ಹಂಚಿಕೊಂಡಾಗ ಆಗುವ ಒಂದು ಅದ್ಭುತ ತೃಪ್ತಿ ಅನುಭವವಿದೆಯಲ್ಲಿ ಅದೆಲ್ಲ ಈಗಿನ ಕೆಲವರಿಗೆ ಅರ್ಥವಾಗಲಿಕಿಲ್ಲ. ಅದರಲ್ಲೂ ಪ್ರತಿಯೊಂದು ತನ್ನ ಕಾಪಿರೈಟ್ ಎಂದು ಹೇಳಿಕೊಂಡು ತಿರುಗಾಡುವವರಿಗಂತು ಕಂಡಿತ ಅರ್ಥವಾಗಲಾರದು.
ಆಗಷ್ಟೇ ವೈಯಕ್ತಿಕ ಗಣಕಗಳು ಅಂದರೆ ಪಿ.ಸಿ.ಗಳು ಬಿಏಆರ್‌ಸಿಗೆ ಕಾಲಿಡತೊಡಗಿದ್ದವು. ಈ ಒಂದು ವಿಷಯದಲ್ಲಿ ನಾನು ಎಲ್ಲರಿಗಿಂತ ಮುಂದೆ ಇದ್ದೆ. ಅದರಿಂದಾಗಿ ತೊಂದರೆಗಳೂ ಆಗತೊಡಗಿದವು. ಯಾರಿಗೇ ಪಿ.ಸಿ.ಯಲ್ಲಿ ಏನೇ ಸಮಸ್ಯೆಯಾದರೂ ನನಗೇ ಕರೆ ಬರುತ್ತಿತ್ತು. ಅಲ್ಲಿ ಹೋಗಿ ನೋಡಿದಾಗ ಅದು ಸಮಸ್ಯೆಯಾಗಿರಲಿಲ್ಲ. ಬದಲಿಗೆ ಅವರಿಗೆ ಹೇಗೆ ಮಾಡಬೇಕು ಎಂದು ಅರ್ಥವಾಗಿರಲಿಲ್ಲ ಅಷ್ಟೆ. ಬಿಏಆರ್‌ಸಿಯ ವಿಜ್ಞಾನಿಯಾಗಿದ್ದರೂ ಅವರು ಗಣಕಾಜ್ಞಾನಿಗಳಾಗಿದ್ದರು. ಅಂತಹವರೊಡನೆ ಗುದ್ದಾಟದ ಕೆಲವು ಅನುಭವಗಳು ನಿಜಕ್ಕೂ ಸ್ವಾರಸ್ಯಕರವಾಗಿದ್ದವು.
ಬಿಏಆರ್‌ಸಿಯಲ್ಲಿ ರಸಾಯನ ವಿಜ್ಞಾಕ್ಕೆ ಸಂಬಂಧಪಟ್ಟ ಕೆಲವು ವಿಭಾಗಗಳಿದ್ದವು. ಈ ಎಲ್ಲ ವಿಭಾಗಗಳಿಗೂ ಒಬ್ಬ ಮುಖ್ಯಸ್ಥ ಮತ್ತು ಈ ಎಲ್ಲ ವಿಭಾಗಗಳಿಗೆ ಒಬ್ಬ ನಿರ್ದೇಶಕ ಇದ್ದರು. ಈ ನಿರ್ದೇಶಕರ ಕೊಠಡಿಯಲ್ಲೊಂಡು ಪಿ.ಸಿ. ವಿರಾಜಮಾನವಾಗಿತ್ತು. ಅದರಲ್ಲಿ ಅವಶ್ಯ ತಂತ್ರಾಂಶಗಳನ್ನು ಹಾಕಿಕೊಡುವುದು ಮತ್ತು ಅವನ್ನು ಹೇಗೆ ಬಳಸುವುದು ಎಂದು ಹೇಳಿಕೊಡುವುದು ನನ್ನ ಕೆಲಸವಾಗಿತ್ತು. ಒಮ್ಮೆ ಅವರ ಗಣಕ ಕೆಲಸ ಮಾಡುವುದು ನಿಲ್ಲಿಸಿತು. ವಿಪ್ರೊ ಕಂಪೆನಿಯ ಜೊತೆ ಬಿಏಆರ್‌ಸಿಯ ವಾರ್ಷಿಕ ನಿರ್ವಹಣೆಯ ಒಪ್ಪಂದವಿತ್ತು. ವಿಪ್ರೊಗೆ ಫೋನಾಯಿಸಿದೆ. ಮರುದಿನ ಅವರ ತಂತ್ರಜ್ಞ ಬಂದ. ಪಿ.ಸಿ.ಯನ್ನು ತೆರೆದು ನೋಡಿದಾಗ ಒಳಗಡೆಯ ಕೆಲವು ವಯರ್‌ಗಳನ್ನು, ಪಿ.ಸಿ.ಬಿ.ಯ ಕೆಲವು ಭಾಗವನ್ನು ಇಲಿ ತಿಂದಿತ್ತು!. ಬಹುಶಃ ಪಿ.ಸಿ. ಬಂದಾಗ ಅದಕ್ಕೆ ಪೂಜೆ ಮಾಡಿರಲಿಲ್ಲ. ಅದಕ್ಕೆ ವಿಘ್ನೇಶನಿಗೆ ಅಸಮಧಾನವಾಗಿ ತನ್ನ ವಾಹನವನ್ನು ಸ್ವಲ್ಪ ನೋಡಿಕೊಳ್ಳಯ್ಯ ಎಂದು ಕಳುಹಿಸಿರಬೇಕು. ವಿಪ್ರೊದವರು ಹೊಸ ಪಿ.ಸಿ.ಬಿ. ಹಾಕಿ ಪಿ.ಸಿ. ಕೆಲಸ ಮಾಡುವಂತೆ ಮಾಡಿ, ನನಗೆ ತೋರಿಸಿ, ನನ್ನ ಸಹಿ ತೆಗೆದುಕೊಂಡು ಹೋದರು. ಮರುದಿನ ಬೆಳಗ್ಗೆ ನಮ್ಮ ನಿರ್ದೇಶಕರಿಂದ ಫೋನ್. “ನನ್ನ ಪಿ.ಸಿ. ಕೆಲಸ ಮಾಡುತ್ತಿಲ್ಲ, ಕೂಡಲೇ ಬಾ” ಎಂದು. ಸರಿ. ನಾನು ಅಲ್ಲಿಗೆ ಹೋಗಿ ನೋಡಿದೆ. ಪಿ.ಸಿಯಲ್ಲಿ ಹಸಿರು ಎಲ್‌ಇಡಿ ಬೆಳಗುತ್ತಿತ್ತು. ಆದರೆ ಮೋನಿಟರ್‌ನಲ್ಲಿ ಬೆಳಕು ಇರಲಿಲ್ಲ. ಆಗ ಇದ್ದುದು ಹಳೆಯ ಕಲರ್ ಟಿವಿಯ ಮಾದರಿಯ ದೊಡ್ಡ ಮೋನಿಟರ್‌ಗಳು. ಅದರ ಹಿಂದುಗಡೆ ಒಂದು ಆನ್/ಆಫ್ ಬಟನ್ ಇತ್ತು. ನಾನು ಮೋನಿಟರ್‌ನ ಹಿಂದೆ ಕೈ ಹಾಕಿ ಆ ಬಟನ್ ಆನ್ ಮಾಡಿದೆ. ಪಿ.ಸಿ.ಯ ಮೋನಿಟರ್‌ನಲ್ಲಿ ಅಕ್ಷರಗಳು ಮೂಡಿಬಂದವು. ನಿರ್ದೇಶಕರಿಗೆ ಆಶ್ಚರ್ಯ! ನಾನು ಹೇಗೆ ಅಷ್ಟು ಸುಲಭದಲ್ಲಿ ಅದನ್ನು ಸರಿ ಮಾಡಿದೆ ಎಂದು. ಹಿಂದುಗಡೆ ಒಂದು ಬಟನ್ ಇರುವುದು ತೋರಿಸಿಕೊಟ್ಟೆ. ಅವರಿಗೆ ಸ್ವಲ್ಪ ಇರುಸುಮರುಸು ಆಯಿತು. ನನ್ನ ಮುಂದೆ ಸ್ವಲ್ಪ ಪೆದ್ದನಾದೆಯಲ್ಲ ಎಂದು.
ಒಂದೆರಡು ವರ್ಷಗಳು ಕಳೆದ ನಂತರ ವಿಂಡೋಸ್ ಬಂತು. ಅದರ ಜೊತೆ ಇಲಿ ಅಂದರೆ ಮೌಸ್ ಬಂತು. ಆಗಿನ ಮೌಸ್‌ಗಳಿಗೆ ಒಂದು ದೊಡ್ಡ ಗೋಳವಿರುತ್ತಿತ್ತು. ಆಗಾಗ ಈ ಗೋಳಕ್ಕೆ ಕಸ, ಕೂದಲು ಎಲ್ಲ ಸಿಕ್ಕಿಹಾಕಿಕೊಂಡು ಆ ಗೋಳ ತಿರುಗದೆ ಅದು ಅರೆಬರೆ ಕೆಲಸ ಮಾಡುತ್ತಿತ್ತು. ಹಲವು ಮಂದಿ ನನಗೆ ಫೋನ್ ಮಾಡಿ ನನ್ನ ಮೌಸ್ ಕೆಲಸ ಮಾಡುತ್ತಿಲ್ಲ, ಸ್ವಲ್ಪ ಬಂದು ನೋಡು ಎಂದು ಹೇಳುವುದು ಸಾಮಾನ್ಯವಾಗಿತ್ತು. ಹೋಗಿ ನೋಡಿದರೆ ಮೌಸ್ ಪೂರ್ತಿ ಮುಂಬಯಿಯ ಕೊಳೆ ತುಂಬಿರುತ್ತಿತ್ತು. ಅವರಿಗೆ ಅದನ್ನು ಸ್ವಚ್ಛ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟೆ. ಈ ಮೌಸ್ ಪಿ.ಸಿ.ಗೆ ತನ್ನ ಬಾಲದ ಮೂಲಕ ಅಂದರೆ ವಯರ್ ಮೂಲಕ ಜೋಡಣೆಯಾಗಿರುತ್ತಿತ್ತು. ಆಗಿನ್ನೂ ನಿಸ್ತಂತು ಇಲಿಗಳು ಬಂದಿರಲಿಲ್ಲ. ಬಹುಶಃ ಯಜಮಾನನನ್ನು ಬಿಟ್ಟು ಎಲ್ಲೆಂದರಲ್ಲಿಗೆ ತಿರುಗಾಡಬಾರದು ಎಂದು ಅದರ ಬಾಲದ ಮೂಲಕ ಕಟ್ಟಿಹಾಕುತ್ತಿದ್ದಿರಬೇಕು. ಒಮ್ಮೆ ಪಿನಾಕಿ ಹೆಸರಿನವರೊಬ್ಬರು ಕರೆ ಮಾಡಿದರು. ನನ್ನ ಪಿ.ಸಿ.ಯಲ್ಲಿ ವಿಂಡೋಸ್ ಇದೆ. ಆದರೆ ಅದನ್ನು ಹೇಗೆ ಉಪಯೋಗಿಸುವುದು ಎಂದು ತೋರಿಸಿಕೊಡು ಎಂದು ವಿನಂತಿ ಮಾಡಿಕೊಂಡರು. ಸರಿ. ಎಂದಿನಂತೆ ನನ್ನ ಕೆಲಸ ಬಿಟ್ಟು ಅವರಲ್ಲಿಗೆ ಹೋದೆ. ನೋಡಿದರೆ ಅವರ ಪಿ.ಸಿ.ಯಲ್ಲಿ ಮೂಷಿಕವೇ ಇಲ್ಲ. ಮೂಷಿಕವಿಲ್ಲದೆ ಕಿಟಿಕಿಯೊಳಗೆ ನುಸುಳುವುದೆಂತು? ಅದನ್ನೇ ಅವರಿಗೆ ಹೇಳಿದೆ. ಅವರಿಗೆ ಪೂರ್ತಿ ಅರ್ಥವಾಗಲಿಲ್ಲ. ಸ್ವಲ್ಪ ತಮಾಷೆಯಾಗಿ ಹೇಳಿದೆ – “ನೀವು ಪಿನಾಕಿ ಅಂದರೆ ಶಿವ. ನಿಮ್ಮ ಮಗ ಇಲಿ ತೆಗೆದುಕೊಂಡು ಹೋಗಿದ್ದಾನೆ. ಆದುದರಿಂದ ವಿಂಡೋಸ್ ಕೆಲಸ ಮಾಡುವುದಿಲ್ಲ”.
ಮೊದ ಮೊದಲು ಬಂದ ಪಿ.ಸಿ.ಗಳು ಅಗಲವಾದ ಪೆಟ್ಟಿಗೆಯಂತಿದ್ದವು. ಕೆಲವು ವರ್ಷಗಳ ನಂತರ ಈಗ ಎಲ್ಲ ಕಡೆ ಕಾಣಸಿಗುವಂತಹ ಟವರ್ ಬಂತು. ಅಂದರೆ ಅಡ್ಡ ಮಲಗಿದ್ದ ಪಿ.ಸಿ.ಯು ಎದ್ದು ನಿಂತಿತು. ಅಗಲವಾದ ಪೆಟ್ಟಿಗೆಯ ಮೇಲಿದ್ದ ದೊಡ್ಡ ಟಿವಿಯ ಮಾದರಿಯ ಮೋನಿಟರ್ ಟವರ್‌ನ ಪಕ್ಕಕ್ಕೆ ಬಂತು. ಈ ಟವರ್ ಮಾದರಿಯ ಪಿ.ಸಿ.ಯಲ್ಲಿ ಕೆಳಗೆ ಹಾರ್ಡ್‌ಡಿಸ್ಕ್ ಅದರ ಮೇಲೆ ಫ್ಲಾಪಿ ಡ್ರೈವ್ ಇರುತ್ತಿತ್ತು. ಬಿಏಆರ್‌ಸಿಯ ನಿರ್ದೇಶಕರ ಕಛೇರಿಗೂ ಇಂತಹ ಒಂದು ಪಿ.ಸಿ. ಬಂತು. ಅದು ಬಂದೊಡನೆ ಎಂದಿನಂತೆ ನನಗೆ ಬುಲಾವ್ ಬಂತು. ಹೋಗಿ ಅವರಿಗೆ ಅದನ್ನು ಉಪಯೋಗಿಸುವುದು ಹೇಗೆ ಎಂದು ತೋರಿಸಿಕೊಟ್ಟು ಬಂದೆ.  ಆಗಿನ್ನೂ ಐದೂಕಾಲು ಇಂಚಿನ ಫ್ಲಾಪಿಗಳ ಕಾಲ. ಒಂದು ದಿನ ನನಗೆ ಅವರ ಕಛೇರಿಯಿಂದ ಕರೆ ಬಂತು. “ನಾವು ಹಾಕಿದ ಫ್ಲಾಪಿ ತೆಗೆಯಲು ಬರುತ್ತಿಲ್ಲ, ಸ್ವಲ್ಪ ಬಂದು ನೋಡು” ಎಂದು. ನಾನು ಅವರಿಗೆ ಫೋನಿನಲ್ಲೇ ವಿವರಿಸಲು ಪ್ರಯತ್ನಿಸಿದೆ. “ಫ್ಲಾಪಿ ಡ್ರೈವ್‌ಗೆ ಒಂದು ಚಿಲಕ ತರಹ ಇರುತ್ತದೆ ಅದನ್ನು ಸ್ವಲ್ಪ ವೇಗವಾಗಿ ತಿರುಗಿಸಿ. ಆಗ ಫ್ಲಾಪಿ ಅರ್ಧ ಇಂಚಿನಷ್ಟು ಹೊರ ಬರುತ್ತದೆ” ಎಂದೆಲ್ಲ ಹೇಳಿದೆ. ಅವರು ಮಾತ್ರ “ಅದೆಲ್ಲ ನಮಗೆ ಅರ್ಥವಾಗುತ್ತಿಲ್ಲ, ನೀವೇ ಬನ್ನಿ” ಎಂದು ಒತ್ತಾಯ ಮಾಡಿದರು. ಸರಿ ನೋಡೋಣ ಎಂದು ಹೊರಟೆ. ಎಂತದಿಕ್ಕೂ ಇರಲಿ ಎಂದು ಸ್ಕ್ರೂಡ್ರೈವರ್ ಕೂಡ ತೆಗೆದುಕೊಂಡು ಹೋದೆ. ಹೋಗಿ ನೋಡಿದರೆ ಆ ಪಿ.ಸಿ.ಯ ಕ್ಯಾಬಿನೆಟ್‌ನಲ್ಲಿ ಸ್ವಲ್ಪ ತಯಾರಿಕೆಯ ದೋಷವಿತ್ತು. ಹಾರ್ಡ್‌ಡಿಸ್ಕ್ ಮತ್ತು ಫ್ಲಾಪಿ ಡ್ರೈವ್‌ಗಳ ಮಧ್ಯೆ ಸ್ವಲ್ಪ ಸ್ಥಳವಿತ್ತು. ಅವರು ಫ್ಲಾಪಿಯನ್ನು ಅದರಲ್ಲಿ ತುರುಕಿಸಿದ್ದರು. ಫ್ಲಾಪಿ ಸೀದಾ ಪಿ.ಸಿಯ ಒಳಗೆ ಹೋಗಿ ನಾಪತ್ತೆಯಾಗಿತ್ತು! ನಾನು ಕ್ಯಾಬಿನೆಟ್ ಬಿಚ್ಚಿ ಅದನ್ನು ತೆಗೆದುಕೊಟ್ಟೆ.
ಒಬ್ಬರಿಗೆ ವಿಂಡೋಸ್ ಫ್ಲಾಪಿಗಳನ್ನು ಕೊಟ್ಟಿದ್ದೆ. ಅದನ್ನು ಇನ್‌ಸ್ಟಾಲ್ ಮಾಡುವುದು ಹೇಗೆ ಎಂದು ಬರೆದುಕೊಟ್ಟಿದ್ದೆ. ಮೊದಲ ಫ್ಲಾಪಿ ಹಾಕಿ ಸುರು ಮಾಡಿದರು. ಸ್ವಲ್ಪ ಹೊತ್ತಿನಲ್ಲೇ ನನಗೆ ಕರೆ ಬಂತು. “ನಾನು ಮೊದಲ ಫ್ಲಾಪಿ ಹಾಕಿ ಪ್ರಾರಂಭಿಸಿದೆ. ಈಗ ಇದು Insert second disk to continue ಎನ್ನುತ್ತಿದೆ”. ನಾನು ಕೇಳಿದೆ “ಅದರಲ್ಲೇನು ಸಮಸ್ಯೆ?” “ಮೊದಲನೆಯ ಡಿಸ್ಕ್ ಅಲ್ಲೇ ಇರುವಾಗ ಎರಡನೆಯ ಡಿಸ್ಕ್ ಹಾಕುವುದು ಹೇಗೆ? ಅದಕ್ಕೆ ಜಾಗವೆಲ್ಲಿದೆ?” “ಮೊದಲನೆಯ ಡಿಸ್ಕ್ ತೆಗೆದು ನಂತರ ಎರಡನೆಯದನ್ನು ಹಾಕಬೇಕು” ಎಂದಾಗ “ಹಾಗೆಂದು instruction ಯಾಕೆ ಇಲ್ಲ?” ಎಂದು ಕೇಳಬೇಕೇ?!
ಇನ್ನೊಬ್ಬರು ಒಂದು ದಿನ ಕರೆ ಮಾಡಿದರು. ನನ್ನ ಪಿ.ಸಿ. ಕೆಲಸ ಮಾಡುತ್ತಿಲ್ಲ. ಸ್ವಲ್ಪ ಬಂದು ನೋಡಿ ಸಹಾಯ ಮಾಡು ಎಂದರು. ಸರಿ. ಹೋಗಿ ನೊಡಿದೆ. ಅದು ಎಂ.ಎಸ್. ಡಾಸ್ ಪಿ.ಸಿಯಾಗಿತ್ತು. ಅದರಲ್ಲಿ ಎರಡು ಮುಖ್ಯ ಫೈಲ್‌ಗಳಿರುತ್ತಿದ್ದವು. ಅವು MSDOS.SYS ಮತ್ತು CONFIG.SYS. ಅವರು ಈ ಎರಡು ಫೈಲ್‌ಗಳನ್ನು ಅಳಿಸಿಹಾಕಿದ್ದರು.

ವಾಲೇಕರ್ ಎಂಬೊಬ್ಬ ವಿಜ್ಞಾನಿ ನಮ್ಮ ವಿಭಾಗದಲ್ಲಿದ್ದರು. ಅವರೊಡನೆ ಒಮ್ಮೆ ಕ್ಯಾಂಟೀನ್‌ನಲ್ಲಿ ಕುಳಿತುಕೊಂಡು ಚಹಾ ಕುಡಿಯುತ್ತಿದ್ದಾಗ ನನ್ನ ಪಿ.ಸಿ.ಗೆ ವೈರಸ್ ಬಂದು ತೊಂದರೆಯಾಗಿದೆ ಎಂದೆ. ಅವರಿಗೆ ಆಶ್ಚರ್ಯ, ಪಿ.ಸಿಗೆ ವೈರಸ್ ಹೇಗೆ ಬರಲು ಸಾಧ್ಯ, ಅದು ಮನುಷ್ಯರಿಗೆ ಬರುವುದಲ್ಲವೇ ಎಂದು. ಮುಂದೊಮ್ಮೆ ಅವರಿಗೂ ಪಿ.ಸಿ. ಬಂತು. ಬಂದೊಡನೆ ನನಗೆ ಕೇಳಿದರು -“ನಾನು ಆಂಟಿಬಯೋಟಿಕ್ ತೆಗೆದುಕೊಳ್ಳುತ್ತಿದ್ದೇನೆ. ಆದುದರಿಂದ ನನ್ನ ಪಿ.ಸಿ.ಗೆ ವೈರಸ್ ಬರಲಿಕ್ಕಿಲ್ಲ ಅಲ್ಲವೇ?”
ಕೆಲವು ವರ್ಷಗಳ ನಂತರ ಸಿ.ಡಿ.ಗಳು ಬಂದವು. ನಮ್ಮ ವಿಭಾಗದಲ್ಲಿದ್ದ ಓರ್ವ ಮಹಿಳಾ ವಿಜ್ಞಾನಿ ಏನು ಮಾಡಿದ್ದರು ಗೊತ್ತಾ? ಸಿ.ಡಿಯನ್ನು ಉಲ್ಟಾ ಹಾಕಿ ಅದು ಕೆಲಸ ಮಾಡುತ್ತಿಲ್ಲ, ಸ್ವಲ್ಪ ಬಂದು ನೋಡು, ಎಂದು ನನ್ನನ್ನು ಕರೆದಿದ್ರು. ಅವರಿಗೆ ನೀವು ಸಿ.ಡಿ.ಯನ್ನು ಉಲ್ಟಾ ಹಾಕಿದ್ದೀರಿ ಎಂದು ತೋರಿಸಿಕೊಟ್ಟಿದ್ದಕ್ಕೆ ನಾನು ಅವರಿಗೆ ಅವಮಾನ ಮಾಡಿದ್ದೇನೆ ಎಂದು ಬೇರೆಯವರಲ್ಲಿ ಹೇಳಿದ್ದರು.

(ಗಣಕಾವಲೋಕನದ ಇತರೆ ಸಂಚಿಕೆಗಳನ್ನು ಓದಲು ಕೆಳಗೆ ಕಾಣುವ ಗಣಕಾವಲೋಕನ ಎಂಬ ಟ್ಯಾಗ್‌ ಮೇಲೆ ಕ್ಲಿಕ್ ಮಾಡಿ).

2 thoughts on “ನನ್ನ ಗಣಕಾವಲೋಕನ – ೬

  1. Archsna says:

    ನಾನು ಕಂಪ್ಯೂಟರ್ ಬಳಸಿದ್ರೂ ಹೀಗೇ ಎಲ್ಲ ಅವಾಂತರಗಳು ಆಗಿ ನಗೆಪಾಟಲಾಗ್ತೇನಾ ಅಂತ,ನಾನು ಗಣಕ ಅಶಿಕ್ಷಿತ ?Archana

  2. Shiva kumar says:

    ನಮಸ್ಕಾರ ಕನ್ನಡದ ಕೃತಿ ಶ್ರೀ ಸಿರಿಭೂವಲಯ ಸಾರದ ಬಗ್ಗೆ ದಯವಿಟ್ಟು ತಮ್ಮ ಸಂಶೋಧನೆ ಏನಾದರೂ ಇದ್ದರೆ ಅದನ್ನು ತಿಳಿಸುವುದು.

Leave a Reply

Your email address will not be published. Required fields are marked *

*
*