ನಾನು ಗ್ಯಾಜೆಟ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಾಗಿ ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗಲೆಲ್ಲ ಅಲ್ಲಿನ ಟ್ಯಾಕ್ಸಿ ಚಾಲಕರೊಡನೆ ಮಾತನಾಡುವುದು ನನ್ನ ಹವ್ಯಾಸ. ಇದರಿಂದಾಗಿ ಅಲ್ಲಿಯ ಜನಸಾಮಾನ್ಯರ ಅಭಿಪ್ರಾಯ ಏನು ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಾನು ಕೇಳುವ ಪ್ರಶ್ನೆಗಳು -“ನೀವು ಕಳೆದ ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದಿರಿ? ದೆಹಲಿಯಲ್ಲಿ ಕೇಜ್ರಿವಾಲರಿಗೆ ಮತ ನೀಡಿದ್ದಿರಾ? ಕೇಂದ್ರದಲ್ಲಿ ಮೋದಿಗೆ ನೀಡಿದ್ದಿರಾ? ನೀವು ಅವರ ಆಡಳಿತದಿಂದ ಸಂತೃಪ್ತರಾಗಿದ್ದೀರಾ? ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ನೀಡುತ್ತೀರಾ?” ಇತ್ಯಾದಿ. ಸಾಮಾನ್ಯವಾಗಿ ಎಲ್ಲರ ಉತ್ತರ ಒಂದೇ – ದೆಹಲಿಯಲ್ಲಿ ಕೇಜ್ರಿವಾಲರಿಗೆ, ಕೇಂದ್ರದಲ್ಲಿ ಮೋದಿಗೆ ಮತ ನೀಡಿದ್ದೇನೆ. ಕೇಜ್ರಿವಾಲರ ಆಡಳಿತ ಪೂರ್ತಿ ಸರಿಯಿಲ್ಲ. ಪ್ರಾರಂಭದಲ್ಲಿ ಎಲ್ಲದಕ್ಕೂ ಮೋದಿಯನ್ನು ದೂಷಿಸುತ್ತಿದ್ದರು. ಈಗ ಸ್ವಲ್ಪ ಸುಧಾರಿಸಿದ್ದಾರೆ. ಮೋದಿ ದೇಶಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ.
ಇತ್ತೀಚೆಗೆ ಹೋದಾಗಲೂ ಎಂದಿನಂತೆ ಇವೇ ಪ್ರಶ್ನೆಗಳನ್ನು ಕೇಳಿದೆ. ಅವೇ ಉತ್ತರಗಳು ಬಂದವು. ಚಾಲಕನ್ನು ಇನ್ನೂ ಸ್ವಲ್ಪ ಚುಚ್ಚಿದೆ -“ಮೋದಿ demonitisation ಮಾಡಿ ನಿಮಗೆ ತೊಂದರೆ ಆಗಲಿಲ್ಲವೇ? ಮುಖ್ಯವಾಗಿ ನಿಮ್ಮ ವ್ಯವಹಾರಗಳು ನಗದಿನ ಮೂಲಕವೇ ನಡೆಯುವ ಕಾರಣ ನಿಮಗೆ ತೊಂದರೆ ಆಗಿರಬಹುದಲ್ಲವೇ?”. ಒಬ್ಬ ಸಾಮಾನ್ಯ ಟ್ಯಾಕ್ಸಿ ಚಾಲಕನ ಉತ್ತರ ನಿಜಕ್ಕೂ ಆಶ್ಚರ್ಯಕರವಾಗಿತ್ತು -“ಹೌದು. ನನಗೆ ನಿಜಕ್ಕೂ ತೊಂದರೆ ಆಗಿತ್ತು. ಆದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ನಾವೆಲ್ಲ ಸ್ವಲ್ಪ ತೊಂದರೆ ಸಹಿಸಿಕೊಳ್ಳಬೇಕು ತಾನೆ? ಮೋದಿ ದೇಶಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ.”