Home » Kannada » General » ತೆರೆದ ಪುಸ್ತಕ ಪರೀಕ್ಷೆ (Open book exam)

ತೆರೆದ ಪುಸ್ತಕ ಪರೀಕ್ಷೆ (Open book exam)

ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್‌ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು ತಪ್ಪಾಗಿ ವರದಿ ಮಾಡಿದೆ. ಆ ಪೋಸ್ಟಿನಲ್ಲಿ ಎರಡು ವಿಷಯಗಳಿಗೆ ನಾನು ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ. ಅದರಲ್ಲಿ ಮೊದಲನೆಯದಾದ ತೆರೆದ ಪುಸ್ತಕ ಪರೀಕ್ಷೆ (open book exam) ಬಗ್ಗೆ ಇಲ್ಲಿ ಬರೆಯುತ್ತೇನೆ.

ಈ open book exam ಬಗ್ಗೆ ನನಗೆ ಚೆನ್ನಾಗಿಯೇ ತಿಳಿದಿದೆ. ಎಷ್ಟರ ಮಟ್ಟಿಗೆ ಎಂದರೆ ಮುಂಬಯಿಯಲ್ಲಿದ್ದಾಗ ನಾನೇ ಇಂತಹ ಪರೀಕ್ಷೆಗಳನ್ನು ನಡೆಸಿದ್ದೇನೆ. ಮುಂಬಯಿಯಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದಾಗ ಅಲ್ಲಿಯ ಅಧಿಕಾರಿಗಳ ಸಂಘದ ವತಿಯಿಂದ ಹತ್ತನೇ ತರಗತಿ ಪಾಸಾದ ಮಕ್ಕಳಿಗೆ ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ (BASIC language) ಪಾಠ ಮಾಡುತ್ತಿದ್ದೆ. ಅದರ ಕೊನೆಯಲ್ಲಿ ನಾನೇ ತೆರೆದ ಪುಸ್ತಕ ಪರೀಕ್ಷೆ ನಡೆಸಿದ್ದೆ. ಬಿಎಆರ್‌ಸಿಯಲ್ಲಿ ಹೊಸದಾಗಿ ಸೇರಿದ ವಿಜ್ಞಾನಿಗಳಿಗೆ ನಡೆಸುವ ತರಬೇತಿಯಲ್ಲೂ ನಾನು ಪಾಠ ಮಾಡಿದ್ದೆ. ಅಲ್ಲೂ ತೆರೆದ ಪುಸ್ತಕ ಪರೀಕ್ಷೆ ನಡೆಸಿದ್ದೆ.

ತೆರೆದ ಪುಸ್ತಕ ಪರೀಕ್ಷೆ ನಿಜಕ್ಕೂ ಉತ್ತಮ ಆಲೋಚನೆ. ಆದರೆ ಇದನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಎಲ್ಲ ವಿಷಯಗಳಿಗೆ ನಡೆಸಲು ಸಾಧ್ಯವಿಲ್ಲ. ಬೇಕಿದ್ದರೆ ಗಣಿತಕ್ಕೆ ಪ್ರಯೋಗಾತ್ಮಕವಾಗಿ ನಡೆಸಿ ನೋಡಬಹುದು. ವಿಜ್ಞಾನಕ್ಕೂ ನಡೆಸಬಹುದು. ಭಾಷೆ, ಸಮಾಜ, ಇತಿಹಾಸ ಇಂತಹ ವಿಷಯಗಳಿಗೆ ಸಾಧ್ಯವಿಲ್ಲ. ಹಕ್ಕಿ ಹಾರುತಿದೆ ನೋಡಿದಿರಾ ಪದ್ಯವನ್ನು ಯಾರು ಬರೆದದ್ದು ಎಂದು ಕೇಳಿದರೆ ಮಕ್ಕಳಿಗೆ ಆಲೋಚನಾ ಶಕ್ತಿಯನ್ನು ಕಲಿಸಿದಂತಾಗುತ್ತದೆಯೇ? ಅದರ ಬದಲಿಗೆ ಹಕ್ಕಿ ಹಾರುತಿದೆ ನೋಡಿದಿರಾ ಹಾಡಿನಲ್ಲಿ ಬೇಂದ್ರೆಯವರು ಕರಿನರೆ ಬಣ್ಣದ ರೆಕ್ಕೆಗಳು ಎಂದು ಏನನ್ನು ಸೂಚಿಸಿದ್ದಾರೆ ಎಂದು ಕೇಳಿದರೆ ಸ್ವಲ್ಪ ಮಟ್ಟಿಗೆ ಆಲೋಚನೆಗೆ ಹಚ್ಚಿದಂತಾಗುತ್ತದೆ. ಪಾಣಿಪತ್ ಯುದ್ಧ ಯಾವಾಗ ನಡೆಯಿತು ಎಂದು ಇಂತಹ ಪರೀಕ್ಷೆಯಲ್ಲಿ ಕೇಳುವಂತಿಲ್ಲ. ಶಿಕ್ಷಣ ತಜ್ಞರು ಕುಳಿತು ಚರ್ಚಿಸಿ ತೀರ್ಮಾನಿಸಬೇಕಾದ ವಿಷಯವಿದು.

ತೆರೆದ ಪುಸ್ತಕ ಪರೀಕ್ಷೆ ವಿದ್ಯಾರ್ಥಿಯ ಆಲೋಚನಾಶಕ್ತಿಯನ್ನು ಪರೀಕ್ಷಿಸುತ್ತದೆ. ಈಗಿನಂತೆ ಬಾಯಿಪಾಠ ಮಾಡುವುದನ್ನಲ್ಲ. ಆದರೆ ನಮ್ಮ ಎಷ್ಟು ಜನ ಅಧ್ಯಾಪಕರುಗಳು ಈ ನಮೂನೆಯಲ್ಲಿ ಹೇಳಿ ಕೊಡಲು ಮತ್ತು ಪರೀಕ್ಷಿಸಲು ಸಿದ್ಧರಾಗಿದ್ದಾರೆ? ಶಾಲೆಯಲ್ಲಿ ಟೀಚರು ಕೊಟ್ಟ ನೋಟ್ಸಿನಲ್ಲಿರುವ ವಾಕ್ಯಗಳನ್ನು ಹಾಗೆಯೇ ಬರೆದರೆ ಮಾತ್ರ ಮಾರ್ಕು ನೀಡುವ ಟೀಚರುಗಳೇ ತುಂಬಿದ್ದಾರೆ. ಇದನ್ನು ನಾನು ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾಗ ಪೇರೆಂಟ್ ಟೀಚರ್ಸ್ ಮೀಟಿಂಗ್‌ಗಳಲ್ಲಿ ಭಾಗವಹಿಸಿ ಆದ ಅನುಭವದಿಂದ ಹೇಳುತ್ತಿದ್ದೇನೆ. ನನ್ನ ಮಕ್ಕಳ ಮೇಲೆ ಟೀಚರುಗಳ ದೂರು ಏನಿತ್ತೆಂದರೆ ಅವರು ನೋಟ್ಸಿನಲ್ಲಿ ಕೊಟ್ಟಂತೆ ಬರೆಯುವುದಿಲ್ಲ ಎಂದು. ಸ್ವಂತ ವಾಕ್ಯದಲ್ಲಿ ಬರೆದರೇ ಸಹಿಸದ ಟೀಚರುಗಳು ಸ್ವಂತ ಅಭಿಪ್ರಾಯವನ್ನು ಮಾನ್ಯ ಮಾಡುತ್ತಾರೆಯೇ?

ತೆರೆದ ಪುಸ್ತಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಲೂ ತುಂಬ ಕಷ್ಟವಿದೆ. ಪುಸ್ತಕದಲ್ಲಿ ನೀಡಿದ ಮಾಹಿತಿಯನ್ನೇ ನೇರವಾಗಿ ಕೇಳುವಂತಿಲ್ಲ. ಅದರ ಆಧಾರದಲ್ಲಿ ವಿದ್ಯಾರ್ಥಿ ಆಲೋಚಿಸಿ ಬರೆಯಲು ಪ್ರೇರೇಪಿಸುವಂತೆ ಪ್ರಶ್ನೆ ಪತ್ರಿಕೆ ರೂಪಿಸಬೇಕು. ಇದೇನೂ ಸುಲಭದ ಕೆಲಸವಲ್ಲ. ಒಂದು ಉದಾಹರಣೆ ನೋಡೋಣ- ಓಮ್ಸ್ ಲಾ ಎಲ್ಲರಿಗೂ ಗೊತ್ತು. V=IR & W=VI. ಆದರೆ ಇದನ್ನೇ ಆಧರಿಸಿ ಪ್ರಶ್ನೆ ಕೇಳಿ ನೋಡೋಣ. ಒಂದು ಇಸ್ತ್ರಿ ಪೆಟ್ಟಿಗೆಯ ವಾಟೇಜ್ 1000 ಇದೆ, ಅದಕ್ಕೆ ಎಷ್ಟು ಆಂಪಿಯರ್‌ನ ಫ್ಯೂಸ್ ಹಾಕಬೇಕು ಎಂದು ಪ್ರಶ್ನೆ ತಯಾರಿಸಿದರೆ ವಿದ್ಯಾರ್ಥಿ ಇರಲಿ ಅರ್ಧದಷ್ಟು ಅಧ್ಯಾಪಕರುಗಳಿಗೂ ಉತ್ತರ ಗೊತ್ತಾಗಲಾರದು. ಈ ನಮೂನೆಯ ಪ್ರಶ್ನೆ ಪತ್ರಿಕೆ ತಯಾರಿಸಲು ಎಷ್ಟು ಜನ ಅಧ್ಯಾಪಕರುಗಳಿಗೆ ಸಾಧ್ಯವಿದೆ?

ಆದುದರಿಂದ ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ವಿಷಯಗಳಿಗೂ ತೆರೆದ ಪುಸ್ತಕ ಪರೀಕ್ಷೆ ನಡೆಸುವಂತಿಲ್ಲ.

ವಸ್ತು ನಿಷ್ಠ ಪ್ರತಿಕ್ರಿಯೆಗಳಿಗೆ ಮಾತ್ರ ಸ್ವಾಗತ.

2 thoughts on “ತೆರೆದ ಪುಸ್ತಕ ಪರೀಕ್ಷೆ (Open book exam)

  1. vijaya kumar says:

    we should bring this in phases, may be first in higher education like medicine, engineering. But when a minister proposes idea, it is illogical to call it is a bad Idea. Or else we wont change the system for better. It should trigger more healthy discussion.

  2. Shankaranarayana Upadhyaya says:

    Open book, ಮಾದರಿಯ ಪರೀಕ್ಷೆಗಳು ಒಮ್ಮೆಗೇ ಅನುಷ್ಠಾನಕ್ಕೆ ತರುವುದು ಹುಚ್ಚಾಟವೇ ಆದೀತು. ಹಂತ ಹಂತವಾಗಿ ಪ್ರಯೋಗಿಸುತ್ತಾ ಬಂದರೆ ಕೆಲವು ವರ್ಷಗಳಲ್ಲಿ ಸಾರ್ವತ್ರಿಕವಾಗಿ ಮಾಡುವ ಸಾಧ್ಯತೆ ಇದೆ. ಚಿಕ್ಕ ಮಕ್ಕಳಿಂದ ಪ್ರಾರಂಭವಾಗಬೇಕು ಈ ಕ್ರಮ. ಮೊದಲಿಗೆ ಪೂರ್ವಪ್ರಾಥಮಿಕ ಹಂತದಲ್ಲಿ ನಂತರ ಕಿರಿಯ ಪ್ರಾಥಮಿಕ ಹೀಗೆ. ಓಪನ್ ಬುಕ್ ಪರೀಕ್ಷೆ ಮಾಡಬೇಕಾದರೆ ಅದಕ್ಕೆ ಸರಿಯಾದ ಪಠ್ಯವನ್ನು ಮಾಡಿಕೊಳ್ಳಬೇಕು, ಈಗ ಇರುವ ಸಿಲಬಸ್ ಅಷ್ಟು ಸಮರ್ಪಕವಾಗಿ ಒಗ್ಗುವುದಿಲ್ಲ‌ ಎಂದು ನನ್ನ ಅಭಿಪ್ರಾಯ.

Leave a Reply

Your email address will not be published. Required fields are marked *

*
*