Home » Kannada » ಕಂಗ್ಲಿಶ್ ಶೂರರಿಗೆ

ಕಂಗ್ಲಿಶ್ ಶೂರರಿಗೆ

ಸುಮಾರು ೩೦ ವರ್ಷಗಳ ಕಾಲ ಹಿಂದೆ ಹೋಗೋಣ. ಆಗಿನ ಕಾಲದಲ್ಲಿ ಗಣಕಗಳಲ್ಲಿ ಕನ್ನಡವಿರಲಿಲ್ಲ. ಆಗ ನಾವೆಲ್ಲ ಕನ್ನಡವನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆಯುತ್ತಿದ್ದೆವು. ಬೇರೆ ಗತಿಯಿರಲಿಲ್ಲ. ಉದಾಹರಣೆಗೆ “naanu naale nimma manege bruttene”. ಈ ವಿಧಾನವನ್ನು ಕಂಗ್ಲಿಶ್ ಎನ್ನುತ್ತೇವೆ. ಈಗೀಗ ಅಂತರಜಾಲದಲ್ಲಿ, ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಇವುಗಳ ಹಾವಳಿ ತುಂಬ ಜಾಸ್ತಿಯಾಗಿದೆ.

 

ಈಗ ಕಾಲ ಬದಲಾಗಿದೆ. ಗಣಕ ಮಾತ್ರವಲ್ಲ, ಬಹುತೇಕ ಎಲ್ಲ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್‌ಗಳಲ್ಲೂ ಕನ್ನಡವನ್ನು ಬಳಸಬಹುದಾಗಿದೆ. ಗಣಕದಲ್ಲಿ ಬಳಸುವ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (operating systems) ಕನ್ನಡವನ್ನು ಊಡಿಸಲು ಕೀಲಿಮಣೆ ತಂತ್ರಾಂಶ ಲಭ್ಯವಿದೆ.

 

ಗಣಕಗಳಲ್ಲಿ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ಕನ್ನಡವನ್ನು ಬಳಸಲು ಹಲವು ವಿಧಾನಗಳಿವೆ. ಪೂರ್ತಿ ಪಟ್ಟಿಯನ್ನು ವಿಕಾಸ್ ಹೆಗಡೆ ನೀಡಿದ್ದಾರೆ. ಗೂಗಲ್ ಕ್ರೋಮ್ ಬಳಸುವವರಾದರೆ ಜಾಲತಾಣಗಳಲ್ಲಿ ಕನ್ನಡದಲ್ಲಿ ಬರೆಯಲು ಒಂದು ಸರಳ ವಿಧಾನ ಇದೆ. ಅದನ್ನು ಓಂಶಿವಪ್ರಕಾಶ ವಿವರಿಸಿದ್ದಾರೆ.

 

ಸ್ಮಾರ್ಟ್‌ಫೋನ್‌ಗಳ (ಜೊತೆಗೆ ಟ್ಯಾಬ್ಲೆಟ್ ಮತ್ತು ಐಪ್ಯಾಡ್) ವಿಷಯಕ್ಕೆ ಬಂದಾಗ ಇತ್ತೀಚಿನ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಎಲ್ಲವುಗಳಲ್ಲಿ ಕನ್ನಡದ ತೋರುವಿಕೆ (ರೆಂಡರಿಂಗ್) ಇದೆ. ಸೂಕ್ತ ಕೀಲಿಮಣೆ ತಂತ್ರಾಂಶವನ್ನು ಹಾಕಿಕೊಳ್ಳಬೇಕಷ್ಟೆ. ಆಂಡ್ರೋಯಿಡ್‌ ಬಳಸುವವರು Anysoft keyboard ಮತ್ತು Kannada for Anysoftkeyboard ಹಾಕಿಕೊಳ್ಳಬಹುದು. ಐಫೋನ್ ಮತ್ತು ಐಪ್ಯಾಡ್ ಬಳಸುವವರು iKannada ಬಳಸಬಹುದು. ವಿಂಡೋಸ್ ಫೋನ್‌ಗೆ Type Kannada ಎಂಬ ಆಪ್ ಲಭ್ಯವಿದೆ. ಇವೆಲ್ಲ ಏನನ್ನು ತೋರಿಸುತ್ತವೆ ಎಂದರೆ ಸವಲತ್ತುಗಳು ಲಭ್ಯವಿವೆ. ನೀವು ಅವುಗಳನ್ನು ಹುಡುಕಿ ಹಾಕಿಕೊಳ್ಳಬೇಕಷ್ಟೆ. ಕನ್ನಡಕ್ಕಾಗಿ ಇಷ್ಟು ಸ್ವಲ್ಪ ಕಷ್ಟಪಡಬಹುದು.

 

(ಮೇ ೨೯, ೨೦೧೪ರಂದು ಸೇರಿಸಿದ್ದು) ವಿಕಾಸ ಹೆಗಡೆಯವರು ಮೊಬೈಲ್ ಫೋನ್‌ಗಳಲ್ಲಿ ಕನ್ನಡ ಟೈಪಿಸುವುದು ಹೇಗೆ ಎಂಬ ಬಗ್ಗೆ ವಿವರವಾದ ಲೇಖನ ಬರೆದಿದ್ದಾರೆ. ಅದು ಇಲ್ಲಿದೆ.

 

ಇಷ್ಟೆಲ್ಲ ಇದ್ದರೂ ಕಂಗ್ಲಿಶ್  ಬಳಸುವವರಲ್ಲಿ ಮೂರು ವಿಧ –

  1. ತಮ್ಮ ಗ್ಯಾಜೆಟ್ (ಗಣಕ, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್) ನಲ್ಲಿ ಕನ್ನಡ ಸಾಧ್ಯವಿದೆ ಎಂಬ ಅರಿವಿಲ್ಲದವರು. ಅಂತಹವರಿಗೆ ಸಹಾಯ ಮಾಡಲು ನಾನು ಸಿದ್ಧ.
  2. ತಮ್ಮ ಗ್ಯಾಜೆಟ್‌ನಲ್ಲಿ ಕನ್ನಡ ಸಾಧ್ಯವಿದೆ ಎಂದು ತಿಳಿದಿದೆ. ಆದರೆ ಅದನ್ನು ಚಾಲನೆ ಮಾಡಲು ಮತ್ತು ಕಲಿಯಲು ಇಚ್ಛಾಶಕ್ತಿ ಇಲ್ಲದವರು ಅಥವಾ ಸೋಮಾರಿತನದವರು.
  3. ಎಲ್ಲವೂ ಗೊತ್ತಿದೆ. ಆದರೆ ನಾನು ಇರುವುದೇ ಹೀಗೆ. ನಾನು ಕಂಗ್ಲಿಶ್ ಅನ್ನೇ ಬಳಸುತ್ತೇನೆ. ಬೇಕಾದರೆ ಓದಿ. ಕಂಗ್ಲಿಶ್ ಕಷ್ಟವಾದರೆ ಓದಬೇಡಿ.  ಎನ್ನುವವರು.

೨ ಮತ್ತು ೩ ವಿಧದವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ತನ್ನಿಚ್ಛೆಗೂ ಬೋಳುತಲೆಗೂ ಮದ್ದಿಲ್ಲ.

 

ಕಂಗ್ಲಿಶ್ ಯಾಕೆ ಬೇಡ?

ಕಂಗ್ಲಿಶ್ ಯಾಕೆ ಬೇಡ ಎನ್ನುವುದಕ್ಕೆ ಎರಡು ಕಾರಣಗಳನ್ನು ನೀಡಬಹುದು. ಮೊದಲನೆಯದಾಗಿ ಕಂಗ್ಲಿಶ್‌ನಲ್ಲಿ ಬರೆದುದನ್ನು ಓದಲು ತುಂಬ ಶ್ರಮ ಪಡಬೇಕು. ಎರಡನೆಯದು ಮುಖ್ಯ ಕಾರಣ. ಅದೇನೆಂದರೆ ಕಂಗ್ಲಿಶ್‌ನಲ್ಲಿ ಬರೆದರೆ ಅಪಾರ್ಥಕ್ಕೆಡೆಮಾಡಿಕೊಡುತ್ತದೆ ಎಂಬುದು. ಇದನ್ನು ನಾನು ಹಲವು ಸಲ ಬರೆದಿದ್ದೇನೆ. ಕೆಲವು ಉದಾಹರಣೆಗಳು – “kotyadhipati”. ಇದು ಕೋತ್ಯಾಧಿಪತಿಯೂ ಇರಬಹುದು,  ಕೋಟ್ಯಾಧಿಪತಿಯೂ ಇರಬಹುದು. “ನಡೆ ಮುಂದೆ” ಎನ್ನುವುದನ್ನು ಕಂಗ್ಲಿಶ್‌ನಲ್ಲಿ “nade munde” ಎಂದು ಬರೆದರೆ? ಇಂಗ್ಲಿಶ್‌ನಲ್ಲಿ “ಶ್ರೀಕಾಂತ” ಮತ್ತು “ಶ್ರೀಕಂಠ” ಎರಡನ್ನೂ ಒಂದೇ ರೀತಿ ಬರೆಯಲಾಗುತ್ತದೆ.  “railinalli rama baruttiddare” ಎಂದು ಇಮೈಲ್ ಮೂಲಕ ಸಂದೇಶ ಕಳುಹಿಸಿದರೆ ಆತ ರೈಲು ನಿಲ್ದಾಣಕ್ಕೆ ಹೋಗಿ ರಾಮ ಎನ್ನುವ ಗಂಡಸನ್ನು ಹುಡುಕಬೇಕೆ ಅಥವಾ ರಮಾ ಎನ್ನುವ ಹೆಂಗಸನ್ನು ಹುಡುಕಬೇಕೆ? “ಇಲ್ಲಿ ಹೇಳಬೇಡ” ಎನ್ನುವುದಕ್ಕೆ “illi helabeda” ಎಂದು ಬರೆದರೆ? ಇಂತಹ ಉದಾಹರಣೆಗಳನ್ನು ಎಷ್ಟು ಬೇಕಾದರೂ ಕೊಡಬಹುದು.

ಫೇಸ್‌ಬುಕ್‌ನಲ್ಲಿ ಹಲವು ಜನ ದೊಡ್ಡ ದೊಡ್ಡ ಪ್ಯಾರಾಗಳನ್ನೇ ಕಂಗ್ಲಿಶ್‌ನಲ್ಲಿ ಬರೆಯುತ್ತಾರೆ. ನಾನು ಅವುಗಳನ್ನು ಓದುವ ಶ್ರಮ ತೆಗೆದುಕೊಳ್ಳುವುದಿಲ್ಲ. ನನ್ನಂತೆ ಹಲವು ಜನರಿದ್ದಾರೆ.

 

ಕನ್ನಡ ಯಾಕೆ ಬೇಕು?

ಅಂತರಜಾಲದಲ್ಲಿ ಕನ್ನಡದ ಬಳಕೆ ಅತೀ ಅಗತ್ಯ. ಮೊನ್ನೆಯಷ್ಟೆ ಗೂಗ್ಲ್‌ನವರು ಏರ್ಪಡಿಸಿದ್ದ ಭಾರತೀಯ ಭಾಷೆಗಳಲ್ಲಿ ಆಪ್ ತಯಾರಿಯ ಕಾರ್ಯಾಗಾರಕ್ಕೆ ಹೋಗಿದ್ದೆ. ಅಲ್ಲಿ ಭಾಗವಹಿಸಿದ್ದ ಕನ್ನಡಿಗರ ಒಂದು ಪ್ರಮುಖ ದೂರು ಎಂದರೆ ಅಂತರಜಾಲದಲ್ಲಿ ಗೂಗ್ಲ್ ಬಳಸುವ ಜಾಹಿರಾತಿನ ಸವಲತ್ತಿನಲ್ಲಿ (Google AdSense, Admob) ಕನ್ನಡವಿಲ್ಲ ಎಂಬುದು. ನೀವು ಜಾಲತಾಣ ನಡೆಸುವವರಾದರೆ ನಾನು ಏನು ಹೇಳುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಜಾಲತಾಣದಲ್ಲಿ ಗೂಗ್ಲ್ ಜಾಹಿರಾತು  (Adsense) ಹಾಕಿಕೊಳ್ಳಬಹುದು. ಈ ಗೂಗ್ಲ್ ಜಾಹಿರಾತು ಕೆಲಸ ಮಾಡುವ ವಿಧಾನ ಹೀಗಿದೆ -ನಿಮ್ಮ ಜಾಲತಾಣದ ಪುಟದಲ್ಲಿ ಬಳಕೆಯಾಗಿರುವ ಪದಗಳನ್ನು ಅದು ಓದುತ್ತದೆ. ಅದರಲ್ಲಿ ಬಳಸಲಾದ ಪದವನ್ನು ಆಧರಿಸಿ ಅದು ಅದಕ್ಕೆ ಸರಿಹೊಂದುವ ಜಾಹೀರಾತನ್ನು ಪಕ್ಕದಲ್ಲಿ ತೋರಿಸುತ್ತದೆ. ಆ ಜಾಹೀರಾತಿನ ಮೇಲೆ ಓದುಗರು ಕ್ಲಿಕ್ಕಿಸಿದರೆ ನಿಮಗೆ ಹಣ ಬರುತ್ತದೆ. ಒಂದು ಉದಾಹರಣೆ – ನಿಮ್ಮ ಪುಟದಲ್ಲಿ Beluru ಎಂಬ ಪದ ಬಂದಿದೆ ಎಂದಿಟ್ಟುಕೊಳ್ಳಿ. ಆಗ ಗೂಗ್ಲ್ ಜಾಹೀರಾತು ಕರ್ನಾಟಕ ಪ್ರವಾಸೋದ್ಯಮ, ಪ್ರವಾಸ ಏರ್ಪಡಿಸುವ ಕಂಪೆನಿಗಳ ಜಾಹಿರಾತನ್ನು ತೋರಿಸುತ್ತದೆ. ಆದರೆ ಬೇಲೂರು ಎಂಬ ಪದ ಕನ್ನಡ ಲಿಪಿಯಲ್ಲಿ ಇದ್ದರೆ ಅದು ಇಂತಹ ಜಾಹಿರಾತನ್ನು ತೋರಿಸುವುದಿಲ್ಲ. ಯಾಕೆಂದರೆ ಗೂಗ್ಲ್ ಜಾಹಿರಾತಿನಲ್ಲಿ ಇನ್ನೂ ಕನ್ನಡದ ಪದಗಳನ್ನು ಸೇರಿಸಿಲ್ಲ. ಅದೇ ರೀತಿ ನೀವು ಆಂಡ್ರೋಯಿಡ್‌ಗೆ ಆಪ್ ಮಾಡಿ ವಿತರಿಸುವವರಾದರೆ ನಿಮ್ಮ ಆಪ್‌ನಲ್ಲಿ ಕನ್ನಡದ ಪದಗಳು ಮಾತ್ರ ಇರುವುದಾದರೆ ಆಗ ಜಾಹಿರಾತು ಬರುವುದಿಲ್ಲ ಮತ್ತು ನಿಮಗೆ ಹಣ ಸಂಪಾದನೆ ಆಗುವುದಿಲ್ಲ. ಇದು ಯಾಕೆ ಹೀಗೆ? ಇದಕ್ಕೆ ಉತ್ತರ ಬಲು ಸುಲಭ. ಅಂತರಜಾಲದಲ್ಲಿ ಕನ್ನಡದ ಬಳಕೆ ಎಷ್ಟಿದೆ ಎಂದು ಗೂಗ್ಲ್‌ ವಿಶ್ಲೇಷಣೆ ಮಾಡುತ್ತಿರುತ್ತದೆ. ಅದರ ಪ್ರಕಾರ ಅಂತರಜಾಲದಲ್ಲಿ ಕನ್ನಡದ ಬಳಕೆ ಇನ್ನೂ ಸಾಕಷ್ಟು ಮಟ್ಟದಲ್ಲಿಲ್ಲ.  ಅಂದರೆ ನಾವು ಅಂತರಜಾಲದಲ್ಲಿ ಕನ್ನಡದ ಬಳಕೆ ಜಾಸ್ತಿ ಮಾಡಬೇಕಾಗಿದೆ ಎಂದು ತೀರ್ಮಾನಿಸಬಹುದು.

 

ಕೆಲವು ಉತ್ಸಾಹಿ ಕನ್ನಡ ತಂತ್ರಜ್ಞರು ಕೆಲವು ಕನ್ನಡದ ಆಪ್ ಮತ್ತು ಕೀಲಿಮಣೆ ತಂತ್ರಾಂಶಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಅವರಲ್ಲಿ ಕೆಲವರು ಪ್ರಾರಂಭದಲ್ಲಿ ತಮ್ಮ ಆಪ್‌ಗಳಿಗೆ ದರ ನಿಗದಿ ಮಾಡಿದ್ದರು. ಕೊಂಡುಕೊಳ್ಳುವ ಉತ್ಸಾಹಿಗರು ಕಂಡುಬರದಿದ್ದಾಗ ಅವರು ಅವನ್ನು ಉಚಿತ ನೀಡತೊಡಗಿದರು. ಈಗಲಾದರೂ ಅವನ್ನು ಕೊಂಡುಕೊಂಡು ಬಳಸಿದರೆ ಗೂಗ್ಲ್‌ನವರಿಗೆ ಕನ್ನಡದ ಬಳಕೆ ಇದೆ ಎಂಬ ಅರಿವಾಗಿ, ನಾವು ಜಾಹಿರಾತಿನ ಪದಗಳಲ್ಲಿ ಕನ್ನಡದ ಪದಗಳನ್ನು ಸೇರಿಸಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ.

 

ಕನ್ನಡ ಸಾಹಿತಿಗಳೇ ಇಲ್ಲಿ ಸ್ವಲ್ಪ ಕಿವಿಗೊಡುತ್ತೀರಾ?

ನಿಮ್ಮ ಪುಸ್ತಕ ಅಮೆಝಾನ್‌ನ ಕಿಂಡಲ್‌ನಲ್ಲಿದೆಯೇ? ಇಲ್ಲವಾದಲ್ಲಿ ಯಾಕಿಲ್ಲ ಎಂದು ಯೋಚಿಸಿದ್ದೀರಾ? ನಿಮ್ಮ ಪುಸ್ತಕಗಳನ್ನು ನ್ಯೂಝೀಲಂಡ್, ದಕ್ಷಿಣ ಆಫ್ರಿಕಾ, ಸ್ವೀಡನ್ ಇತ್ಯಾದಿ ಸ್ಥಳಗಳಲ್ಲಿರುವವರು ಓದಬೇಡವೇ? ಯಾಕೆ ಅವರಿಗೆ ಓದಲು ದೊರಕುತ್ತಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ – ಅಮೆರಿಕದಲ್ಲಿ ಕುಳಿತು ಪಾಲಿಸಿ ತೀರ್ಮಾನ ಮಾಡುವ ಮಂದಿಗೆ (ಗೂಗ್ಲ್, ಮೈಕ್ರೋಸಾಫ್ಟ್, ಅಮೆಝಾನ್, ಅಡೋಬಿ, ಇತ್ಯಾದಿ) ಕನ್ನಡದ ಬಳಕೆದಾರರು ತುಂಬ ಕಡಿಮೆ ಎಂಬ ಭಾವನೆ. ಅದಕ್ಕೆ ಕಾರಣ ಬಹುಮಂದಿ ಅಂತರಜಾಲದಲ್ಲಿ ಕನ್ನಡ ಲಿಪಿಯ ಬದಲು ಕಂಗ್ಲಿಶ್ ಬಳಸುತ್ತಿರುವುದು.

ಬಹುಶಃ ಯಾವ ಕನ್ನಡ ಲೇಖಕನೂ ನನ್ನ ಪುಸ್ತಕ ಯಾಕೆ ಅಮೆಝಾನ್ ಕಿಂಡಲ್‌ನಲ್ಲಿ ಓದಲು ದೊರೆಯುತ್ತಿಲ್ಲ ಎಂದು ಯೋಚಿಸಿರಲಿಕ್ಕಿಲ್ಲ.

ಕಿಂಡಲ್‌ನಲ್ಲಿ ಪುಸ್ತಕಗಳನ್ನು ಪಿಡಿಎಫ್ ಫೈಲ್ ಆಗಿಸಿ ಲೋಡ್ ಮಾಡಿ ಓದಬಹುದು. ಆದರೆ ಕನ್ನಡ (ಯುನಿಕೋಡ್) ಪಠ್ಯದಲ್ಲೇ ಓದುವಂತಿದ್ದರೆ ಇನ್ನೂ ಹಲವು ಸೌಲಭ್ಯಗಳಿರುತ್ತವೆ –
೧. ಅಕ್ಷರಗಳನ್ನು ದೊಡ್ಡ ಸಣ್ಣ ಮಾಡಬಹುದು. ಅಕ್ಷರಗಳನ್ನು ಸಣ್ಣ ದೊಡ್ಡ ಮಾಡಿದಾಗ ವಾಕ್ಯಗಳು ಮುಂದಿನ ಸಾಲಿಗೆ ಸರಿಯಾಗಿ ಹೊರಳುತ್ತವೆ (wrapping)
೨. ಮಾಹಿತಿಯನ್ನು ಹುಡುಕಬಹುದು. ನಿಮ್ಮ ಪುಸ್ತಕವೊಂದರ ಯಾವುದೋ ಪುಟದಲ್ಲಿರುವ ಯಾವುದೋ ಒಂದು ವಾಕ್ಯ ಅಥವಾ ಪದವನ್ನು ಹುಡುಕಿ ನೇರವಾಗಿ ಆ ಪುಟಕ್ಕೆ ಲಂಘನ ಮಾಡಬಹುದು.
೩. ದೃಷ್ಟಿಶಕ್ತಿವಂಚಿತರು ಸ್ಕ್ರೀನ್ ರೀಡರ್ ತಂತ್ರಾಂಶ ಬಳಸಿ ನಿಮ್ಮ ಪುಸ್ತಕವನ್ನು ಓದಬಹುದು.

ಇಷ್ಟೆಲ್ಲಾ ಸೌಕರ್ಯ ಬೇಡ ಎನ್ನುತ್ತೀರಾ ಸಾಹಿತಿಗಳೇ?

 

ಆದುದರಿಂದ ಎಲ್ಲ ಕಂಗ್ಲಿಶ್ ಶೂರರಲ್ಲಿ ಮತ್ತೊಮ್ಮೆ ಕೇಳಿಕೊಳ್ಳುತ್ತಿದ್ದೇನೆ -ದಯವಿಟ್ಟು ಕಂಗ್ಲಿಶ್ ಬಳಸಬೇಡಿ, ಕನ್ನಡವನ್ನೇ ಬಳಸಿ.

 

13 thoughts on “ಕಂಗ್ಲಿಶ್ ಶೂರರಿಗೆ

  1. ಶ್ರೀ ಪವನಜರವರೆ,
    ನನ್ನದು ಆಂಡ್ರಾಯ್ಡ್ ಜೆಲಿಬೀನ್ ೪.೪ ಆದರೂ ಕನ್ನಡ ಅಕ್ಷರಗಳಿದ್ದಲ್ಲಿ ಖಾಲಿ ಖಾಲಿ. ದಯವಿಟ್ಟು ಪರಿಹಾರ ತಿಳಿಸಿ

  2. geetha. v says:

    ಲೇಖನ ಬಹಳ ಪ್ರಯೋಜನಕಾರಿ ಹಾಗೂ ಸ್ಪೂರ್ತಿದಾಯಕವಾಕಿದೆ. ಇದೆ ರೀತಿ ನೀವು ಕನ್ನಡದ ಬಗ್ಗೆ ಲೇಖನ ಬರೆಯಬೇಕಾಗಿ ವಿನಂತಿ.

  3. ಮಾಲಾ says:

    ಇಷ್ಟವಾಯಿತು ಈ ಲೇಖನ.

  4. pavanaja says:

    @ನೂತನ್,

    ನಿಮ್ಮದು ಯಾವ ಕಂಪೆನಿಯ ಫೋನ್? ಮಾದರಿ ಸಂಖ್ಯೆ ಯಾವುದು? ಆಂಡ್ರೋಯಿಡ್ 4.1 ಮತ್ತು ನಂತರದ ಆವೃತ್ತಿಗಳಲ್ಲಿ ಕನ್ನಡದ ರೆಂಡರಿಂಗ್ ಸೌಲಭ್ಯ ಇದೆ. ಆದರೆ ಕೆಲವು ಫೋನ್ ತಯಾರಕರು ಅವುಗಳನ್ನು ಅಳವಡಿಸಿರುವುದಿಲ್ಲ. ನೀವು ಫೋನ್ ತಯಾರಕರಿಗೆ ಇಮೈಲ್ ಬರೆದು ಸ್ವಲ್ಪ “ವಿಚಾರಿಸಿ”.

  5. Venkat says:

    ತುಂಬಾ ಸರಳವಾಗಿ ವಿವರಿಸಿದ್ದೀರಾ ..! ಧನ್ಯವಾದಗಳು.

  6. Harinignt says:

    ನಿಮ್ಮ ಈ ಲೇಖನ ಕಂಗ್ಲಿಷ್ ಬರೆಯುವ ಪ್ರತಿಯೊಬ್ಬನ ಮನ ಮುಟ್ಟಬೇಕು. ನನಗಂತೂ ಬಹಳ ಇಷ್ಟವಾಯಿತು.. ಸ್ವಲ್ಪವಾದರೂ ಕಷ್ಟ ಪಡದೆ, ಸುಖ ಭೋಜನ ಉಂಡೇನು ಲಾಭ ?

  7. Lakshmi Shrinath says:

    ತುಂಬಾ ಉಪಯುಕ್ತ ಮಾಹಿತಿ … ನಿಮಗೂ, ಲೇಖನವನ್ನು ಹಂಚಿಕೊಂಡ ಹರಿಣಿಯವರಿಗೂ ಧನ್ಯವಾದಗಳು

  8. ಸೋಮಶೇಖರ ಡಿ.ಎನ್. says:

    ಸರ್ ,ನಾನು 30-11-2014 ಕ್ಕೆ ಸರ್ಕಾರೀ ಉದ್ಯೋಗದಿಂದ ನಿವೃತ್ತನಾಗಲಿದ್ದೇನೆ.ಈ ಸಮಯದಲ್ಲಿ ನಾನು ಒಂದು ಮೊಬೈಲ್ ಖರೀದಿಸಲು ಇಚ್ಚಿಸಿದ್ದೇನೆ.ನನ್ನ ಬಜೆಟ್ ರು20,000/- ಆಯ್ಕೆಗಳು ಸ್ಯಾಮ್‌ಸಂಗ್ ಗ್ಯಾಲಕ್ಸ್ ಗ್ರಾಂಡ್-2,ಸೋನಿ ಎಕ್ಸ್‌ಪೀರಾ,ಮೈಕ್ರೋಮ್ಯಾಕ್ಸ್,ಮೋಟೋಜಿ ಅಥವಾ ಗೂಗಲ್ ನೆಕ್ಸಸ್ ನಿಮ್ಮ ಸಲಹೆ ಯಾವುದು ತಿಳಿಸುವಿರಾ.ಇದನ್ನು ಒಂದು ಮಾರ್ಗದರ್ಶನ ಅಂತಾ ಹೇಳಿ.ಆಯ್ಕೆ ನನ್ನದೆ .ನಂತರ ನಿಮ್ಮನ್ನು ದೂರುವುದಿಲ್ಲ(ಪ್ರಜಾವಾಣಿಯ ಗ್ಯಾಜೆಟ್ ಲೋಕದ ಖಾಯಂ ಓದುಗ ಆದರೂ ಗೊಂದಲವಿದೆ.)

  9. Azad IS says:

    ಪವನಜ ಸರ್ ಬಹಳ ುತ್ತಮ ಮಾಹಿತಿ ಮತ್ತು “ಕಣ್ಣು ಬಿಟ್ಟು ನೋಡಿ” ನಮ್ಮಲ್ಲಿ ಇಚ್ಛಾ ಶಕ್ತಿಯ ಕೊರತೆ ಮತ್ತು ಸೋಮಾರಿತನವೇ ಬಹುತೇಕ ಕನ್ನಡವನ್ನು ಕನ್ನಡಿಗರೇ ಕೊಲ್ಲುವುದಕ್ಕೆ ಕಾರಣ ಎನ್ನುವಂತಿದೆ ನಿಮ್ಮ ಲೇಖನ.
    ಹಲವು ಯುವಕರಲ್ಲದ ವಯಸ್ಕರು ತಮ್ಮ ಿಳಿವಯಸ್ಸಿನಲ್ಲೂ ಕನ್ನಡ ತಂತ್ರಾಂಶ ಅಳವಡಿಸಿ ಲೀಲಾಜಾಲವಾಗಿ ಬಳಸುವುದನ್ನು ಕಲಿತಿದ್ದಾರೆ, ಅವರನ್ನು ನೋಡಿ ಯುವಕರು ಕಲಿಯಬೇಕು.
    ಧನ್ಯವಾದ.

  10. ಸರ್,
    ಕನ್ನಡ ಸುದ್ದಿ ಪೋರ್ಟಲ್ ನಲ್ಲಿ google adsense ಹಾಕುವುದಕ್ಕೆ ಸಾಧ್ಯವಿದೆಯೇ? ಗೂಗಲ್
    ಆಡ್ ಸೆನ್ಸ್ ಕನ್ನಡದ ವೆಬ್ ಸೈಟ್‌ಗಳನ್ನು ಸ್ವೀಕರಿಸುತ್ತಿಲ್ಲ. ಇದಕ್ಕೇನಾದರೂ ಉಪಾಯವಿದೆಯೇ ದಯವಿಟ್ಟು ತಿಳಿಸಿ.

  11. T. Niranjana Prabhu says:

    Sir
    when we type “vu” the Kannada font looks like “ma”.
    Ex: “avu” looks like “ama”
    Is there any rectification for this in android phone.

  12. ಶ್ರಿಹುವಪ್ಪ says:

    ಗುರುಗಳೆ ಒಳ್ಳಯ ಮಾಹಿತಿ, ನೀವೆ ನನಗೆ ಪ್ರೇರಣೆ, ಇವತ್ತು ನಾನು ಸಂಪೂರ್ಣ ಕನ್ನಡ ಲಿಪಿ ಬಳಸುತ್ತ ಇದ್ದೇನೆ ಇದರೊಂದಿಗೆ ಆದಷ್ಟು ಕನ್ನಡ ಅಂಕಿಗಳು ಕೂಡ ಬಳಸುತ್ತ ಇದ್ದೇನೆ, , ಒಂದು ಸರ್ತಿ ನೀವು ಕನ್ನಡ ಲಿಪಿ ಬಳಸಿ ಸಂತ ಬೈದಂಗಿತ್ತು ಅದೆ ನನಗೆ ಪ್ರೇರಣೆ 🙂

    ದನ್ಯವಾದಗಳು.

  13. ಧನ್ಯವಾದಗಳು ಸರ್..ನಿಮಗೇ ತಿಳಿದಂತೆ ನಾನು ಅಮೆಜ಼ಾನ್ ಜತೆ ಹೋರಾಟಕ್ಕಿಳಿದು ಸೋತಿದ್ದೇನೆ. change.org ನಲ್ಲಿ ವಸುಧೇಂದ್ರ ಜತೆಗೆ ಪೆಟಿಶನ್ ಹಾಕಿದ ನಂತರವು ನಾನು ತಿಂಗಳಿಗೊಮ್ಮೆ ಅವರಿಗೆ ಕನ್ನಡ ಬಗ್ಗೆ ಮೈಲ್ ಮಾಡುತ್ತಲೇ ಇದ್ದೇನೆ.. ಇತೀಚೆಗೆ ಕೆಲವು ನಾಲ್ಕು ಭಾರತೀಯ ಭಾಷೆ ಗಳಿವೆ ಸಪೋರ್ಟ್ ಇತ್ತಿದ್ದಾರೆ. ಅದರಲ್ಲಿ ಕನ್ನಡ ಇನ್ನೂ ಇಲ್ಲ, ಯಾವ ಭರವಸೆಯು ದೊರೆತಿಲ್ಲ…

Leave a Reply

Your email address will not be published. Required fields are marked *

*
*