ಕಾರ್ಡ್ ಪಂಚಿಂಗ್ ಮತ್ತು ಪ್ಲಾಟರ‍್
ನಮ್ಮ ಪ್ರೋಗ್ರಾಂನ ಔಟ್‌ಪುಟ್‌ನ ಮೊದಲ ಪುಟದಲ್ಲಿ ನಮ್ಮ ಹೆಸರನ್ನು ಅದು ಇಡೀ ಪುಟ ಬರುವಂತೆ ದೊಡ್ಡದಾಗಿ ಮುದ್ರಿಸುತ್ತಿತ್ತು. ಅಂದರೆ ದೊಡ್ಡ ಅಕ್ಷರಗಳಲ್ಲಿ ಅಲ್ಲ. ನಕ್ಷತ್ರ (*) ಗಳನ್ನು ದೊಡ್ಡ ಅಕ್ಷರದಂತೆ ಮುದ್ರಿಸುತ್ತತ್ತು. ಇದಕ್ಕೆ ಗಣಕ ಪರಿಭಾಷೆಯಲ್ಲಿ ASCII Art ಎಂಬ ಹೆಸರಿದೆ. ನಾವು ಈ ಪುಟವನ್ನು ಹಾಸ್ಟೆಲಿನಲ್ಲಿ ನಮ್ಮ ಕೊಠಡಿಯ ಬಾಗಿಲಿಗೆ ಅಂಟಿಸಿ ಹೆಮ್ಮೆ ಪಡುತ್ತಿದ್ದೆವು!
ನಾವು ಕಂಪ್ಯೂಟರ‍್ ಪ್ರೋಗ್ರಾಂ ಮಾಡಲು ಕಾರ್ಡ್‌ಗಳನ್ನು ಬಳಸುತ್ತಿದ್ದೆವು ಅಂದಿದ್ದೆನಲ್ಲ. ಒಂದು ಸಾಲಿನಲ್ಲಿ ಒಂದು ಸಣ್ಣ ತಪ್ಪಾದರೆ ಇಡಿ ಕಾರ್ಡನ್ನೆ ಪೂರ್ತಿಯಾಗಿ ಇನ್ನೊಮ್ಮೆ ಟೈಪ್ ಮಾಡಿ ತಯಾರಿಸಬೇಕಿತ್ತು. ಕೊನೆಗೊಮ್ಮೆ ಹೀಗೆ ಕೆಟ್ಟುಹೋದ ಕಾರ್ಡ್‌ಗಳು ತುಂಬ ಸಂಗ್ರಹವಾಗಿರುತ್ತಿದ್ದವು. ಈ ಕಾರ್ಡ್‌ಗಳಿಗೆ ಹಲವು ವರ್ಷಗಳ ನಂತರ ನಮ್ಮ ಮಕ್ಕಳು ಚಿಕ್ಕವಾಗಿದ್ದಾಗ ನಮ್ಮ ಮನೆಯಲ್ಲಿ ಒಂದು ಉಪಯೋಗವನ್ನು ಕಂಡುಕೊಂಡಿದ್ದೆವು. ಅದೇನಿರಬಹುದೆಂಬುದನ್ನು ನಿಮ್ಮ ಊಹೆಗೆ ಬಿಡುತ್ತಿದ್ದೇನೆ!
ಬಿಎಆರ್‌ಸಿಯಲ್ಲಿ ಆಗ ಯಾರಿಗೇ ಕಂಪ್ಯೂಟರ‍್ ಬಳಸಬೇಕಿದ್ದರೆ ಕಂಪ್ಯೂಟರ‍್ ವಿಭಾಗಕ್ಕೇ ಹೋಗಿ ಬಳಸಬೇಕಿತ್ತು. ಸ್ವಲ್ಪ ವರ್ಷಗಳ ನಂತರ ಮೊನಿಟರ‍್ ಉಳ್ಳ ಗಣಕಗಳ ಪ್ರವೇಶ ಆಯಿತು. ಅದರೂ ಅವು ಈಗಿನ ಗಣಕಗಳಂತೆ ಖಾಸಾ ಗಣಕಗಳಲ್ಲ (personal computer). ಈ ಗಣಕಗಳನ್ನು ಬಳಸಬೇಕಿದ್ದರೂ ಕಂಪ್ಯೂಟರ‍್ ಡಿಪಾರ್ಟ್‌ಮೆಂಟ್‌ಗೇ ಹೋಗಬೇಕಿತ್ತು. ಅಲ್ಲಿ ಕೆಲವು ಟರ್ಮಿನಲ್‌ಗಳನ್ನು ಒಂದು ಕೋಣೆಯಲ್ಲಿ ಸಾಲಾಗಿ ಇಟ್ಟಿದ್ದರು. ಟರ್ಮಿನಲ್ ಅಂದರೆ ಒಂದು ಮೋನಿಟರ‍್ ಪರದೆ ಮತ್ತು ಕೀಬೋರ್ಡ್ ಅಷ್ಟೆ. ಇದು ಮುಖ್ಯ ಗಣಕಕ್ಕೆ ಕೇಬಲ್ ಮೂಲಕ ಸಂಪರ್ಕ ಹೊಂದಿರುತ್ತಿತ್ತು. ಈ ಗಣಕ ಬಂದ ನಂತರ ಪ್ರೋಗ್ರಾಮ್ಮಿಂಗ್ ಸ್ವಲ್ಪ ವೇಗವಾಗಿ ಆಗತೊಡಗಿತು. ಮೊದಲಿನಂತೆ ಕಾರ್ಡ್ ತೂತು ಮಾಡುವ ಕೆಲಸ ಇರಲಿಲ್ಲ. ತಪ್ಪು ಮಾಡಿದರೆ ಅದು ಇಂಗ್ಲಿಷಿನಲ್ಲೇ ಮತ್ತು ಆಗಿಂದ್ದಾಗಲೇ ಬಯ್ಯುತ್ತಿತ್ತು, ಹಿಂದಿನ ಗಣಕದಂತೆ ರಷ್ಯನ್ ಭಾಷೆಯಲ್ಲಲ್ಲ! ಇಲ್ಲೂ ನಮ್ಮ ಪ್ರೋಗ್ರಾಂನ ಔಟ್‌ಪುಟ್ ಅನ್ನು ನಾವು ಕಾಗದದಲ್ಲಿ ಮುದ್ರಿಸಿ ತೆಗೆದುಕೊಂಡು ಹೋಗಿ ಅದನ್ನು ಪರಿಶೀಲಿಸುತ್ತಿದ್ದೆವು.
ಬಿಎಆರ್‌ಸಿಯ ಗಣಕ ವಿಭಾಗದಲ್ಲಿ ದೊಡ್ಡ ಪ್ಲಾಟ್ಟರ‍್ ಇತ್ತು. ಅದರಲ್ಲಿ ದೊಡ್ಡ ಅಥವಾ ಚಿಕ್ಕ ಹಾಳೆಯನ್ನು ಜೋಡಿಸಿ ಸೂಕ್ತ ಪ್ರೋಗ್ರಾಂ ಮೂಲಕ ನಾವು ಪ್ಲಾಟಿಂಗ್ ಮಾಡಬಹುದಿತ್ತು. ನಾವು ಪ್ರಯೋಗಶಾಲೆಯಲ್ಲಿ ಪಡೆದ ಮಾಹಿತಿಯನ್ನು x-y ರೇಖಾಚಿತ್ರದ ಮೂಲಕ ಬಿಂಬಿಸಬೇಕು. ಇದನ್ನೇ ಪ್ಲಾಟಿಂಗ್ ಎನ್ನುವುದು. ಸಾಮಾನ್ಯವಾಗಿ ರಸಾಯನಶಾಸ್ತ್ರ ವಿಭಾಗದ ಎಲ್ಲ ವಿಜ್ಞಾನಿಗಳು ಗ್ರಾಫ್ ಕಾಗದದಲ್ಲೇ ಪ್ಲಾಟಿಂಗ್ ಮಾಡುತ್ತಿದ್ದರು. ನಾನು ರಸಾಯನಶಾಸ್ತ್ರ ವಿಭಾಗಕ್ಕೇ ಮೊದಲನೆಯವನಾಗಿ ಈ ಕಾರ್ಯಕ್ಕೆ ಗಣಕ ಮತ್ತು ಅದಕ್ಕೆ ಜೋಡಿಸಿದ್ದ ಪ್ಲಾಟರ‍್ ಬಳಸಿದೆ. ನಂತರ ರಸಾಯನಶಾಸ್ತ್ರ ವಿಭಾಗದ ಹಲವು ವಿಜ್ಞಾನಿಗಳು ನನ್ನ ಪ್ರೋಗ್ರಾಂ ಬಳಸಿ ತಮ್ಮ ಮಾಹಿತಿಯನ್ನು ಪ್ಲಾಟಿಂಗ್ ಮಾಡತೊಡಗಿದರು.
ಈ ಪ್ಲಾಟರ್‌ಗೆ x-y ಕೋಷ್ಟಕದಲ್ಲಿ ಏನೇ ಮಾಹಿತಿ ನೀಡಿ ಅದನ್ನು ಚಿತ್ರಿಸಲು ಸರಿಯಾದ ಪ್ರೋಗ್ರಾಂ ಊಡಿಸಿದರೆ ಅದು ಅದರ ಪ್ಲಾಟಿಂಗ್ ನೀಡುತ್ತಿತ್ತು ಅಂದೆನಲ್ಲ. ನಾನು ನನ್ನ ಹೆಸರನ್ನು ಕನ್ನಡ ಲಿಪಿಯಲ್ಲಿ ಒಂದು ಗ್ರಾಫ್ ಕಾಗದದಲ್ಲಿ ಬರೆದೆ. ಅನಂತರ ಅದರಲ್ಲಿಯ ಪ್ರತಿ ಚುಕ್ಕಿಗೂ x-y value ಕೋಷ್ಟಕ ತಯಾರಿಸಿದೆ. ಈ ಕೋಷ್ಟಕವನ್ನು ನನ್ನ ಪ್ರೋಗ್ರಾಂಗೆ ಊಡಿಸಿದಾಗ ಪ್ಲಾಟರ‍್ ಕಾಗದದಲ್ಲಿ ನನ್ನ ಹೆಸರನ್ನು ಕನ್ನಡ ಲಿಪಿಯಲ್ಲಿ ಬರೆಯಿತು. ಆಗಿನ ಕಾಲಕ್ಕೆ ಅದು ನನಗೆ ಒಂದು ರೀತಿಯ ಹೆಮ್ಮೆ ಆಗಿತ್ತು. ಈಗಿನವರಿಗೆ ಇದು ತುಂಬ silly ಅನ್ನಿಸಬಹುದು.
ನೋಡಿ – ನನ್ನ ಗಣಕಾವಲೋಕನ – ೧
nice to read your experiences sir. 50 years later youngsters might be amused if I say “I was using a laptop back in 2000…”