Home » Kannada » Tech related » ನನ್ನ ಗಣಕಾವಲೋಕನ – ೪

ನನ್ನ ಗಣಕಾವಲೋಕನ – ೪

ಪಿಡಿಪಿ-11 ರಿಂದ ಪಿಸಿಗೆ

ಸುಮಾರು ೧೯೮೮ರ ಸಮಯ ಇರಬೇಕು. ಬಿಎಆರ್‌ಸಿಯ ಕೆಮಿಸ್ಟ್ರಿ ಲ್ಯಾಬ್‌ಗೆ ಒಮದು ಲೇಸರ‍್ ಸ್ಪೆಕ್ಟ್ರೊಫೋಟೋಮೀಟರ‍್ ಬಂತು. ಅದನ್ನು ಬಳಸಿ ಯಾವುದಾದರೂ ವಸ್ತು (ಸಾಮಾನ್ಯವಾಗಿ ದ್ರವ ಅಥವಾ ಅನಿಲ) ವಿನ ಮೇಲೆ ಲೇಸರ‍್ ಕಿರಣವನ್ನು ಅತಿ ಕಡಿಮೆ ಸಮಯದಲ್ಲಿ ಹಾಯಿಸಿ ಅದರಿಂದ ಹೊಮ್ಮುವ ರೋಹಿತವನ್ನು (spectrum) ಪಡೆಯಬಹುದಿತ್ತು. ಅದನ್ನು ಇಂಗ್ಲೆಂಡಿನಿಂದ ತರಿಸಲಾಗಿತ್ತು. ಈ ಉಪಕರಣವನ್ನು ನಿಯಂತ್ರಿಸಿ ಮಾಹಿತಿ ಸಂಗ್ರಹಿಸುತ್ತಿದ್ದುದು ಒಂದು ಪಿಡಿಪಿ-11 ಗಣಕ.  ಎಲ್ಲ ಉಪಕರಣಗಳಂತೆ ಅದೂ ಸ್ವಲ್ಪ ಸಮಯದ ನಂತರ ಕೈಕೊಡಲರಾಂಭಿಸಿತು. ಆ ಉಪಕರಣದಲ್ಲಿ ಹಲವು ಉಪಕರಣಗಳನ್ನು ಬೇರೆ ಬೇರೆ ಕಂಪೆನಿಗಳಿಂದ ಕೊಂಡುಕೊಂಡು ಒಟ್ಟುಗೂಡಿಸಲಾಗಿತ್ತು. ಉದಾಹರಣೆಗೆ ಓಸಿಲೋಸ್ಕೋಪ್ ಮತ್ತು ಪಿಡಿಪಿ-11 ಗಣಕಗಳು ಅಮೆರಿಕದಿಂದ ಬಂದವಾಗಿದ್ದವು. ಉಪಕರಣದಲ್ಲಿ ತೊಂದರೆಯುಂಟಾದಾಗ ಅಮೆರಿಕದ ಕಂಪೆನಿಗಳಿಗೆ ಪತ್ರ ಬರೆದೆವು. ಆಗ ಅಲ್ಲಿಂದ ಖಾರವಾದ ಉತ್ತರ ಬಂತು. ಈ ಉಪಕರಣಗಳು ಭಾರತಕ್ಕೆ, ಅದರಲ್ಲೂ ಪರಮಾಣು ಶಕ್ತಿ ಇಲಾಖೆಗೆ, ನಿಷೇಧಿಸಲಾಗಿವೆ, ಅವು ನಿಮಗೆ ಹೇಗೆ ದೊರೆತವು? ಅವುಗಳಿಗೆ ನಾವು ಯಾವುದೇ ಸಹಾಯ ನೀಡುವುದಿಲ್ಲ ಎಂಬುದಾಗಿ.

ಈಗ ನಮಗೆ ಸಮಸ್ಯೆ ಎದುರಾಯಿತು. ಬಿಎಆರ್‌ಸಿಯಲ್ಲಿ ಕೆಲವು ಪಿಡಿಪಿ-11 ಗಣಕಗಳಿದ್ದವು. ಆದುದರಿಂದ ಅದರ ಪರಿಣತರೂ ಇದ್ದರು. ಅವರ ಸಹಾಯದಿಂದ ಕೆಲವು ತಿಂಗಳ ಮಟ್ಟಿಗೆ ಉಪಕರಣಕ್ಕೆ ಜೀವ ನೀಡಲು ಸಾಧ್ಯವಾಯಿತು. ಆದರೆ ಇದೇ ಸಮಸ್ಯೆ ಮತ್ತೆ ಮತ್ತೆ ಬಂದಾಗ ನಾವು ಒಂದು  ತೀರ್ಮಾನ ತೆಗೆದುಕೊಂಡೆವು. ಏನೆಂದರೆ ಪಿಡಿಪಿ-11 ಗಣಕವನ್ನು ತೆಗೆದು ಅದರ ಜಾಗದಲ್ಲಿ ಪಿಸಿ ಜೋಡಿಸುವುದು ಎಂದು. ಪಿಡಿಪಿ-11 ರ ಜೊತೆ ಬಂದ ಕ್ರಮವಿಧಿ (program) ಅದೃಷ್ಟಕ್ಕೆ Fortran ಭಾಷೆಯಲ್ಲಿತ್ತು. ಅದನ್ನು ಪಿಸಿಗೆ ಬದಲಾಯಿಸುವುದು ಕಷ್ಟವಿರಲಿಲ್ಲ. ಕೇಬಲ್ ಮತ್ತು ಇತರೆ ಕಾರ್ಡ್‌‌ಗಳನ್ನು ಸಂಪರ್ಕಿಸುವುದು ಹೇಗೆ ಎಂಬ ಸಮಸ್ಯೆ ಇತ್ತು. ಆಗ ಯಾರೋ ಹೇಳಿದರು –ನಮ್ಮ ವಿಭಾಗದ ಇನ್ನೊಂದು ಲ್ಯಾಬಿನ ಮೂಲೆಯಲ್ಲಿ ಒಂದು ಪಿಡಿಪಿ-11 ಗಣಕ ಯಾರೂ ಉಪಯೋಗಿಸದೆ ಮೂಲೆಯಲ್ಲಿ ಬಿದ್ದಿದೆ ಎಂದು. ನಾನು ಅದನ್ನು ಇಟ್ಟ ಜಾಗಕ್ಕೆ ಹೋಗಿ ಆ ಲ್ಯಾಬಿನ ವಿಜ್ಞಾನಿಯವರನ್ನು ವಿಚಾರಿಸಿದೆ. ಅವರಿಗೆ ಅದರ ಬಳಕೆ ಸರಿಯಾಗಿ ಗೊತ್ತಿರಲಿಲ್ಲ. ಎರಡು ಸ್ವಿಚ್‌ಗಳನ್ನು ಒಂದಾದ ನಂತರ ಒಂದರಂತೆ ಆನ್ ಮಾಡಬೇಕು ಎಂದಷ್ಟೆ ತಿಳಿದಿತ್ತು. ಅವರು ಹೇಳಿದಂತೆ ಆನ್ ಮಾಡಿದಾಗ ಅದು ಕೆಲಸ ಮಾಡಲಿಲ್ಲ. ನಾನು ಈ ಸ್ವಿಚ್‌ಗಳು ಏನು ಮಾಡುತ್ತವೆ ಎಂದು ಗಣಕವನ್ನು ಬಿಚ್ಚಿ ನೋಡಿದಾಗ ಆಶ್ಚರ್ಯ ಕಾದಿತ್ತು. ಅದರಲ್ಲಿ ಒಂದು ಸ್ವಿಚ್ ಒಳಗಿನಿಂದ ಎಲ್ಲಿಗೂ ಸಂಪರ್ಕವಿಲ್ಲದೆ ಸುಮ್ಮನೆ ಇತ್ತು. ಅದನ್ನು ಹಲವು ವರ್ಷಗಳಿಂದ ಬಳಸಿದವರಿಗೂ ಆ ಸ್ವಿಚ್ ನಿಜವಾಗಿ ಅಗತ್ಯ ಇರಲಿಲ್ಲ ಎಂದು ತಿಳಿದೇ ಇರಲಿಲ್ಲ.

ನಾವು ಪಿಡಿಪಿ ಜಾಗದಲ್ಲಿ ಪಿಸಿ ಕೂರಿಸಿದೆವು. ಕ್ರಮಿವಿಧಿಯನ್ನು ಮತ್ತೊಮ್ಮೆ ಪಿಸಿಯಲ್ಲಿ ಟೈಪಿಸಿ ತಯಾರಿಸಿದೆ. ಕೊನೆಗೂ ಉಪಕರಣ ಕೆಲಸ ಮಾಡಿದಾಗ ಏನೋ ಸಾಧಿಸಿದ ತೃಪ್ತಿ. ಒಂದು ಪ್ಲಾಟರ‍್ ಕೂಡ ಕೊಂಡುಕೊಂಡು ಅದಕ್ಕೆ ಜೋಡಿಸಿದೆ. ಉಪಕರಣದಿಂದ ಪಡೆದ ಮಾಹಿತಿಯನ್ನು ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದ ಸೂತ್ರಗಳಿಗನುಗುಣವಾಗಿ ಸಂಸ್ಕರಿಸಿ ವಿಶ್ಲೇಷಿಸಲು ತಂತ್ರಾಂಶವನ್ನೂ ಬರೆದೆ. ಗ್ರಾಫ್ ಪ್ಲಾಟರ್‌ನಲ್ಲಿ ಮುಡಿ ಬರುತ್ತಿತ್ತು. ಎಲ್ಲ ವಿಜ್ಞಾನಿಗಳು ಅದನ್ನು ಬಳಸಲು ಪ್ರಾರಂಭಿಸಿದರು.

ಇಲ್ಲೊಂದು ವಿಷಯ ಹೇಳಬೇಕು. ಬಿಎಆರ್‌ಸಿಯಲ್ಲಿ ನನ್ನ ಹುದ್ದೆ ಇದ್ದುದು ರಸಾಯನಶಾಸ್ತ್ರದ ವಿಜ್ಞಾನಿಯಾಗಿ. ಅಂದರೆ ನಾನು ರಸಾಯನಸಾಸ್ತ್ರದಲ್ಲಿ ಸಂಶೋಧನೆ ಮಾಡಬೇಕು. ಈ ಗಣಕದ ಕೆಲಸಗಳೆಲ್ಲ ಏನಿದ್ದರೂ ಒಂದು ಹಾಬ್ಬಿ ಎಂದೇ ಪರಿಗಣಿಸಲ್ಪಡುತ್ತಿತ್ತು. ಅಂದರೆ ನಾನು ಮಾಡಿದ ಕೆಲಸದಿಂದ ಬಿಎಆರ್‌ಸಿಗೆ ಎಷ್ಟೇ ಪ್ರಯೋಜನವಾದರೂ ನನಗೆ ಅದಕ್ಕಾಗಿ ಯಾವುದೇ ಪ್ರತಿಫಲ ಇರಲಿಲ್ಲ. ಎಲ್ಲ ವಿಜ್ಞಾನಿಗಳಿಂದ ಶಹಬ್ಬಾಸ್ ಎಂದು ಬೆನ್ನು ತಟ್ಟಿಸಿಕೊಂಡಿದ್ದಷ್ಟೇ ಲಾಭ.

ನೋಡಿ – ನನ್ನ ಗಣಕಾವಲೋಕನ –, ,

3 thoughts on “ನನ್ನ ಗಣಕಾವಲೋಕನ – ೪

 1. srarunkumar says:

  i am reguler rederof your artical in kannada praba i need detals kannada to hindi translter book or free saftwer pleace detals

 2. ಪ್ರಿಯ ಬ್ಲಾಗಿಗರೆ,
  ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
  ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

  ತಮ್ಮ ವಿಶ್ವಾಸಿ
  ಬೇಳೂರು ಸುದರ್ಶನ
  ಸಲಹಾ ಸಮನ್ವಯಕಾರ, ಕಣಜ ಯೋಜನೆ
  (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
  ಈ ಮೈಲ್: projectmanager@kanaja.net
  http://www.kanaja.in
  ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
  ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
  ಬೆಂಗಳೂರು – 560100
  ದೂರವಾಣಿ: ೯೭೪೧೯೭೬೭೮೯

 3. ಗಣಕಾವಲೋಕನದ ನಾಲ್ಕೂ ಭಾಗಗಳನ್ನು ಓದಿದೆ. ಆ ಕಾಲದ ಕಂಪ್ಯೂಟರ್ ಜೊತೆ ನೀವು ಮಾಡಿದ ಸಾಹಸಗಳನ್ನು ನೆನೆಸಿಕೊಂಡರೆ ಈಗ ನಾವು ಸುಮ್ಮನೇ ಕಂಪ್ಯೂಟರ್ ಮುಂದೆ ಕುಳಿತು ಸೋಮಾರಿಗಳಾಗುತ್ತಿದ್ದೇವೇನೋ ಎನಿಸುತ್ತದೆ. ಆ ಹಳೆಯ ಕಂಪ್ಯೂಟರ್ specifications ನೆನೆಸಿಕೊಂಡು (ಸಿಪಿಯು ವೇಗ 8MHz, ೧೦ಮೆಗಾಬೈಟ್‌ನ ಹಾರ್ಡ್‌‌ಡಿಸ್ಕ್, ಇತ್ಯಾದಿ) ಸಿಕ್ಕಾಪಟ್ಟೆ ನಗು ಕೂಡ ಬಂತು.. 🙂

Leave a Reply

Your email address will not be published. Required fields are marked *

*
*