ಆರಂಭದ ದಿನಗಳು
ನಾನು ಗಣಕಗಳನ್ನು ಬಳಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಮುವತ್ತು ವರ್ಷಗಳಾದವು. ಈಗಿನ ವಿದ್ಯಾರ್ಥಿಗಳು, ಗಣಕಗಳ ಇತಿಹಾಸವನ್ನು ಕಲಿಯುವಾಗ ಪಠ್ಯಪುಸ್ತಕದಲ್ಲಿ ಓದುವ, ಪರದೆ ಇಲ್ಲದ ಮೊದಲನೆಯ ಅಥವಾ ಎರಡನೆಯ ತಲೆಮಾರಿನ ಗಣಕಗಳು ಅಂದರೆ ಕಾರ್ಡ್‌ಪಂಚಿಂಗ್ ಮಾಡಬೇಕಾದವುಗಳು ಇಂತಹವುಗಳನ್ನೆಲ್ಲ ನಾನು ಬಳಸಿದ್ದೇನೆ. ಗಣಕಗಳ ಜೊತೆ ನನ್ನ ದೀರ‍್ಘ ಒಡನಾಟವನ್ನು ಹಲವು ಕಂತುಗಳಲ್ಲಿ ಈ ಬ್ಲಾಗ್ ತಾಣದಲ್ಲಿ ನೀಡಲು ತೀರ್ಮಾನಿಸಿದ್ದೇನೆ.
ಗಣಕಗಳ ಬಗ್ಗೆ ನಾನು ಮೊತ್ತಮೊದಲ ಬಾರಿಗೆ ಓದಿದ್ದು ಎಂದರೆ ಪಾವೆಂ ಸಂಪಾದಕತ್ವದಲ್ಲಿ ಬರುತ್ತಿದ್ದ ಕಸ್ತೂರಿಯಲ್ಲಿ. ಅದರಲ್ಲಿ ಓದುಗರು ತಮ್ಮ ಜೀವನದ ಸ್ವಾರಸ್ಯಕರ ಘಟನೆಗಳನ್ನು ಬರೆಯುವ ಒಂದು ಅಂಕಣವಿರುತಿತ್ತು. ಆ ಅಂಕಣದ ಹೆಸರು ಈಗ ನೆನಪಿಗೆ ಬರುತ್ತಿಲ್ಲ. ಇರಲಿ. ಅದರಲ್ಲಿ ಒಬ್ಬರು ತಾವು ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಗಣಕವನ್ನು ಕಂಡಾಗ ಆದ ಅನುಭವವನ್ನು ದಾಖಲಿಸಿದ್ದರು. ಅಲ್ಲಿಯ ತಂತ್ರಜ್ಞರು ಅವರಿಗೆ ಹೇಳಿದರಂತೆ. ನೀವು ಒಂದು ದಿನಾಂಕವನ್ನು ನೀಡಿದರೆ ಗಣಕ ಅದು ಯಾವ ವಾರ ಎಂಬುದನ್ನು ತಿಳಿಸುತ್ತದೆ ಎಂದು. ಇವರು ನೋಡೋಣ ಎಂದು ಅದೇ ವರ್ಷದ ಫೆಬ್ರವರಿ ೩೦ ಎಂದು ದಾಖಲಿಸಿದರಂತೆ. ಅದಕ್ಕೆ ಗಣಕವು ನೀವು ತಪ್ಪಾದ ದಿನಾಂಕವನ್ನು ನೀಡಿದ್ದೀರಿ, ಪುನ ಪ್ರಯತ್ನಿಸಿ ಎಂದಿತಂತೆ. ಇವರು ಮತ್ತೊಮ್ಮೆ ಅದೇ ದಿನಾಂಕವನ್ನು ನೀಡಿದರು. ಅದು ನೀವು ಮತ್ತೊಮ್ಮೆ ತಪ್ಪಾದ ಅದೇ ದಿನಾಂಕವನ್ನು ನೀಡಿದ್ದೀರಿ ಎಂದಿತಂತೆ. ಇವರು ಮೂರನೆ ಬಾರಿಗೆ ಅದೇ ದಿನಾಂಕವನ್ನು ನೀಡಲು ಹೊರಟಾಗ ತಂತ್ರಜ್ಞರು ಅಲ್ಲಿಂದ ಮೆತ್ತಗೆ ಜಾಗ ಖಾಲಿ ಮಾಡಿದರಂತೆ. ಮೂರನೆ ಬಾರಿಗೆ ಗಣಕವು “ನಿಮಗೆ ಎಷ್ಟು ಸಲ ಹೇಳುವುದು? ಮೂರ್ಖರಿಗೆ ನಾನು ಉತ್ತರಿಸುವುದಿಲ್ಲ” ಎಂದಿತಂತೆ. ಇದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಗಣಕ ಬಳಕೆ ಬಂದದ್ದು ಟಾಟಾ ಮೂಲಭೂತ ಸಂಶೋಧನಾ ಕೇಂದ್ರದಲ್ಲಿ ಎಂಬುದಂತೂ ನಿಜ. ನಾನು ಆ ಗಣಕವನ್ನು ನೋಡಿಲ್ಲ.
ನಾನು ೧೯೮೧ರಲ್ಲಿ ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿಕೊಂಡೆ. ಪ್ರತಿ ವರ್ಷ ಬಿಎಆರ್‌ಸಿಯಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರ, ಇಂಜಿನಿಯರಿಂಗ್, ಇತ್ಯಾದಿ ಪದವೀಧರದನ್ನು ಕೆಲಸಕ್ಕೆ ಸೇರಿಸಿಕೊಂಡು ಒಂದು ವರ್ಷದ ತರಬೇತಿ ಶಾಲೆ ನಡೆಸುತ್ತಾರೆ. ಒಂದು ವರ್ಷ ಕಾಲ ಹಾಸ್ಟೆಲಿನಲ್ಲಿದ್ದುಕೊಂಡು ಬಹುಮಟ್ಟಿಗೆ ಕಾಲೇಜು ವಿದ್ಯಾರ್ಥಿಗಳಂತದೇ ಜೀವನ. ನಾನು ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದು ರಸಾಯನಶಾಸ್ತ್ರದಲ್ಲಿ. ಬಿಎಆರ್‌ಸಿಯ ತರಬೇತಿಯಲ್ಲಿ, ಭೌತಶಾಸ್ತ್ರ ಮತ್ತು ಇಂಜಿನಯರಿಂಗ್ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ನಮಗೆ ಗಣಕ ವಿಷಯ ತುಂಬ ಕಡಿಮೆ ಇತ್ತು. ನಮಗೆ ಗಣಕ ವಿಷಯದಲ್ಲಿ ಪ್ರಯೋಗಶಾಲೆಯೂ ಇರಲಿಲ್ಲ. ಆದರೂ ನನಗೆ ಈ ಗಣಕವನ್ನು ಕಲಿಯಲೇಬೇಕು ಎಂದು ಅನಿಸಿತು. ಹೇಗೂ ವಿಷಯ (ಥಿಯರಿ) ಗೊತ್ತಿತ್ತಲ್ಲ. ನನ್ನ ಹಾಸ್ಟೆಲಿನಲ್ಲಿ ನನ್ನ ಪಕ್ಕದ ಕೋಣೆಯ ವಾಸಿ ಭೌತಶಾಸ್ತ್ರದ ವಿದ್ಯಾರ್ಥಿ. ಆತನ ಸಹಾಯ ತೆಗದುಕೊಂಡು ಪ್ರಾಯೋಗಿಕವಾಗಿ ಕಲಿಯಲು ಪ್ರಾರಂಭಿಸಿಯೇ ಬಿಟ್ಟೆ.
ಈಗಿನ ಕಾಲದ ಮಂದಿಗೆ ಗಣಕ ಕಲಿಯಬೇಕಿದ್ದರೆ ಗಣಕದ ಮುಂದೆ ಕುಳಿತುಕೊಂಡು ನೇರವಾಗಿ ಕೀಲಿಮಣೆ ಕುಟ್ಟಿ ಕಲಿತೇ ಗೊತ್ತಿರುವಾಗ ನಾನು ಹೇಳುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ಸ್ವಲ್ಪ ಕಷ್ಟವಾಗಬಹುದು. ಆಗ ನಾನು ಬಿಎಆರ್‌ಸಿಯಲ್ಲಿ ಬಳಸಿದ್ದು ಒಂದು ರಷ್ಯದವರು ನಿರ್ಮಿಸಿದ ಗಣಕ. ಅದಕ್ಕೆ ಮೋನಿಟರ‍್ ಪರದೆ ಇರಲಿಲ್ಲ. ನಾವು ಏನು ಪ್ರೋಗ್ರಾಂ ನೀಡಬೇಕೋ ಅದನ್ನು ಕಾರ್ಡ್‌ಗಳಲ್ಲಿ ತೂತು ಕೊರೆದು ಅವುಗಳನ್ನು ಒಂದು ಕಾರ್ಡ್ ರೀಡರ್‌ಗೆ ನೀಡಬೇಕು. ಅದು ಅವುಗಳನ್ನೆಲ್ಲ ಓದಿ ಔಟ್‌ಪುಟ್ ಅನ್ನು ಕಾಗದದಲ್ಲಿ ಮುದ್ರಿಸಿ ನೀಡುತ್ತಿತ್ತು. ನಾವು ಆಗ ಬಳಸುತ್ತಿದ್ದುದು FORTRAN ಭಾಷೆ. ಆಗ ಪ್ರೋಗ್ರಾಂ ಮಾಡುವುದರಲ್ಲಿ ತುಂಬ ಶಿಸ್ತು ಬೇಕಿತ್ತು. ಯಾಕೆಂದರೆ ತಪ್ಪು ಮಾಡಿದರೆ ತಕ್ಷಣ ತಿದ್ದಿಕೊಳ್ಳಲು ಸಾಧ್ಯವಿರಲಿಲ್ಲ. ಮೊದಲು ಪುಸ್ತಕದಲ್ಲಿ Flowchart ತಯಾರಿಸಿ, ನಂತರ ಇಡಿಯ ಪ್ರೋಗ್ರಾಂ ಅನ್ನು ಬರೆಯುತ್ತಿದ್ದೆವು. ನಂತರ ಅದನ್ನು ಕಾರ್ಡ್‌ಪಂಚಿಂಗ್ ಕೊಠಡಿಯಲ್ಲಿ ಕುಳಿತು ಪ್ರತಿಯೊಂದು ಸಾಲಿಗೂ ಒಂದು ಕಾರ್ಡಿನಂತೆ ತೂತು ಮಾಡಿ ಇಡಿಯ ಪ್ರೋಗ್ರಾಂಗೆ ನೂರಾರು ಕಾರ್ಡ್‌ಗಳನ್ನು ತಯಾರು ಮಾಡುತ್ತಿದ್ದೆವು. ಕೊನೆಗೆ ಅಷ್ಟೂ ಕಾರ್ಡ್‌ಗಳನ್ನು ಒಟ್ಟು ಮಾಡಿ ಅದಕ್ಕೆ ಒಂದು ರಬ್ಬರ‍್ ಬ್ಯಾಡ್ ಸುತ್ತಿ ಕಂಪ್ಯೂಟರ‍್ ಇದ್ದ ಕೊಠಡಿಯ ಹೊರಗೆ ಈ ಕಾರ್ಡ್‌ಗಳನ್ನು ಇಡಲೆಂದೆ ನಿಯಮಿತವಾದ ಜಾಗದಲ್ಲಿ ಇಡುತ್ತಿದ್ದೆವು. ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಒಮ್ಮೆ ಮತ್ತು ಸಾಯಂಕಾಲ ಇನ್ನೊಮ್ಮೆ ಕಂಪ್ಯೂಟರ‍್ ಒಪರೇಟರ‍್ ಬಂದು ಈ ಎಲ್ಲ ಕಾರ್ಡ್‌ಗಳನ್ನು ಅಂದರೆ ಎಲ್ಲರ ಪ್ರೋಗ್ರಾಮ್‌ಗಳನ್ನು ಆತ ಕಂಪ್ಯೂಟರಿಗೆ ಒಂದರ ನಂತರ ಒಂದರಂತೆ ಊಣಿಸುತ್ತಿದ್ದ. ಆ ಜಾಗಕ್ಕೆ ನಮಗೆ ಸಾಮಾನ್ಯವಾಗಿ ಪ್ರವೇಶ ಇರುತ್ತಿರಲಿಲ್ಲ. ಎಲ್ಲರ ಪ್ರೋಗ್ರಾಂಗಳು ಕಂಪ್ಯೂಟರಿನಲ್ಲಿ ಚಾಲನೆಯಾಗಿ ಎಲ್ಲರಿಗೂ ಅದು ಉತ್ತರವನ್ನು ಕಾಗದದಲ್ಲಿ ಮುದ್ರಿಸಿ ನೀಡಿದ ನಂತರ ಆಪರೇಟರ‍್ ಈ ಎಲ್ಲ ಮುದ್ರಣಗಳನ್ನು ಹೊರಗೆ ತಂದು ರಾಶಿ ಹಾಕುತ್ತಿದ್ದ. ನಾವು ಆ ರಾಶಿಯಲ್ಲಿ ನಮ್ಮ ಪ್ರಿಂಟ್ಔಟನ್ನು ಹುಡುಕಿಕೊಳ್ಳುತ್ತಿದ್ದೆವು. ಆ ಗಣಕವೋ ರಷ್ಯ ದೇಶದಿಂದ ಆಮದಾದುದು. ಅದಕ್ಕೆ ಇಂಗ್ಲಿಷ್ ಬರುತ್ತಿರಲಿಲ್ಲ. ಪ್ರೋಗ್ರಾಂನಲ್ಲಿ ಏನಾದರೂ ತಪ್ಪಾದರೆ ಅದು ರಷ್ಯನ್ ಭಾಷೆಯಲ್ಲಿ ಬಯ್ಯುತ್ತಿತ್ತು! ನಾವು ಗ್ರಂಥಾಲಯಕ್ಕೆ ಹೋಗಿ ಅಲ್ಲಿದ್ದ ದಪ್ಪ ದಪ್ಪ ಪುಸ್ತಕಗಳಲ್ಲಿ (manual) ಹುಡುಕಾಡಿ ಈ ಪ್ರೋಗ್ರಾಂನಲ್ಲಿ ನಾವು ಎಲ್ಲಿ ಯಾವ ತಪ್ಪು ಮಾಡಿದ್ದೇವೆ ಎಂದು ತಿಳಿದುಕೊಳ್ಳಬೇಕಾಗಿತ್ತು.
ಈಗಿನ ಕಾಲದಲ್ಲಿ ಅರ್ಧ ಗಂಟೆಯಲ್ಲಿ ತಯಾರು ಮಾಡಬಲ್ಲ ಒಂದು ಪ್ರೋಗ್ರಾಂ ತಯಾರಿಸಲು ಆಗ ವಾರಗಳ ಕಾಲ, ಕೆಲವೊಮ್ಮೆ ತಿಂಗಳುಗಳೇ ಹಿಡಿಯುತ್ತಿದ್ದವು. ಆದುದರಿಂದಲೇ ನಮ್ಮಲ್ಲಿ ಒಂದು ರೀತಿಯ ಶಿಸ್ತು ಮೂಡಿಬಂದಿತ್ತು. ಈಗಿನವರಂತೆ ತಪ್ಪು ಮಾಡುವುದು, backspace ಹೊಡೆಯುವ ಲಕ್ಸುರಿ ಆಗ ಇರಲಿಲ್ಲ.
Its really useful article. Thanks
ತುಂಬಾ ಉಪಯುಕ್ತವಾಗಿದೆ. ಮುಂದೆ ಬರೀರಿ ಸ್ವಾಮಿ.
sir, really good one.
backspace ottuva luxury iralilla. What an imagery! nenapugalannoo heege backspace ottuvantaagiddidare nimma I ganakaavalokana baruttiralilla. anda haage idu ‘ganakajeeva’ yaake aagabaaradu?
ಕೊಳ್ಳೇಗಾಲ ಶರ್ಮರೇ,
ನನ್ನ ಬ್ಲಾಗಿಗೆ ಇಣುಕಿದ್ದು ಮಾತ್ರವಲ್ಲ ಸ್ವಲ್ಪ ಮಾತೂ ಆಡಿದ್ದಕ್ಕೆ ಧನ್ಯವಾದಗಳು. “ನೆನಪುಗಳನ್ನೂ ಹೀಗೆ backspace ಒತ್ತುವಂತಿದ್ದರೆ…”. ನಾನು ನನ್ನ ಗಣಕಿಂಡಿ ಅಂಕಣದ ಕಂಪ್ಯೂತರ್ಲೆ ವಿಭಾಗದಲ್ಲೊಮ್ಮ ಈ ರೀತಿ ಬರೆದಿದ್ದೆ -“ಜೀವನದಲ್ಲಿ Ctrl-Z (Undo) ಇಲ್ಲ”.
ಗಣಕಿಂಡಿ ವಿಳಾಸ – http://ganakindi.blogspot.com/
¤ªÀÄä ºÀ¼Éà C©üªÀiÁ¤ £Á£ÀÄ. ¤ªÀÄä ¯ÉÃR£ÀUÀ¼À£ÀÄß N¢ vÀÄ0¨Á G¥ÀPÁgÀ(¸ÀºÁAiÀÄ) ºÉÆ0¢zÉÝãÀzÀgÀÆ DUÁUÀ
j¥ÉèöÊ ºÁPÀ¯ÁUÀÄwÛ®è. DzÀgÀÆ ¤ªÀÄä C©üªÀiÁ¤ £Á£ÀÄ. ªÀÄÄPÀÄ0zÀ a¥À¼ÀÆtPÀgï.20112011 what ever i typed in kannada
and pasted here wont reflect in kannada font. is it possible to you
to convert the same and read it in kannada .if not what to do>
ಕನ್ನಡ ಯುನಿಕೋಡ್‌ನಲ್ಲಿ: ನಿಮ್ಮ ಹಳೇ ಅಭಿಮಾನಿ ನಾನು. ನಿಮ್ಮ ಲೇಖನಗಳನ್ನು ಓದಿ ತು೦ಬಾ ಉಪಕಾರ(ಸಹಾಯ) ಹೊ೦ದಿದ್ದೇನದರೂ ಆಗಾಗ ರಿಪ್ಲೈ ಹಾಕಲಾಗುತ್ತಿಲ್ಲ. ಆದರೂ ನಿಮ್ಮ ಅಭಿಮಾನಿ ನಾನು. ಮುಕು೦ದ ಚಿಪಳೂಣಕರ್.೨೦೧೧೨೦೧೧