Home » Kannada » General » ರೇಡಿಯೋ ಸಿಟಿಯಲ್ಲಿ ಕನ್ನಡದ ಚೌಚೌ ಬಾತ್

ರೇಡಿಯೋ ಸಿಟಿಯಲ್ಲಿ ಕನ್ನಡದ ಚೌಚೌ ಬಾತ್

ಬೆಂಗಳೂರಿನ ರೇಡಿಯೋ ಸಿಟಿ (91FM) ಯಲ್ಲಿ ಕನ್ನಡ ಕಾರ್ಯಕ್ರಮಗಳಿಲ್ಲ ಎಂದು ಹಲವಾರು ಕನ್ನಡ ಪ್ರೇಮಿಗಳು ಆಗಾಗ ದೂರು ನೀಡುತ್ತಿದ್ದಾರೆ. ಇತ್ತೀಚೆಗೆ ನಾನು ಒಮ್ಮೆ ಯಾಕೋ ರೇಡಿಯೋ ಸಿಟಿ ಹಾಕಿದಾಗ ಆಶ್ಚರ್ಯವಾಯಿತು. ಕನ್ನಡ ಹಾಡು ಕೇಳಿ ಬರುತ್ತಿತ್ತು. ನಂತರ ಒಂದೆರಡು ದಿನ ಗಮನಿಸಿದಾಗ ಕಂಡು ಬಂದುದೇನೆಂದರೆ ರೇಡಿಯೋ ಸಿಟಿಯಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿವೆ ಎಂದು. ಬೆಳಿಗ್ಗೆ ಏಳು ಘಂಟೆಯ ಮೊದಲು ಭಕ್ತಿ ಗೀತೆ, ಮಧ್ಯಾಹ್ನ ಒಂದರಿಂದ ಮೂರು ಘಂಟೆ ವರೆಗೆ “ಮಲ್ಲಿಗೆ ಸರ್ಕಲ್”, ಶನಿವಾರ ಬೆಳಿಗ್ಗೆ “ಬೆಂಗಳೂರು ಟಾಕೀಸ್”, ಮತ್ತು ಭಾನುವಾರ ಬೆಳಿಗ್ಗೆ ಏಳರಿಂದ ಹತ್ತರ ವರೆಗೆ “ಚೌ ಚೌ ಬಾತ್” – ಇಷ್ಟು ನಾನು ಗಮನಿಸಿರುವ ಕನ್ನಡ ಕಾರ್ಯಕ್ರಮಗಳು. ಮೊನ್ನೆ ಭಾನುವಾರ (ಜೂನ್ ೧೧ರಂದು) ಚೌಚೌ ಬಾತ್ ಕಾರ್ಯಕ್ರಮದಲ್ಲಿ ನಾನು ಅತಿಥಿಯಾಗಿ ಭಾಗವಹಿಸಿದ್ದೆ. ನಂದಕುಮಾರ್ ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟರು -ಇದು ನಾನು ಹೇಳುತ್ತಿರುವುದಲ್ಲ, ಕಾರ್ಯಕ್ರಮ ಕೇಳಿದ ಹಲವು ಜನ ಹೇಳಿದ್ದು ಮತ್ತು ಫೋನು ಹಾಗೂ ಇ-ಮೈಲ್ ಮೂಲಕ ತಿಳಿಸಿದ್ದು.

ಕಾರ್ಯಕ್ರಮದಲ್ಲಿ ನಾನು ಈ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ “eಳೆ” ಎಂಬ ಹೆಸರಿನ ಅಂಕಣದ ಕಂಪ್ಯೂತರ್ಲೆ ವಿಭಾಗದಲ್ಲಿ ಮಾಡುತ್ತಿದ್ದ ಕೆಲವು ತರಲೆ ಅನುವಾದಗಳನ್ನು ನಂದಕುಮಾರ್ ಉದಾಹರಿಸಿದರು. ಅನಂತರ ಇದೇ ಧಾಟಿಯಲ್ಲಿ “Microsoft Windows is hanging” ಎನ್ನುವುದರ ತರಲೆ ಅನುವಾದವನ್ನು ಎಸ್‌ಎಂಎಸ್ ಮಾಡಿ ಕಳುಹಿಸಲು ಕೇಳುಗರನ್ನು ಆಹ್ವಾನಿಸಿದರು. ನೂರಾರು ಸಂದೇಶಗಳು ಬಂದವು. ಕೆಲವನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ-
“ಮೆತ್ತನೆಯ ಅಣು ಕಿಟಿಕಿಯಿಂದ ನೇತಾಡುತ್ತಿದೆ”
“ಸೂಕ್ಷ್ಮ ಮೃದು ಕಿಟಿಕಿ ತೂಗಾಡುತ್ತಿದೆ”
“ಚಿಕ್ಕ ಮೃದು ಕಿಟಿಕಿ ನೇಣು ಹಾಕಿಕೊಂಡಿದೆ”
“ಸೂಕ್ಷ್ಮ ಮೃದು ಕಿಟಿಕಿಗಳು ನೇತಾಡುತ್ತಿವೆ”
“ಬಿಲ್ ಗೇಟ್ಸ್‌ರನ್ನು ಗಲ್ಲಿಗೆ ಕಳಿಸಿದ್ದಾರೆ”
“ಅತಿ ಮೃದು ಕಿಟಿಕಿ ತೂಗು”
“ಪುಟ್ಟ ಮೆತ್ತನೆ ಕಿಟಿಕಿ ನೇತಾಡುತ್ತಿದೆ”
“ಗಣಕ ನೇತಾಡಿಕೊಂಡಿದೆ”
“ಸೂಕ್ಷ್ಮ ಮೃದು ಕಿಟಿಕಿ ನೇಣು ಹಾಕಿಕೊಂಡಿದೆ”
“ನನ್ನ ಕಾಗೆ ಮೆತ್ತಗೆ ಕಿಟಿಕಿಗೆ ನೇತಾಡುತ್ತಿದೆ”
“ಚಿಕ್ಕ ಮೃದು ಕಿಟಿಕಿಗಳು ನೇಣು ಹಾಕಿಕೊಳ್ಳುತ್ತಿವೆ”

ನಿಮ್ಮಲ್ಲಿ ಇನ್ನೂ ಬೇರೆ ರೀತಿಯ ತರಲೆ ಅನುವಾದಗಳಿದ್ದರೆ ಬರೆಯಿರಿ.

ಈ ಕಾರ್ಯಕ್ರಮ ಕೇಳಿದ ಹಲವರು ಕನ್ನಡವನ್ನು ಗಣಕದಲ್ಲಿ ಅಳವಡಿಸುವ ಬಗ್ಗೆ ತಮಗೆ ಇದ್ದ ಸಮಸ್ಯೆಗಳಿಗೆ ನನಗೆ ಇ-ಮೈಲ್ ಮಾಡಿ ಪರಿಹಾರ ಪಡೆದಿದ್ದಾರೆ. ಹಲವರಿಗೆ ಕನ್ನಡ ಮತ್ತು ಗಣಕದ ಪರಿಚಯ ಮಾಡಿಕೊಟ್ಟ ರೇಡಿಯೋ ಸಿಟಿ ಮತ್ತು ನಂದಕುಮಾರ್‌ಗೆ ಧನ್ಯವಾದಗಳು.

2 thoughts on “ರೇಡಿಯೋ ಸಿಟಿಯಲ್ಲಿ ಕನ್ನಡದ ಚೌಚೌ ಬಾತ್

  1. vvdooshaka says:

    ಪವನಜರೇ,

    ರೇಡಿಯೋ ಸಿಟಿ ಬಗ್ಗೆ ದೂರುಗಳನ್ನು ನಾನೂ ಸಹ ಬಹಳಷ್ಟು ಸಾರಿ ಓದಿದ್ದೆ, ಕೇಳಿದ್ದೆ. ಈ ದೂರುಗಳ ಹಿಂದಿನ ಸತ್ಯ ತಿಳಿಸಿದ್ದಕ್ಕೆ ಧನ್ಯವಾದಗಳು.

    ವಂದನೆಗಳೊಂದಿಗೆ,

    ಶೇಷಾದ್ರಿ

  2. Pavanaja says:

    ಶೇಷಾದ್ರಿಯವರೆ,

    ಪ್ರಾರಂಭದಲ್ಲಿ ರೇಡಿಯೋ ಸಿಟಿಯಲ್ಲಿ ಕನ್ನಡ ಇರಲೇ ಇಲ್ಲ. ಅನಂತರ ವಾರಕ್ಕೆ ಒಂದು ದಿನ -ಭಾನುವಾರ ಮಾತ್ರ – ಒಂದರೆಡು ಘಂಟೆಗಳ ಕಾರ್ಯಕ್ರಮವಿರುತ್ತಿತ್ತು. ಕನ್ನಡಿಗರು ರೇಡಿಯೋ ಸಿಟಿಗೆ ಮುತ್ತಿಗೆ ಹಾಕಿದುದರ ಪರಿಣಾಮವಾಗಿ ಈಗ ಕನ್ನಡ ಹಾಡುಗಳನ್ನು ಕೇಳಬಹುದು. ಆದರೂ ಅವರು ಇನ್ನೂ ಸುಧಾರಿಸಬೇಕಾಗಿದೆ. ಕೇವಲ ಸಿನಿಮಾ ಹಾಡುಗಳನ್ನು ಮಾತ್ರ ಬಿತ್ತರಿಸುತ್ತಾರೆ. ಅದರಲ್ಲೂ ತುಂಬ ಹಾಡುಗಳ ಸಂಗ್ರಹ ಅವರಲ್ಲಿಲ್ಲ. ಬೆಳಗಿನ ಜಾವ ಕೆಲವು ಭಕ್ತಿ ಗೀತೆಗಳನ್ನು ಕೇಳಬಹುದು. ಭಾವಗೀತೆ, ಜನಪದ, ನಾಟಕ, ಸಂದರ್ಶನ -ಇತ್ಯಾದಿಗಳು ಇನ್ನೂ ಬಾಕಿ ಇವೆ. ಇವೆಲ್ಲ ಮುಂದಕ್ಕೆ ಬರಬಹುದು ಎಂದು ಆಶಿಸೋಣ. ಇಂದಿಗೂ ನನ್ನ ಪ್ರಥಮ ಆಯ್ಕೆ ನಮ್ಮ ಹಳೆಯ ಸರಕಾರಿ ಆಕಾಶವಾಣಿಯ ಎಫ್‌ಎಂ ರೈನ್‌ಬೋ(101.3FM).

    ರೇಡಿಯೋ ಸಿಟಿಯ ಕನ್ನಡ ಕಾರ್ಯಕ್ರಮಗಳ ಹಿಂದೆ ಎರಡು ಜನ ಕನ್ನಡ ಪ್ರೇಮಿಗಳಿದ್ದಾರೆ. ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರುವ ಶ್ರೀನಿವಾಸ ಜಿ. ಕಪ್ಪಣ್ಣನವರ ಮಗ ಜಯದೇವ ಮತ್ತು ಟಿ. ಎನ್. ಸೀತಾರಮರ ಸಹಾಯಕರಾಗಿ ಕೆಲಸ ಮಾಡಿದ್ದ ನಂದಕುಮಾರ. ಅವರಿಗೆ ಶುಭವಾಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *

*
*