ಬೆಂಗಳೂರು ಪುಸ್ತಕೋತ್ಸವ ಮತ್ತೊಮ್ಮೆ ಬಂದಿದೆ. ಕಳೆದ ವರ್ಷದಂತೆ ಈ ಸಲವೂ ಬಹಳ ಆಸಕ್ತಿಯಿಂದ ಹೋದೆ. ದುಃಖದ ಸಂಗತಿಯೆಂದರೆ ಹೋದ ವರ್ಷದಂತೆ ಈ ವರ್ಷವೂ ನಿರಾಸೆಯಿಂದ ವಾಪಾಸು ಬಂದೆ ಎಂದೇ ಹೇಳಬಹುದು.
ಹಲವು ಪ್ರಕಾಶಕರ ಮಳಿಗೆಗಳೇನೋ ಇದ್ದವು. ಆದರೆ ಎಲ್ಲ ಕಡೆ ಸುಲಭವಾಗಿ ಲಭ್ಯವಾಗದ ಯಾವ ಪುಸ್ತಕವೂ ಕಣ್ಣಿಗೆ ಬೀಳಲಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಬಹುಪಾಲು ವ್ಯಾಪಾರಿಗಳು ತಮ್ಮ ಗೋದಾಮಿನಲ್ಲಿ ರಾಶಿ ಬಿದ್ದಿರುವ ಮಾರಾಟವಾಗದ ಪುಸ್ತಕಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ತಂದು ಪೇರಿಸಿಟ್ಟಿದ್ದರು. ಇದಕ್ಕೆ ಅಪವಾದವೂ ಇದ್ದವೆನ್ನಿ. ಪ್ರತಿದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು. ಇದೊಂದು ಒಳ್ಳೆಯ ಆಲೋಚನೆಯೇ. ಪುಸ್ತಕಗಳನ್ನು ನೋಡುತ್ತಾ ಸುಗಮ ಸಂಗೀತ, ಜಾನಪದ ಗಾಯನ, ಇತ್ಯಾದಿ ಕೇಳಬಹುದು. ಪುಸ್ತಕೋತ್ಸವ ನವಂಬರ್ ೨೧ರ ತನಕ ಇದೆ.