ಈಗಾಗಲೇ ಆಚರಣೆಯಲ್ಲಿರುವ ಹಲವಾರು ದಿನಾಚರಣೆಗಳಿಗೆ ಮತ್ತೊಂದು ಸೇರ್ಪಡೆ -“ಪುತ್ರಿಯರ ದಿನ”. ಇದನ್ನು ದಿವಂಗತ ಕಲ್ಪನಾ ಚಾವ್ಲರ ನೆನಪಿಗೆ ಆಚರಿಸಲಾಗುತ್ತಿದೆ (ನೋಡಿ: ೧, ೨). ನನ್ನ ಮಗಳ ಶಾಲೆಯಲ್ಲಿ ನನಗೆ ಒಂದು “ಹೋಂವರ್ಕ್” ಕೊಟ್ಟಿದ್ದರು. ಈ ಪುತ್ರಿಯರ ದಿನದ ಅಂಗವಾಗಿ ನಾನು ಮಗಳಿಗೆ ಒಂದು ಪತ್ರ ಬರೆಯಬೇಕಿತ್ತು. ನಾನು ಬರೆದ ಪತ್ರ ಇಲ್ಲಿದೆ:-
ಇಂದು ಪುತ್ರಿಯರ ದಿನ. ಈ ದಿನವನ್ನು ಕಲ್ಪನಾ ಚಾವ್ಲಾಳ ನೆನಪಿಗೆ ಆಚರಿಸಲಾಗುತ್ತಿದೆ. ಇಂದು ಆಕೆ ಹುಟ್ಟಿದ ದಿನ. ಈ ಕಲ್ಪನಾ ಚಾವ್ಲಾ ಎಂದರೆ ಯಾರು ಗೊತ್ತಾ? ಆಕೆ ಖ್ಯಾತ ಅಂತರಿಕ್ಷ ಯಾತ್ರಿ ಆಗಿದ್ದಳು. ಅಮೇರಿಕಾ ದೇಶದ ನಾಸಾ ಸಂಸ್ಥೆ ಅಂತರಿಕ್ಷಕ್ಕೆ ಕಳುಹಿಸಿದ ಕೊಲಂಬಿಯಾ ಅಂತರಿಕ್ಷ ನೌಕೆಯಲ್ಲಿದ್ದ ಏಳು ಜನ ಯಾತ್ರಿಕರಲ್ಲಿ ಒಬ್ಬಳಾಗಿದ್ದಳು. ಅದು ಆಕೆಯ ಎರಡನೇ ಅಂತರಿಕ್ಷ ಯಾನವಾಗಿತ್ತು. ಆಕೆ ಮೂಲತಃ ಭಾರತೀಯಳಾಗಿದ್ದಳು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಆಕೆ ಪ್ರಪಂಚದಲ್ಲಿಯೇ ಅಂತರಿಕ್ಷ ಸಂಶೋಧನಾ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿರುವ ಹೆಮ್ಮೆಯ ನಾಸಾ ಸಂಸ್ಥೆಯನ್ನು ಸೇರಿದ್ದು ಆಕೆಯ ಬಹುದೊಡ್ಡ ಸಾಧನೆ. ದುರ್ದೈವವಶಾತ್ ಆ ಕೊಲಂಬಿಯಾ ನೌಕೆ ಭೂಮಿಯಲ್ಲಿ ವಾಪಾಸು ಇಳಿಯುತ್ತಿದ್ದಂತೆ ಸುಟ್ಟು ಭಸ್ಮವಾಯಿತು. ಕಲ್ಪನಾ ಚಾವ್ಲಾ ಮತ್ತು ಆಕೆಯ ಸಹ ಪ್ರಯಾಣಿಕರು ವಿಧಿವಶರಾದರು.
ನೀನು ಜೀವನದಲ್ಲಿ ಯಾವ ಕ್ಷೇತ್ರವನ್ನಾದರೂ ಆರಿಸಿಕೊ. ಆ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನವನ್ನು, ಕಲ್ಪನಾ ಚಾವ್ಲಾ ಅಂತರಿಕ್ಷ ಸಂಶೋಧನಾ ಕ್ಷೇತ್ರದಲ್ಲಿ ಸಾಧಿಸಿದಂತೆ, ಸಾಧಿಸುವುದು ನಿನ್ನ ಧ್ಯೇಯವಾಗಿರಲಿ. ಆದರೆ ಒಂದು ಮಾತ್ರ ನೆನಪಿಟ್ಟುಕೋ. ಕಲ್ಪನಾ ಚಾವ್ಲಾ ಮಾಡಿದಂತೆ ನೀನು ಮಾತ್ರ ಭಾರತೀಯ ಪೌರತ್ವವನ್ನು ಎಂದೆಂದಿಗೂ ಬಿಟ್ಟುಕೊಡಬೇಡ.
ಅತ್ಯುತ್ತಮವಾಗಿದೆ ಸರ್