ಈ ದಿನ ಬೆಳಗ್ಗೆ ಪ್ರಜಾವಾಣಿ ಓದುತ್ತಿದ್ದಂತೆ ಒಂದು ಒಳ್ಳೆಯ ಸುದ್ದಿ ಕಣ್ಣಿಗೆ ಬಿತ್ತು. ನಮ್ಮ ನೆಚ್ಚಿನ ಹಾಗೂ ಜನಪ್ರಿಯ ಕನ್ನಡ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರಿಗೆ ಕರ್ನಾಟಕ ಸರಕಾರವು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು. ಅವರಿಗೆ ನನ್ನ ಅಭಿನಂದನೆಗಳು. ನಾನು ತಪ್ಪದೆ ಪ್ರತಿ ಗುರುವಾರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ವಿಜ್ಞಾನ ವಿಶೇಷ ಕಾಲಂ ಅನ್ನು ಓದುತ್ತೇನೆ. ಸಾಮಾನ್ಯವಾಗಿ ಈ ಕಾಲಂನಲ್ಲಿ ಬರುವ ವಿಷಯಗಳನ್ನು ನಾನು ಈ ಮೊದಲೇ ಅಂತರಜಾಲದಲ್ಲಿ ಓದಿರುತ್ತೇನೆ. ಆದರೆ ನಾಗೇಶ ಹೆಗಡೆಯವರು ಅದನ್ನು ಹೇಗೆ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾದ ಭಾಷೆಯಲ್ಲಿ ಬರೆಯುತ್ತಾರೆ ಎಂಬುದನ್ನು ತಿಳಿಯಲು ಮತ್ತು ಅವರಿಂದ ಈ ವಿಧಾನವನ್ನು ಕಲಿಯಲು ನಾನು ಈ ಕಾಲಂ ಅನ್ನು ಓದುತ್ತಿರುತ್ತೇನೆ. ವಿಶ್ವ ಕನ್ನಡದಲ್ಲಿ ಅವರ ಒಂದು ವೈಜ್ಞಾನಿಕ ಕಥೆ ಓದಿ.