Home » Kannada » General » ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ

ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ

ಅಂತಾರಾಷ್ಟ್ರೀಯ ತಂತ್ರಾಂಶ ತಯಾರಿಯಲ್ಲಿ ಖ್ಯಾತರಾಗಿರುವ ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸದಲ್ಲಿರುವ ಮೈಕೇಲ್ ಕಪ್ಲಾನ್ ತಮ್ಮ ಬ್ಲಾಗಿನಲ್ಲಿ ಒಮ್ಮೆ, ಎಲ್ಲ ಅಕ್ಷರಗಳೂ ಇರುವ ವಾಕ್ಯದ ಬಗ್ಗೆ ಬರೆದರು. ಸಾಮಾನ್ಯವಾಗಿ ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು The quick brown fox jumps over the lazy dog. ಏನೀ ವಾಕ್ಯದ ವಿಶೇಷ? ಈ ವಾಕ್ಯದಲ್ಲಿ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರಗಳೂ ಇವೆ. ಯಾವುದಾದರೊಂದು ಫಾಂಟ್‌ನಲ್ಲಿ ಅಕ್ಷರಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಉದಾಹರಿಸಲು ಈ ವಾಕ್ಯವನ್ನು ಬಳಸುತ್ತಾರೆ.

ಅದೇ ಬ್ಲಾಗಿನಲ್ಲಿ ಕಪ್ಲಾನ್ ಅವರು ಇತರೆ ಹಲವು ಭಾಷೆಗಳಲ್ಲಿ ಇಂತಹುದೇ ಕೆಲವು ವಾಕ್ಯಗಳ ಉದಾಹರಣೆ ನೀಡಿದ್ದರು. ಆದರೆ ಅವರು ಹಿಂದಿ ಭಾಷೆಯಲ್ಲಿ ನೀಡಿದ ವಾಕ್ಯ ನನಗೆ ಹಿಡಿಸಲಿಲ್ಲ. ಅದರಲ್ಲಿ ಹಿಂದಿ ಭಾಷೆಯ ಎಲ್ಲ ಅಕ್ಷರಗಳಿರಲಿಲ್ಲ. ಹಾಗೆ ನೋಡಿದರೆ ಯಾವ ಭಾರತೀಯ ಭಾಷೆಯಲ್ಲಿಯೇ ಆಗಲಿ, ಅದರಲ್ಲಿ ಸಾಧ್ಯವಿರುವ ಎಲ್ಲ ಅಕ್ಷರಗಳ ಎಲ್ಲ ತೋರಿಕೆಯ ಪ್ರಕಾರಗಳನ್ನು ತೋರಿಸಬೇಕಾದರೆ ಹದಿನೈದು ಸಾವಿರದಷ್ಟು ಅಕ್ಷರಗಳು ಬೇಕಾಗಬಹುದು. ಹಾಗೆಂದು ಅದೇ ಬ್ಲಾಗಿನಲ್ಲಿ ನನ್ನ ಟಿಪ್ಪಣಿಯನ್ನೂ ಸೇರಿಸಿದೆ. ಎಲ್ಲ ಅಕ್ಷರಗಳ ಅಲ್ಲ ಸಂಯುಕ್ತಾಕ್ಷರಗಳೂ ಬೇಕಾಗಿಲ್ಲ. ಆದರೆ ಎಲ್ಲ ಮೂಲಾಕ್ಷರಗಳೂ ಇದ್ದರೆ ಸಾಕು ಎಂದು ಅವರೇ ಉತ್ತರಿಸಿದರು.

ನಾನೂ ಇಂತಹ ಒಂದು ವಾಕ್ಯವನ್ನು ಕನ್ನಡದಲ್ಲಿ ರಚಿಸುವ ಬಗ್ಗೆ ತುಂಬ ತಲೆಕೆಡಿಸಿಕೊಂಡಿದ್ದೆ. ಕೇವಲ ಎಲ್ಲ ಮೂಲಾಕ್ಷರಗಳನ್ನು ಮಾತ್ರ ಬಳಸಿದರೆ ಅದು ಅರ್ಥಹೀನ ಅಕ್ಷರಸಮೂಹವಾಗಬಹುದಷ್ಟೇ. ಸ್ವರಗಳನ್ನು ಬಳಸಲೇ ಬೇಕು. “ಇಗೋ ಕನ್ನಡ” ಖ್ಯಾತಿಯ ಪ್ರೊ| ಜಿ. ವೆಂಕಟಸುಬ್ಬಯ್ಯನವರಿಗೆ ಫೋನಾಯಿಸಿ ಇಂತಹ ಒಂದು ವಾಕ್ಯ ನಿಮಗೆ ಗೊತ್ತಿದೆಯೇ ಎಂದು ಕೇಳಿದೆ. ಸ್ವಾರಸ್ಯವೆಂದರೆ ಅವರೂ ಇಂತಹ ಒಂದು ವಾಕ್ಯ ಕನ್ನಡಕ್ಕೆ ಬೇಕು ಎಂದು ತಿಳಿದಿದ್ದರು. ಆದರೆ ಅವರಲ್ಲಿ ಇಂತಹ ವಾಕ್ಯ ಸಿದ್ಧವಿರಲಿಲ್ಲ.

ಇಂತಹ ಒಂದು ವಾಕ್ಯವನ್ನು ಕ್ಷಣದಲ್ಲೇ ಸಿದ್ಧ ಮಾಡಬಲ್ಲ ವ್ಯಕ್ತಿಯೆಂದರೆ ಪ್ರಪಂಚದಲ್ಲೇ ಏಕೈಕ ಕನ್ನಡ ಶತಾವಧಾನಿ ಎಂಬ ಖ್ಯಾತರಾಗಿರುವ ಡಾ| ರಾ. ಗಣೇಶ ಅವರು. ಸರಿ. ಅವರಿಗೇ ಫೋನಾಯಿಸದೆ. ಸಾಯಂಕಾಲ ಪುನ ಫೋನು ಮಾಡಿ. ಎಂದರು. ಸಾಯಂಕಾಲ ಅಲ್ಲ, ಮರುದಿನ ಅವರೇ ಫೋನು ಮಾಡಿದರು. ಕೂಡಲೇ ಕಾಗದ ಪೆನ್ನು ಸಿದ್ಧ ಮಾಡಿಕೊಂಡು ಅವರು ಹೇಳಿದ ವಾಕ್ಯಗಳನ್ನು ಬರೆದುಕೊಂಡೆ. ಅವು ಕೇವಲ ವಾಕ್ಯಗಳಾಗಿರಲಿಲ್ಲ. ಒಂದು ಸಂಪೂರ್ಣ ಅರ್ಥಪೂರ್ಣ ಛಂದೋಬದ್ಧವಾದ ಪದ್ಯವೇ ಆಗಿತ್ತು –


ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ
ಸಞ್ಚಲಿಸೆ, ಬೆಳಕು ಝರಿಯಂತೆ ಹರಿದಾಡಿ ಮೂಡಿ
ಜೀವ ಭಙ್ಗಿಯ ಜಾಣ್ಮೆ ಕಥಿಸೆ ಕೌಶಲ ಕೇಳಿ
ಫಲವೊ ಛಲರಹಿತ ರಸನಿಷ್ಠೈಕ ಮೋದಕೃತಿಯೇ

ಭಂಗಿ ಎಂಬುದನ್ನು ಭಙ್ಗಿ ಎಂದೂ ಬರೆಯಬಹುದು. ಅದೇ ರೀತಿ ಸಂಚಲಿಸೆ ಎಂಬುದನ್ನು ಸಞ್ಚಲಿಸೆ ಎಂದೂ ಬರೆಯಬಹುದು. ಇದು ಸಂಸ್ಕೃತದಲ್ಲಿ ಸಾಮಾನ್ಯವಾಗಿ ಬರೆಯುವ ವಿಧಾನ ಕೂಡ.

ದಯವಿಟ್ಟು ಎಲ್ಲ ಕನ್ನಡ ತಂತ್ರಜ್ಞರು ಈ ಪದ್ಯವನ್ನು ಪ್ರಚಲಿಸಬೇಕಾಗಿ ವಿನಂತಿ.

5 thoughts on “ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ

  1. ವಿನಾಯಕ says:

    ಪವನಜ ಅವರೆ,

    ಇದು ತುಂಬಾ ಚೆನ್ನಾಗಿದೆ.. ಆದರೆ.. ಇದರ ಅರ್ಥ ಏನೆಂದು ತಿಳಿಯಲಿಲ್ಲವಲ್ಲ…!!!

    ಧನ್ಯವಾದಗಳೊಂದಿಗೆ,
    ವಿನಾಯಕ ಖವಾಸಿ.
    RBIN/ECD1
    Mailto:Vinayak.KhavasiN@in.bosch.com
    or K

  2. Pavanaja says:

    ಈ ದಿನ ಡಾ| ರಾ ಗಣೇಶರಿಗೆ ಹೇಳಿದೆ. ಹಲವು ಮಂದಿಗೆ ಈ ಪದ್ಯ ಪೂರ್ತಿ ಸರಿಯಾಗಿ ಅರ್ಥವಾಗಿಲ್ಲ ಎಂದು. ಕೆಲವು ಕ್ಲಿಷ್ಠ ಪದಗಳ ಅರ್ಥ ವಿವರಿಸಿದರು.
    ಮೇಘ ಸಖಿ = ಮಿಂಚು
    ಜೀವ ಭಂಗಿ = ನಿರ್ಜೀವ ಶಿಲ್ಪದಲ್ಲೂ ಕಾಣಬರುವ ಚಲನಶೀಲತೆ (ಬೇಲೂರು ಶಿಲಾಬಾಲಿಕೆ ನೆನಪಿಸಿಕೊಳ್ಳಿ)
    ರಸ ನಿಷ್ಠೈಕ = ಕೇವಲ ಆನಂದವೊಂದೇ ಉದ್ದೇಶವಾಗಿರುವ
    ಮೋದಕೃತಿ = ಸಂತೋಷದ ರಚನೆ
    ಛಲರಹಿತ = ಪೂರ್ವಗ್ರಹವಿಲ್ಲದ

    ಪದ್ಯದ ಸಂಪೂರ್ಣ ಅರ್ಥ ಇಂಗ್ಲೀಷಿನಲ್ಲಿ:
    In the dark, lightening, the dancing darling of the clouds, strikes ashtoundingly. Light flows like a stream with the beauty of a live posture everywhere. This nature poetry is the product of Bliss-committed art of enjoyment.

    ಇದನ್ನೂ ಅವರೇ ಹೇಳಿದ್ದು.

  3. sunaath says:

    Hats off to Mr.Ganesh for giving this beautiful verse. What I thought as an impossible task is made a very light and simple matter by Ganesh!

  4. bhyrappa says:

    Thumbaa Olle vishayavannu thilisuthaa iddeera. adhakkagi thumbaa thumbaa Dhanyavaadagalu.

     

    Bhyrappa.M

  5. Jayadeva Prasad says:

    Only Dr R Ganesh can do it….Hats off

Leave a Reply

Your email address will not be published. Required fields are marked *

*
*