Home » Kannada » Tech related » ಬರಲಿವೆ – ಕನ್ನಡಕ್ಕೆ ನೂರಾರು ಓಪನ್‌ಟೈಪ್ ಫಾಂಟ್‌ಗಳು

ಬರಲಿವೆ – ಕನ್ನಡಕ್ಕೆ ನೂರಾರು ಓಪನ್‌ಟೈಪ್ ಫಾಂಟ್‌ಗಳು

ಕನ್ನಡ ಯುನಿಕೋಡ್ ಬಳಸುವಲ್ಲಿ ಬಹುಮುಖ್ಯವಾದ ಸಮಸ್ಯೆ ಎಂದರೆ ಓಪನ್‌ಟೈಪ್ ಫಾಂಟ್‌ಗಳ ಅಭಾವದ್ದು. ಈ ಬಗ್ಗೆ ನಾನು ಈ ಹಿಂದೆಯೇ ಬರೆದಿದ್ದೆ (, ). ಬೇರೆಯವರೂ ಬರೆದಿದ್ದಾರೆ. ಕನ್ನಡ ಭಾಷೆಯನ್ನು ಗಣಕಗಳಲ್ಲಿ ಬಳಸುತ್ತಿರುವುದಕ್ಕೆ ಸುಮಾರು ಮೂರು ದಶಕಗಳ ಇತಿಹಾಸವಿದೆ. ಟ್ರೂಟೈಪ್ ಫಾಂಟ್‌ಗಳ ವಿಷಯಕ್ಕೆ ಬಮದರಂತೂ ಕನ್ನಡಕ್ಕೆ ನೂರಾರು ಟ್ರೂಟೈಪ್ ಫಾಂಟ್‌ಗಳು ಲಭ್ಯವಿವೆ. ಯುನಿಕೋಡ್ ಮತ್ತು ಓಪನ್‌ಟೈಪ್ ಫಾಂಟ್‌ಗಳು ಬಳಕೆಗೆ ಬಂದು ಐದು ವರ್ಷಗಳೇ ಸಂದವು. ಆದರೆ ಕನ್ನಡಕ್ಕೆ ಲಭ್ಯವಿರುವ ಓಪನ್‌ಟೈಪ್‌ ಫಾಂಟ್‌ಗಳ ಸಂಖ್ಯೆ ಐದಾರು ಇರಬಹುದೇನೋ. ಅವುಗಳೂ ಪರಿಪೂರ್ಣವೇನಲ್ಲ. ಮೈಕ್ರೊಸಾಫ್ಟ್‌ನವರು ನೀಡಿರುವ ತುಂಗ ಫಾಂಟೇ ಇರುವವುಗಳಲ್ಲಿ ಹೆಚ್ಚು ಪರಿಪೂರ್ಣವಾಗಿರುವುದು.

ಭಾರತೀಯ ಭಾಷೆಗಳಿಗೆ ಡಿಟಿಪಿ ತಂತ್ರಾಂಶ ತಯಾರಿಸಿ ಮಾರುತ್ತಿರುವ ಘಟಾನುಘಟಿಗಳಲ್ಲಿ ಯಾರೂ ಓಪನ್‌ಟೈಪ್ ಫಾಂಟ್ ತಯಾರಿಸಿ ಮಾರುತ್ತಿಲ್ಲ ಯಾಕೆ? ಇದಕ್ಕೆ ಉತ್ತರ ಬಹು ಸರಳ. ಟ್ರೂಟೈಪ್ ಫಾಂಟ್ ಮತ್ತು ಅದಕ್ಕೆ ಸರಿಹೊಂದುವ ಕೀಲಿಮಣೆಯ ತಂತ್ರಾಂಶಗಳನ್ನು ಈ ಭಾರತೀಯ ಭಾಷೆಗಳ ಡಿಟಿಪಿ ತಂತ್ರಾಂಶ ತಯಾರಕರು ಎಂದೆನಿಸಿಕೊಂಡವರು ಮಾರುತ್ತಿದ್ದರು. ಅವರ ತಂತ್ರಾಂಶಗಳು ಯಾವ ರೀತಿ ಇತ್ತು ಎಂದರೆ ನೀವು ಅವರ ಫಾಂಟ್ ಬಳಸಬೇಕಿದ್ದರೆ ಅವರದೇ ಆದ ಕೀಲಿಮಣೆ ತಂತ್ರಾಂಶ ಬಳಸಬೇಕಿತ್ತು. ಈ ಕೀಲಿಮಣೆಯ ತಂತ್ರಾಂಶವನ್ನು ಒಂದು ಹಾರ್ಡ್‌ವೇರ್ ಕೀಲಿಯ ಜೊತೆ ಅವರು ನಿಡುತ್ತಿದ್ದರು. ಒಬ್ಬರ ಫಾಂಟ್ ಮತ್ತು ಇನ್ನೊಬ್ಬರ ಕೀಲಿಮಣೆ ತಂತ್ರಾಂಶಗಳನ್ನು ಜೊತೆಯಾಗಿ ಬಳಸುವುದು ಅಸಾಧ್ಯವಾಗಿತ್ತು. ಅಂದರೆ ನೀವು ಯಾರಿಂದ ಬೇಕಾದರೂ ಫಾಂಟ್ ಪ್ರತಿ ಮಾಡಿಕೊಂಡು ಬಳಸುವುದು ಸಾಧ್ಯವಿರಲಿಲ್ಲ. ಇದು ಅವರ ವ್ಯಾಪಾರವನ್ನು ಅಡ್ಡಿ ಅಡಚಣೆಯಿಲ್ಲದೆ ಮುನ್ನಡೆಸಲು ಅನುವು ಮಾಡಿಕೊಡುತ್ತಿತ್ತು.

ಯುನಿಕೋಡ್ ವಿಧಾನದಲ್ಲಿ ಹೀಗೆ ಆಗುವುದಿಲ್ಲ. ಕೀಲಿಮಣೆಯ ತಂತ್ರಾಂಶವು ಕಾರ್ಯಾಚರಣೆಯ ವ್ಯವಸ್ಥೆಯಲ್ಲೇ (ಆಪರೇಟಿಂಗ್ ಸಿಸ್ಟಮ್) ಅಡಕವಾಗಿದೆ. ಯಾರಿಂದ ಬೇಕಾದರೂ ಓಪನ್‌ಟೈಪ್ ಫಾಂಟ್ ಪ್ರತಿ ಮಾಡಿಕೊಂಡು ಬಳಸಬಹುದು. ಫಾಂಟ್ ಜೊತೆ ಇರುವ ಪರವಾನಗಿ ಪತ್ರದ ಪ್ರಕಾರ ಫಾಂಟ್ ಬಳಸಲು ನಿಮಗೆ ಪರವಾನಗಿ ಇಲ್ಲದಿದ್ದರೂ ಅದನ್ನು ಬಳಸದಂತೆ ಕಾರ್ಯಾಚರಣೆಯ ವ್ಯವಸ್ಥೆಯು ತಡೆಹಿಡಿಯುವುದಿಲ್ಲ. ಯಾರಾದರೂ ಓಪನ್‌ಟೈಪ್ ಫಾಂಟ್ ಮಾಡಿ ಮಾರಿ ಬದುಕುತ್ತೇನೆ ಎಂದರೆ ಅದು ಭಾರತದಲ್ಲಿ ಸಾಧ್ಯವಾಗದ ಮಾತು. ಮೊದಲ ವ್ಯಕ್ತಿ ಮಾತ್ರ ಕೊಳ್ಳುತ್ತಾನೆ. ಇತರರು ಆತನಿಂದ ಪ್ರತಿ ಮಾಡಿಕೊಳ್ಳುತ್ತಾರೆ. ಆದುದರಿಂದ ಯಾವುದೇ ಖಾಸಗಿ ಕಂಪೆನಿ ಓಪನ್‌ಟೈಪ್ ಫಾಂಟ್ ತಯಾರಿಸಿ ಮಾರುತ್ತಿಲ್ಲ.

ಹಾಗಿದ್ದರೆ ಜನರಿಗೆ ಓಪನ್‌ಟೈಪ್ ಫಾಂಟ್ ದೊರೆಯುವುದು ಎಲ್ಲಿಂದ? ಇದಕ್ಕೆ ಪರಿಹಾರವೆಂದರೆ ಸರಕಾರ, ನಾಗರಿಕರು, ಮುದ್ರಕರು, ಪುಸ್ತಕ ಪ್ರಕಾಶಕರು, ಪತ್ರಿಕೆಗಳ ಮಾಲೀಕರು -ಇವರೆಲ್ಲ ಸಹಾಯ ಧನ ನೀಡಿ ಉತ್ತಮ ಓಪನ್‌ಟೈಪ್ ಫಾಂಟ್‌ಗಳನ್ನು ತಯಾರಿಸಿ ಎಲ್ಲರಿಗೂ ಉಚಿತವಾಗಿ ನೀಡುವುದು. ಈ ಮಾತನ್ನು ನಾನು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇನೆ.

ಸಂತೋಷದ ಸುದ್ದಿಯೆಂದರೆ ಈಗ ಈ ಸಲಹೆ ಕಾರ್ಯಗತವಾಗುತ್ತಿದೆ. ನವಂಬರ್ ೧ ರ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರಕಾರದವರು ಒಂದು ಸಿ.ಡಿ. ಬಿಡುಗಡೆ ಮಾಡಲಿದ್ದಾರೆ. ಈ ಸಿ.ಡಿ.ಯಲ್ಲಿ ಇನ್ನೂರಕ್ಕೂ ಹೆಚ್ಚು ಟ್ರೂಟೈಪ್ ಮತ್ತು ಸುಮಾರು ನೂರೈವತ್ತು ಓಪನ್‌ಟೈಪ್ ಫಾಂಟ್‌ಗಳಿರುತ್ತವೆ. ಕೇಂದ್ರ ಸರಕಾರದವರು ಈಗಾಗಲೇ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಇಂತಹ ಸಿ.ಡಿ.ಯನ್ನು ನಿಡಿದ್ದಾರೆ. ಆ ಸಿ.ಡಿ.ಯಲ್ಲಿರುವ ತಂತ್ರಾಂಶಗಳನ್ನು ಅವರ ಅಂತರಜಾಲ ತಾಣದಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕನ್ನಡದ ಸಿ.ಡಿ. ಹೊರಬರಲು ಇನ್ನು ಎರಡು ವಾರ ಕಾಲ ಮಾತ್ರ ಕಾಯಬೇಕು.

3 thoughts on “ಬರಲಿವೆ – ಕನ್ನಡಕ್ಕೆ ನೂರಾರು ಓಪನ್‌ಟೈಪ್ ಫಾಂಟ್‌ಗಳು

  1. Paresh says:

    ಇದು ತುಂಬಾ ಸಂತೋಷದ ವಿಷಯ. ಮಾಹಿತಿಗಾಗಿ ಧನ್ಯವಾದಗಳು.

  2. pchethan says:

    ದುರದೃಷ್ಟವಶಾತ್, ಈ ತಾಣದಲ್ಲಿ ಫಾಂಟ್ ಗಳು ಇನ್ನೂ ಸಿಗುತ್ತಿಲ್ಲ. ಕಾದು ನೋಡಬೇಕು.

  3. Pavanaja says:

    ಹೌದು. ನವಂಬರ ಒಂದರಂದು ಜರುಗಬೇಕಿದ್ದ ಕಾರ್ಯಕ್ರಮ ಮುಂದಕ್ಕೆ ಹಾಕಿದ್ದಾರೆ. ಸಿಡ್ಯಾಕ್‌ನವರ ಸಿಡಿ ತಯಾರಾಗದಿರುವುದೇ ಇದಕ್ಕೆ ಕಾರಣ. ಅಂದಹಾಗೆ ಬಿಡುಗಡೆಯಾಗಬೇಕಾಗಿರುವ ನೂರಾರು ಫಾಂಟುಗಳು ಅಂತಹ ಅದ್ಭುತ ಗುಣಮಟ್ಟದ್ದೇನೂ ಆಗಿಲ್ಲ. ಸುಮಾರಾಗಿವೆ ಅಷ್ಟೆ.

Leave a Reply

Your email address will not be published. Required fields are marked *

*
*