ಕರ್ನಾಟಕ ಸರಕಾರದ ನೀತಿಯೇನೆಂದರೆ ಜಗತ್ತೆಲ್ಲ ಮುಂದೆ ಮುಂದೆ ಸಾಗುತ್ತಿರಲಿ, ನಾನೊಬ್ಬ ಮಾತ್ರ ಹಿಂದೆ ಹಿಂದೆ
ಹೋಗುತ್ತೇನೆ ಎಂಬಂತಿದೆ. ಈ ಮಾತನ್ನು ಈಗ ಹೇಳಲು ಕಾರಣವಿದೆ. ನಿನ್ನೆಯ (ಜೂನ್ ೩, ೨೦೦೮) ಕನ್ನಡ ಪ್ರಭ
ಪತ್ರಿಕೆಯಲ್ಲಿ ಸರಕಾರದ ಒಂದು ಚಿಕ್ಕ ಪ್ರಕಟಣೆ ಇದೆ. ಅದರ ಪ್ರಕಾರ ಸರಕಾರವು ದ್ವಿಭಾಷಾ ಅಕ್ಷರಶೈಲಿಯನ್ನು (bi-
lingual font) ರೂಪಿಸಿದ್ದು ಸದ್ಯದಲ್ಲೇ ಅದನ್ನು ಮಾನಕ (standard) ಎಂದು ಘೋಷಿಸಲಾಗುವುದು. ಇದರ ಬಗ್ಗೆ
ಯಾರದಾದರೂ ಸಲಹೆ ಆಕ್ಷೇಪಗಳಿದ್ದಲ್ಲಿ ಜೂನ್ ೨೧ರ ಒಳಗೆ ಸರಕಾರಕ್ಕೆ ಲಿಖಿತ ಮೂಲಕ (ಇ-ಮೈಲ್ ಮೂಲಕ
ಅಲ್ಲ) ತಿಳಿಸಬೇಕು. ಈ ಫಾಂಟಿನ ವಿವರ ಮತ್ತು ಸರಕಾರೀ ಪ್ರಕಟಣೆಯನ್ನು www.karnataka.gov.in
ತಾಣದಲ್ಲಿ ಓದಬಹುದು.
ಗಣಕಗಳಲ್ಲಿ ಫಾಂಟ್ ಆಧಾರಿತ ಕನ್ನಡ ಭಾಷೆಯ ಅಳವಡಿಕೆ ತುಂಬ ಹಿಂದಿನ ವಿಧಾನ. ಈ ಮೂಲಕ ಮಾಹಿತಿಯ
ಸಂಗ್ರಹಣೆ ಮಾಡಿದರೆ ಅದನ್ನು ಮಾಹಿತಿಯೆಂದು ಗಣಕವು ಪರಿಗಣಿಸುವುದಿಲ್ಲ. ಹೀಗೆ ಸಂಗ್ರಹಿಸಿಟ್ಟ ಮಾಹಿತಿಯಲ್ಲಿ
ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಅಥವಾ ಅಕಾರಾದಿಯಾಗಿ ವಿಂಗಡಿಸಲು ಆಗುವುದಿಲ್ಲ. ಈಗ
ಪ್ರಪಂಚವೇ ಯುನಿಕೋಡ್ ವಿಧಾನವನ್ನು ಬಳಸುತ್ತಿದೆ. ಎಲ್ಲ ಅಂತರಜಾಲ ತಾಣಗಳಲ್ಲಿ ಅದರಲ್ಲೂ ಮಖ್ಯವಾಗಿ
ಬ್ಲಾಗಿಂಗ್ ತಾಣಗಳಲ್ಲಿ ಯುನಿಕೋಡನ್ನೇ ಬಳಸುತ್ತಿದ್ದಾರೆ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು
ಅಕಾರಾದಿಯಾಗಿ ವಿಂಗಡಿಸಬಹುದು ಮಾತ್ರವಲ್ಲ ಮಾಹಿತಿಯನ್ನು ಹುಡಕಲೂ ಬಹುದು. ಇದನ್ನು ನೀವೆಲ್ಲರೂ
ಗಮನಿಸಿರಬಹುದು. ಉದಾಹರಣೆಗೆ ಗೂಗ್ಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಿ
ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬಹುದು. ಯುನಿಕೋಡ್ ವಿಧಾನವು ಫಾಂಟ್ ಸ್ವಾತಂತ್ರ್ಯವನ್ನು
ಹೊಂದಿದೆ. ಎಂದರೆ ಯುನಿಕೋಡ್ ವಿಧಾನದಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾವುದೇ ಓಪನ್‌ಟೈಪ್ ಫಾಂಟ್
ಬಳಸಿ ಓದಬಹುದು. ಕನ್ನಡ ಭಾಷೆಯಲ್ಲಿ ಡಾಟಾಬೇಸ್ ಪ್ರೋಗ್ರಾಮ್ಮಿಂಗ್ ಮಾಡಲು ಯುನಿಕೋಡ್ ಒಂದೇ ದಾರಿ.
ಯುನಿಕೋಡ್ ಬಳಸುವಾಗ ಯಾವುದೇ ಪಾಂಟ್ ಸ್ಟಾಂಡಾರ್ಡ್‌ನ ಅಗತ್ಯವಿಲ್ಲ.
ವಸ್ತುಸ್ಥಿತಿ ಹೀಗಿರುವಾಗ ಸರಕಾರವು ಯಾರದೋ ಪರಿಣತರಲ್ಲದವರ ಮಾತನ್ನು ನಂಬಿ ದಶಕಗಳ ಹಿಂದಿನ
ತಂತ್ರಜ್ಞಾನವನ್ನು ಈಗ ಮಾನಕ ಎಂದು ಘೋಷಿಸಲು ಹೊರಟಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ
ಕೊಡಲಿ ಪೆಟ್ಟೇ ಸರಿ. ಸರಾಕರದ ಈ ಬಾಲಿಶ ಕಾರ್ಯವನ್ನು ಈ ಹಂತದಲ್ಲೇ ಪ್ರತಿಭಟಿಸಿ ಅದನ್ನು ಅಲ್ಲಿಯೇ ನಿಲ್ಲಿಸುವುದು
ಅತೀ ಅಗತ್ಯ. ಈ ಬಗ್ಗೆ ಪ್ರತಿಭಟಿಸಲು ಇಚ್ಛಿಸುವವರು ಮೇಲೆ ಸೂಚಿಸಿದ ಅಂತರಜಾಲದಲ್ಲಿ ನೀಡಿರುವ ಪ್ರಕಟಣೆಯನ್ನು
ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನೀಡಿರುವ ವಿಳಾಸಕ್ಕೆ ನಿಮ್ಮ ಪ್ರತಿಭಟನೆಯ ಪತ್ರವನ್ನು ರವಾನಿಸಬೇಕಾಗಿ
ವಿನಂತಿ.
-ಪವನಜ