Home » Kannada » General » ಮಿಥ್ಯಾನಿವೇಶನದ ವ್ಯಾಪಾರವೆಂಬ ಮೋಸ

ಮಿಥ್ಯಾನಿವೇಶನದ ವ್ಯಾಪಾರವೆಂಬ ಮೋಸ

“ಎಲ್ಲಿ ತನಕ ಟೋಪಿ ಹಾಕಿಸಿಕೊಳ್ಳುವವರು ಇರುತ್ತಾರೊ ಅಲ್ಲಿ ತನಕ ಟೋಪಿ ಹಾಕುವವರು ಇದ್ದೇ ಇರುತ್ತಾರೆ”. ಈ ಮಾತನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವೆಂದರೆ ಈ ಸುದ್ದಿ. ಕೊಲ್ಕತ್ತದ ಯಾರೋ ದಂಪತಿಗಳು ಚಂದ್ರನ ಮೇಲೆ ನಿವೇಶನ ಕೊಂಡುಕೊಂಡಿದ್ದಾರೆ. ಇಂತಹ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಹಿಂದೊಮ್ಮೆ ಉಷಾಕಿರಣ ಪತ್ರಿಕೆಯಲ್ಲಿ ಇಂತಹದೇ ಸುದ್ದಿ ಪ್ರಕಟವಾಗಿದ್ದಾಗ ಪತ್ರಿಕೆಯ ಸಂಪಾದಕರಿಗೆ ನಾನೊಂದು ಪತ್ರ ಬರೆದಿದ್ದೆ. ಅದನ್ನು ಕೆಳಗೆ ನಕಲಿಸಿದ್ದೇನೆ.

ಎಪ್ರಿಲ್ ೦೫, ೨೦೦೫

ಸಂಪಾದಕರು
ಪತ್ರವಾಚನ
ಉಷಾಕಿರಣ
ಬೆಂಗಳೂರು ೫೬೦೦೦೪

ಮಾನ್ಯರೇ,

ದಿ.೩೦-೦೩-೨೦೦೫ರ ಉಷಾಕಿರಣ ಪತ್ರಿಕೆಯಲ್ಲಿ ಚಂದ್ರನ ಮೇಲೆ ಸೈಟ್ ಕೊಳ್ಳುವ ಬಗ್ಗೆ ವರದಿ ಓದಿದೆ. ಇದೊಂದು ಮೋಸದ ವ್ಯಾಪಾರ. ಚಂದ್ರ ಮಾತ್ರವಲ್ಲ, ಮಂಗಳ, ಗುರು ಮತ್ತು ಇತರೆ ಗ್ರಹಗಳ ಮೇಲೂ ನಿವೇಶನ ಮಾರುವ ಮೋಸದ ತಾಣಗಳು ಅಂತರಜಾಲದಲ್ಲಿ ಹಲವಾರಿವೆ. ಹಣ ಕೊಟ್ಟವರಿಗೆ ಒಂದು ಸುಂದರ ಪ್ರಮಾಣಪತ್ರ ಬರುತ್ತದೆ. ಈ ಪತ್ರವನ್ನು ಕಟ್ಟುಹಾಕಿಸಿ ಮನೆಯ ಗೋಡೆಗೆ ನೇತುಹಾಕಿ ಸಂತಸ ಪಡಬಹುದು ವಿನಾ ಇನ್ನಾವ ಪ್ರಯೋಜನವೂ ಇಲ್ಲ. ಆದರೆ ಅದನ್ನು ಮಾರಿದವರಿಗೆ ಸುಲಭ ವಿಧಾನದಲ್ಲಿ ಹಣ ಮಾಡುವ ವಿಧಾನವಂತೂ ಹೌದು. ದಯವಿಟ್ಟು ಇಂತಹ ಮೋಸದ ವ್ಯಾಪಾರಗಳಿಗೆ ಮರುಳಾಗಬೇಡಿ. ಈ ಮೋಸಗಳ ಬಗ್ಗೆ ಹೆಚ್ಚಿಗೆ ಮಾಹಿತಿಗೆ www.museumofhoaxes.com/hoax/buy_land_on_the_moon ಮತ್ತು starryskies.com/articles/dln/11-99/moonshop.html ತಾಣಗಳಿಗೆ ಭೇಟಿ ನೀಡಬಹುದು.

ಅಂತರಜಾಲದಲ್ಲಿ ಇನ್ನೂ ಹಲವಾರು ರೀತಿಯಲ್ಲಿ ಹಣ ಮಾಡುವ ಧಂದೆಗಳಿವೆ. ಉದಾಹರಣೆಗೆ ನಕ್ಷತ್ರಕ್ಕೆ ಹೆಸರಿಡುವುದು. ಬ್ರಹ್ಮಾಂಡದಲ್ಲಿರುವ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ಯಾವುದೋ ಒಂದು ನಕ್ಷತ್ರಕ್ಕೆ ನಿಮಗಿಷ್ಟ ಬಂದವರ ಹೆಸರನ್ನು ಇಡಬಹುದು. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ – ೪೦ ಡಾಲರ್ ಹಣ ಕಳೆದುಕೊಳ್ಳುವುದು. ಯಾವುದೋ ಒಂದು ನಕ್ಷತ್ರಕ್ಕೆ ನೀವು ಹೇಳಿದ ಹೆಸರನ್ನು ಇಟ್ಟು ಹಾಗೆಂದು ನಿಮಗೊಂದು ಪ್ರಮಾಣಪತ್ರ ಬರುತ್ತದೆ. ಈ ಪತ್ರವನ್ನು ಕಟ್ಟುಹಾಕಿಸಿ ಗೋಡೆಗೆ ತೂಗುಹಾಕಬಹುದು. ಇದರಿಂದ ಬೇರೆ ಯಾವ ಲಾಭವೂ ಇಲ್ಲ. ಈ ಪ್ರಮಾಣಪತ್ರಕ್ಕೆ ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆ ಯಾ ಒಕ್ಕೂಟದ ಮಾನ್ಯತೆಯಿಲ್ಲ.

ಇತಿ ನಿಮ್ಮವ,
ಪವನಜ

Leave a Reply

Your email address will not be published. Required fields are marked *

*
*