ನಿಜ ಹೇಳಬೇಕೆಂದರೆ, ನನಗೆ ಈ “ನಿಜ ಹೇಳಬೇಕೆಂದರೆ” ಎಂಬ ಮಾತಿನ ದುರುಪಯೋಗ ಕೇಳಿ ಕೇಳಿ ಸುಸ್ತಾಗಿದೆ. ನಿಜ ಹೇಳಬೇಕೆಂದರೆ, ಒಮ್ಮೆ ಕನ್ನಡದ ಖ್ಯಾತ ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ಜೊತೆ ಕನ್ನಡ ಭವನದಲ್ಲಿ “ಮನೆಯಂಗಳದಲ್ಲಿ ಮಾತುಕತೆ” ಕಾರ್ಯಕ್ರಮವಿತ್ತು. ನಿಜ ಹೇಳಬೇಕೆಂದರೆ, ನಾನು ಅಲ್ಲಿ ವೀಕ್ಷಕನಾಗಿ ಕುಳಿತು ಕೇಳುತ್ತಿದ್ದೆ. ಪ್ರತಿ ಪ್ರಶ್ನೆಗೂ ಅವರ ಉತ್ತರ “ನಿಜ ಹೇಳಬೇಕೆಂದರೆ” ಎಂದು ಪ್ರಾರಂಭವಾಗುತ್ತಿತ್ತು. ನಿಜ ಹೇಳಬೇಕೆಂದರೆ, ನನಗೆ ಒಂದು ಅನುಮಾನ -ಅದುವರೆಗೆ ನಿಸಾರ್ ಅಹಮದ್ ಅವರು ಬರೆದ ಕವನ, ಲೇಖನ, ಮಾಡಿದ ಭಾಷಣಗಳೆಲ್ಲ ಸುಳ್ಳೆ? ನಿಜ ಹೇಳಬೇಕೆಂದರೆ, ನಿಸಾರ್ ಅಹಮದ್ ಅವರೊಬ್ಬರೇ ಅಲ್ಲ, ಈ “ನಿಜ ಹೇಳಬೇಕೆಂದರೆ” ಎಂಬ ಮಾತನ್ನು ಬಹಳಷ್ಟು ಮಂದಿ ಬಹುತೇಕ ಭಾಷಣಗಳಲ್ಲಿ ಬಳಸುವುದನ್ನು ಕೇಳಿ ಕೇಳಿ ಬೇಸತ್ತಿದ್ದೇನೆ.
ಈ “ನಿಜ ಹೇಳಬೇಕೆಂದರೆ” ಎಂಬ ಮಾತು ಎಷ್ಟರ ಮಟ್ಟಿಗೆ ಜನರ ರಕ್ತದಲ್ಲಿ ಕರಗತವಾಗಿದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಬಹಳಷ್ಟು ಸುದ್ದಿ ಮಾಡಿದ ಮೂಲ ಇಂಗ್ಲೀಷಿನ ಪುಸ್ತಕವೊಂದರ ಕನ್ನಡ ಅನುವಾದ ಓದುತ್ತಿದ್ದೆ. ಅನುವಾದಕರು ಅಲ್ಲಲ್ಲಿ ಈ “ನಿಜ ಹೇಳಬೇಕೆಂದರೆ” ಎಂಬ ಮಾತನ್ನು ಬಳಸಿದ್ದಾರೆ. ನಿಜ ಹೇಳಬೇಕೆಂದರೆ, ನಾನು ಮೂಲ ಇಂಗ್ಲೀಷ್ ಪುಸ್ತಕ ಓದಿಲ್ಲ. ಆದುದರಿಂದ ಇದು ಮೂಲ ಇಂಗ್ಲೀಷಿನಲ್ಲಿದೆಯೇ ಇಲ್ಲವೇ ನನಗೆ ಗೊತ್ತಿಲ್ಲ.
ಫೋನಿನಲ್ಲಿ ಮಾತನಾಡುವಾಗಲೂ ಈ “ನಿಜ ಹೇಳಬೇಕೆಂದರೆ” ಎಂಬ ಮಾತನ್ನು ಕೇಳಿದ್ದೇನೆ. ಆಗ ಅವರಿಗೆ ನಾನು ಪ್ರಶ್ನೆ ಎಸೆಯುತ್ತೇನೆ “ಹಾಗಾದರೆ ಇಷ್ಟು ಹೊತ್ತು ನೀವು ಹೇಳಿದ್ದೆಲ್ಲ ಸುಳ್ಳೆ?”. ಕೆಲವರಿಗೆ ನನ್ನ ಈ ಕುಚೇಶ್ಟೆ ಹಿಡಿಸದೆ ಹೋದುದೂ ಇದೆ.
ನಿಜ ಹೇಳಬೇಕೆಂದರೆ, ನನ್ನ ಈ ತಲೆಹರಟೆಯನ್ನು ಓದಿದ ನಿಮಗೆ ನನ್ನ ಅನಂತಾನಂತ ವಂದನೆಗಳು.
(ಪ್ರಜಾವಾಣಿ ಪತ್ರಿಕೆಯ ವಾಚಕರವಾಣಿ ವಿಭಾಗದಲ್ಲಿ ಪ್ರಕಟವಾದ ಪತ್ರ)