Home » Kannada » General » ಕಾರಾಗೃಹವನ್ನೂ ಭಾರತಕ್ಕೆ ಹೊರಗುತ್ತಿಗೆ ನೀಡಿ!

ಕಾರಾಗೃಹವನ್ನೂ ಭಾರತಕ್ಕೆ ಹೊರಗುತ್ತಿಗೆ ನೀಡಿ!

ಭಾರತವು ಹೊರಗುತ್ತಿಗೆ (ಔಟ್‌ಸೋರ್ಸಿಂಗ್‌) ಯಲ್ಲಿ ತುಂಬ ಸುದ್ದಿ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅಮೇರಿಕ ದೇಶದಲ್ಲಂತೂ ಸರಕಾರಿ ಕಾಲ್‌ಸೆಂಟರ್‌ಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಬಾರದು ಎಂದು ಒಂದು ರಾಜ್ಯದಲ್ಲಿ ಕಾನೂನನ್ನೇ ಮಾಡಿದ್ದಾರೆ. ಈ ಹೊರಗುತ್ತಿಗೆ ಎನ್ನುವುದು ಕೇವಲ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಕ್ಲಿನಿಕಲ್ ಪರೀಕ್ಷೆಗಳನ್ನೂ ಭಾರತಕ್ಕೆ ರವಾನಿಸಲು ತೊಡಗಿದ್ದಾರೆ. ಅದೇನು ಮಹಾ? ಕ್ರಿಶ್ಚಿಯನ್ ಪ್ರಾರ್ಥನೆಗಳೂ ಭಾರತಕ್ಕೆ ಬರುತ್ತಿವೆ. ಅಮೇರಿಕ ಮಾತ್ರವಲ್ಲ. ಇಂಗ್ಲೆಂಡಿನಿಂದಲೂ ಪ್ರಾರ್ಥನಾ ಸೇವೆಗಳನ್ನು ಭಾರತೀಯ ಪಾದರಿಗಳು ಪಡೆದುಕೊಳ್ಳುತ್ತಿದ್ದಾರೆ.

ಅದೆಲ್ಲ ಗೊತ್ತಿರುವ ವಿಷಯವೇ. ಈ ಕಾರಾಗೃಹದ ಹೊರಗುತ್ತಿಗೆ ಎಂದರೇನು? ಅಂದರೆ ಪಾಶ್ಚಾತ್ಯ ಶ್ರೀಮಂತ ದೇಶಗಳ ಕೈದಿಗಳಿಗೆ ನಮ್ಮ ದೇಶದಲ್ಲಿ ಕಾರಾಗೃಹವನ್ನು ಒದಗಿಸುವುದು. ಗಾಭರಿಯಾಗಬೇಡಿ. ಅಂತಹ ಹೊರಗುತ್ತಿಗೆ ಇನ್ನೂ ಭಾರತಕ್ಕೆ ಬಂದಿಲ್ಲ. ಆದರೆ ಅದೂ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಂಗ್ಲೆಂಡಿನ ಕಾರಾಗೃಹಗಳಲ್ಲಿ ಜಾಗವಿಲ್ಲವಂತೆ. ಕೈದಿಗಳನ್ನಿಡಲು ಅವರು ಒಂದು ಹಡಗನ್ನೇ ನಿರ್ಮಿಸಿದ್ದರು. ಅದೂ ಈಗ ಹಳೆಯದಾಗಿ ಕೆಲಸ ನಿಲ್ಲಿಸಿದೆ. ಇನ್ನಷ್ಟು ತೇಲುವ ಕಾರಾಗೃಹಗಳನ್ನು ನಿರ್ಮಿಸಲು ಇಂಗ್ಲೆಂಡಿನ ಸರಕಾರ ಯೋಚಿಸುತ್ತಿದೆ. “ಅಲ್ಲಿ ತೇಲುವ ಕಾರಾಗೃಹವನ್ನು ನಿರ್ಮಿಸುವ ಬದಲು ನಿಮ್ಮ ಕ್ರಿಮಿನಲ್‌ಗಳನ್ನು ನಮ್ಮಲ್ಲಿ ಕಳುಹಿಸಿಕೊಡಿ. ನಾವು ಅವರನ್ನು ನೋಡಿಕೊಳ್ಳುತ್ತೇವೆ. ಹೇಗೂ ನಮ್ಮಲ್ಲಿ ಪಾಕಿಸ್ತಾನದಿಂದ ನುಸುಳಿ ಬಂದ ಹಲವು ಕ್ರಿಮಿನಲ್‌ಗಳಿದ್ದಾರೆ. ಅವರನ್ನು ನಾವು ಪುಕ್ಕಟೆ ಸಾಕುತ್ತಿದ್ದೇವೆ. ಹಾಗೆಯೇ ನಿಮ್ಮ ಕ್ರಿಮಿನಲ್‌ಗಳನ್ನೂ ಸಾಕುತ್ತೇವೆ” ಎಂದು ಹೇಳುತ್ತ ಇನ್ನೂ ಯಾರೂ ಮುಂದೆ ಬಂದಿಲ್ಲ.

Leave a Reply

Your email address will not be published. Required fields are marked *

*
*