ವಿಆರ್‌ಎಲ್ ಗ್ರೂಪ್‌ನ ಪತ್ರಿಕೆಗಳನ್ನು ಟೈಂಸ್ ಆಫ್ ಇಂಡಿಯಾದವರು ಕೊಂಡುಕೊಂಡ ಸುದ್ದಿ ನಿಮಗೆಲ್ಲ ಗೊತ್ತೇ ಇರಬೇಕು. ಈ ಗುಂಪಿನ ಪತ್ರಿಕೆಗಳೆಂದರೆ ವಿಜಯ ಕರ್ನಾಟಕ, ವಿಜಯ ಟೈಂಸ್ ಮತ್ತು ಉಷಾಕಿರಣ. ಈ ಪತ್ರಿಕೆಗಳನ್ನು ಟೈಂಸ್‌ನವರು ಕೊಂಡುಕೊಂಡ ಸುದ್ದಿ ಹೊರಬರುತ್ತಿದ್ದಂತೆ ಜನರಾಡಿಕೊಂಡುದೇನೆಂದರೆ ವಿಜಯ ಟೈಂಸ್ ಮತ್ತು ಉಷಾಕಿರಣಗಳ ಗತಿ ಮುಗಿಯಿತು ಎಂದು. ಟೈಂಸ್‌ನವರಿಗೆ ಒಂದಕ್ಕಿಂತ ಹೆಚ್ಚು ಕನ್ನಡ ಪತ್ರಿಕೆ ಬೇಡ. ಆದುದರಿಂದ ಉಷಾಕಿರಣ ಬೇಡ. ಇಂಗ್ಲೀಶ್ ಪತ್ರಿಕೆಯಂತೂ ತಮ್ಮದೇ ಇದೆಯಲ್ಲ. ಹಾಗಾಗಿ ವಿಜಯ ಟೈಂಸೂ ಬೇಡ. ಉಳಿಯುವುದು ವಿಜಯ ಕರ್ನಾಟಕ ಮಾತ್ರ ಎಂದು ಎಲ್ಲರೂ ಆಡಿಕೊಂಡರು. ಆದರೆ ಕೂಡಲೇ ಹಾಗೇನೂ ಆಗಲಿಲ್ಲ.
ಈ ಸಮಾಧಾನವು ಕ್ಷಣಿಕ ಎಂದು ಉಷಾಕಿರಣದ ಪತ್ರಿಕೋದ್ಯೋಗಿಗಳಿಗೆ ಇದೀಗ ಗೊತ್ತಾಗಿದೆ. ಅಂದರೆ ಉಷಾಕಿರಣ ಮುಚ್ಚುತ್ತಿದೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. “ಉಷಾಕಿರಣ” ಸಾಯುತ್ತಿದೆ, ಅಲ್ಲಲ್ಲ ಹೆಸರು ಬದಲಿಸಿಕೊಳ್ಳುತ್ತಿದೆ. ಅದನ್ನು “ಟೈಂಸ್ ಆಫ್ ಇಂಡಿಯ -ಕರ್ನಾಟಕ” ಎಂದು ಕನ್ನಡ ಲಿಪಿಯಲ್ಲೇ ಬರೆಯುತ್ತಾರೆ ಎಂದು ತಿಳಿದುಬಂದಿದೆ. ಬರಿಯ ಹೆಸರು ಮಾತ್ರವಲ್ಲ. ಪತ್ರಿಕೆಯೇ ಶೇಕಡ 80ರಷ್ಟು ಟೈಂಸ್‌ನ ಕನ್ನಡಾನುವಾದ ಎಂದು ತೀರ್ಮಾನಿಸಲಾಗಿದೆಯಂತೆ.
ಟೈಂಸ್‌ನವರು ಕೇವಲ ಕನ್ನಡ ವಿರೋಧಿಗಳು ಮಾತ್ರವಲ್ಲ. ಅವರು ಒಂದು ರೀತಿಯಲ್ಲಿ ಸಮಾಜ ವಿರೋಧಿಗಳು. ಅವರ ಪತ್ರಿಕೆಯನ್ನು ಕೆಲವರು ಟ್ಯಾಬ್ಲಾಯಿಡ್ ಆಫ್ ಇಂಡಿಯ ಎಂದು ಕರೆಯುತ್ತಾರೆ. ಬೆಂಗಳೂರು ಟೈಂಸ್‌ನ್ನಂತೂ ಓದುವ ಹಾಗೆಯೇ ಇಲ್ಲ. ಕ್ಷಮಿಸಿ. ಅಲ್ಲಿ ಓದಲೇನಿದೆ. ಇರುವುದೇನಿದ್ದರೂ ನೋಡಲು ಮಾತ್ರ. ಹಾಗಾಗಿ ಅದನ್ನು ಟೈಂಸ್ ಆಫ್ ನೋಡಿಯ ಎಂದೂ ಕರೆಯಬಹುದು. ಕನ್ನಡಕ್ಕೆ ಪ್ರಥಮ ಬಾರಿಗೆ ಒಂದು ದಿನಪತ್ರಿಕೆ ಗಾತ್ರದ (ದೊಡ್ಡ ಗಾತ್ರದ) ಟ್ಯಾಬ್ಲಾಯಿಡ್ ಪತ್ರಿಕೆ ದೊರಕಲಿದೆ.
ಇನ್ನು ಮುಂದೆ ಉಷಾಕಿರಣದ ಪತ್ರಿಕಾಕರ್ತರು ಟೈಂಸ್‌ನಲ್ಲಿ ಬಂದ ಲೇಖನಗಳನ್ನು ಅನುವಾದ ಮಾಡುತ್ತ ಕೂತಿರಬೇಕಾಗುತ್ತದೆ. ಅಥವಾ ಪತ್ರಿಕಾಕರ್ತರ ಅಗತ್ಯವೇ ಇಲ್ಲವೇನೋ? ಅನುವಾದಕರು ಮಾತ್ರ ಸಾಕು. ನೀವ್ಯಾರಾದರೂ ತರ್ಜುಮೆಗಾರರಿದ್ದಲ್ಲಿ ಕೆಲಸಕ್ಕೆ ಅರ್ಜಿ ಹಾಕಿಕೊಳ್ಳಬಹುದು.
ಭಾರತ ದೇಶದ ಇತಿಹಾಸದಲ್ಲೇ ಇದೊಂದು ವಿನೂತನ ಪ್ರಯೋಗವಾಗಲಿದೆ. ಇಂಗ್ಲೀಶ್ ಪತ್ರಿಕೆ ಮತ್ತು ಭಾರತೀಯ ಭಾಷೆಯ ಪತ್ರಿಕೆಗಳೆರಡನ್ನೂ ನಡೆಸುತ್ತಿರುವ ಸಂಸ್ಥೆಗಳು ನಮ್ಮ ದೇಶದಲ್ಲಿ ಹಲವಿವೆ. ಉದಾಹರಣೆಗೆ ಇಂಡಿಯನ್ ಎಕ್ಸ್‌ಪ್ರೆಸ್ -ಕನ್ನಡ ಪ್ರಭ, ಡೆಕ್ಕನ್ ಹೆರಾಲ್ಡ್ – ಪ್ರಜಾವಾಣಿ, ಇತ್ಯಾದಿ. ಆದರೆ ಇವರು ಯಾರೂ ಇಂಗ್ಲಿಶ್ ಆವೃತ್ತಿಯ ಅನುವಾದವಾಗಿ ಇನ್ನೊಂದು ಭಾಷಾ ಪತ್ರಿಕೆಯನ್ನು ನಡೆಸುತ್ತಿಲ್ಲ. ಎರಡಕ್ಕೂ ಬೇರೆಯೇ ಸಂಪಾದಕರು, ಪತ್ರಿಕೋದ್ಯೋಗಿಗಳು ಇರುವುದು ಮಾತ್ರವಲ್ಲ, ಅವುಗಳಲ್ಲಿರುವ ಸುದ್ದಿಗಳೂ ಬೇರೆ ಬೇರೆಯಾಗಿರುತ್ತವೆ. ಇಂಗ್ಲೀಶ್ ಭಾಷೆಯ ಪತ್ರಿಕೆಯ ನೇರ ಅನುವಾದವಾಗಿ ಭಾಷಾ ಪತ್ರಿಕೆಯೊಂದು ಹೊರಬರಲಿರುವುದು ದೇಶದಲ್ಲೇ ಪ್ರಥಮ ಇರಬೇಕು.
ನೋಡೋಣ. ಈ ಪ್ರಯೋಗ ಹೇಗೆ ಸಾಗಲಿದೆ ಎಂದು.