Home » Kannada » ಕನ್ನಡ ವಿಕಿ ಸಮುದಾಯಕ್ಕೆ ವಂದನೆಗಳು (ವಿದಾಯವಲ್ಲ)

ಕನ್ನಡ ವಿಕಿ ಸಮುದಾಯಕ್ಕೆ ವಂದನೆಗಳು (ವಿದಾಯವಲ್ಲ)

ನಾನು ಈ ಪತ್ರವನ್ನು ಒಂದೂವರೆ ತಿಂಗಳ ಹಿಂದೆಯೇ ಬರೆಯಬೇಕಿತ್ತು. ಕೆಲವು ವಿಷಯಗಳಲ್ಲಿ ಸ್ಪಷ್ಟತೆಯ ಗೋಚರಕ್ಕಾಗಿ ಕಾದಿದ್ದೆ. ನಾನು ಈಗ ಸಿಐಎಸ್‌ನ ಉದ್ಯೋಗಿಯಾಗಿಲ್ಲ. ಈ ಬಗೆಗಿನ ಘೋಷಣೆ ಸಿಐಎಸ್‌ನ ಮಾಸಿಕ ಸುದ್ದಿಪತ್ರದಲ್ಲಿ ಬಂದಿದೆ. ನಾನು ಮಾರ್ಚ್ ೨೦೧೩ರಲ್ಲಿ ಸಿಐಎಸ್‌ನ ಎ೨ಕೆ ತಂಡಕ್ಕೆ ವಿಕಿಪೀಡಿಯದ ಕೆಲಸಗಳಿಗೆ ಸೇರಿದ್ದರೂ, ನಾನು ೨೦೦೪ರಿಂದಲೇ ವಿಕಿಪೀಡಿಯ ಸಂಪಾದಕನಾಗಿದ್ದೆ. ಕನ್ನಡ ವಿಕಿಪೀಡಿಯಕ್ಕೆ ಪ್ರಾರಂಭದಲ್ಲೇ ಸೇರಿದ್ದೇನೆ ಹಾಗೂ ನಾನು ೫ನೆಯ ಸಂಪಾದಕ. ಅಕ್ಟೋಬರ್ ೨೦೧೩ರ ತನಕ ನಾನು ನನ್ನ ತುಂಬ ಆಸಕ್ತಿಯ ವಿಷಯವಾದ ಕನ್ನಡ, ತಂತ್ರಜ್ಞಾನ, ಜನರತ್ತ ತಂತ್ರಜ್ಞಾನವನ್ನು ಒಯ್ಯುವುದು, ಜನರಿಗೆ ಜನರ ಭಾಷೆಯಲ್ಲೇ ಪ್ರಪಂಚ ಜ್ಞಾನವನ್ನು ಹಂಚುವುದು, ಇತ್ಯಾದಿ ಕ್ಷೇತ್ರಗಳಲ್ಲಿ ಸಂಬಳ ಪಡೆಯುವ ಉದ್ಯೋಗಿಯಾಗಿ ಕೆಲಸ ಮಾಡಿದೆ. ಯಾವಾಗ ಒಬ್ಬನ ಆಸಕ್ತಿ ಅಥವಾ ಪ್ರವೃತ್ತಿಯೇ ಆತನ ಉದ್ಯೋಗವಾಗುತ್ತದೆಯೋ ಆಗ ಆತ ತನ್ನ ಸಂಪೂರ್ಣ ಕಾರ್ಯಕ್ಷಮತೆಯನ್ನು ತೋರಿಸುತ್ತಾನೆ ಎಂಬ ಮಾತಿದೆ. ನಾನೂ ಈ ಮಾತಿಗೆ ಬಹುಪಾಲು ಸಮೀಪವಾಗಿ ಉತ್ತಮ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ನಾನು ಏನೇನು ಮಾಡಿದ್ದೇನೆ ಎಂಬುದರ ಬಗ್ಗೆ ಒಂದು ಪಕ್ಷಿನೋಟ (ತುತ್ತೂರಿ!).

 

ಕನ್ನಡ ವಿಕಿಪೀಡಿಯದ ಬೆಳವಣಿಗೆ: ಮಾರ್ಚ್ ೨೦೧೩ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ಸುಮಾರು ೧೩,೦೦೦ ಲೇಖನಗಳು ಹಾಗೂ ೩೪೫ ಜನ ಸಂಪಾದಕರಿದ್ದರು. ಈಗ ಸುಮಾರು ೨೧,೫೦೦ ಲೇಖನಗಳು ಹಾಗೂ ಸುಮಾರು ೯೦೦ ಜನ ಸಂಪಾದಕರಿದ್ದಾರೆ. ಒಟ್ಟು ಲೇಖನಗಳ ಸಂಖ್ಯೆ ೨೫,೦೦೦ವನ್ನು ದಾಟುತ್ತಿತ್ತು. ಗುಣಮಟ್ಟ ಏನೇನೂ ಇಲ್ಲದ, ವಿಕಿಪೀಡಿಯಕ್ಕೆ ಸ್ವಲ್ಪವೂ ಸರಿಹೊಂದದ ಸುಮಾರು ೩೦೦೦ಗಳಷ್ಟು ಲೇಖನಗಳನ್ನು ಅಳಿಸಲಾಗಿದೆ. ಇವೆಲ್ಲವನ್ನು ಕನ್ನಡ ವಿಕಿಪಿಡಿಯ ಸಮುದಾಯವು ಮಾಡಿದೆ. ಈ ಕಾರ್ಯದಲ್ಲಿ ನಾನು ಏನಿದ್ದರೂ ಉತ್ತೇಜಕನಾಗಿ ಕೆಲಸ ಮಾಡಿದ್ದು ಮಾತ್ರ. ಇತ್ತೀಚೆಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಸಂಖ್ಯಾಬಾಹುಳ್ಯಕ್ಕಿಂತ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ. ಕರ್ನಾಟಕದ ಹಲವು ಸ್ಥಳಗಳಲ್ಲಿ ೮೦ಕ್ಕಿಂತಲೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿ ಜನರನ್ನು ವಿಕಿಪೀಡಿಯ ಸಂಪಾದನೆಯ ತರಬೇತಿ ನೀಡಿದ್ದೇನೆ. ಈ ಕಾರ್ಯಾಗಾರಗಳಲ್ಲಿ ತರಬೇತಾದ ಹಲವು ಮಂದಿ ಕನ್ನಡ ವಿಕಿಪೀಡಿಯ ಸಂಪಾದಕರಾಗಿ ಕೊಡುಗೆ ನೀಡುತ್ತಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿ ಹಲವು ಯೋಜನೆಗಳನ್ನು ಹುಟ್ಟುಹಾಕಲಾಗಿದೆ ಹಾಗೂ ಅವುಗಳು ಚಾಲ್ತಿಯಲ್ಲಿವೆ. ಉದಾಹರಣೆಗೆ ವಿಜ್ಞಾನ ಪಠ್ಯ ಲೇಖನಗಳು, ಭಾರತೀಯ ಗೋತಳಿಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು,  ಇತ್ಯಾದಿ. ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯ ನೆಪದಲ್ಲಿ ಕೆಲವು ವಿಷಯಾಧಾರಿತ ಸಂಪಾದನೋತ್ಸವಗಳನ್ನು ನಡೆಸಿ ಉತ್ತಮ ಲೇಖನಗಳು ಕನ್ನಡ ವಿಕಿಪೀಡಿಯಕ್ಕೆ ಬರುವಂತೆ ಮಾಡಲಾಯಿತು. ಅವುಗಳಲ್ಲಿ ಒಂದೆರಡನ್ನು ಹೆಸರಿಸುವುದಾದರೆ –ಕರಾವಳಿ ಕರ್ನಾಟಕದ ಲೇಖಕಿಯರು, ಔಷಧೀಯ ಸಸ್ಯಗಳು. ಈ ಎಲ್ಲ ಕೆಲಸಗಳಲ್ಲೂ ನಾನು ವಿಷಯಗಳ ಆಯ್ಕೆಯಿಂದ ಪ್ರಾರಂಭಿಸಿ ಯೋಜನೆಯನ್ನು ಸುಸೂತ್ರವಾಗಿ ನಡೆಸುವಲ್ಲಿಯ ತನಕ ಸಕ್ರಿಯವಾಗಿ ಪಾಲುಗೊಂಡಿದ್ದೇನೆ. ವಿಕಿಪೀಡಿಯ ಜೊತೆ ವಿಕಿಸೋರ್ಸ್‌ನ ಬೆಳವಣಿಗೆಯಲ್ಲೂ ಕೊಡುಗೆ ನೀಡಿದ್ದೇನೆ. ಕನ್ನಡ ವಿಕಿಪಿಡಿಯಕ್ಕೆ ಒಂದು ಹೊಸ ಸಕ್ರಿಯ ಸಂಪಾದಕ ಸಮುದಾಯವೇ ಸೃಷ್ಟಿಯಾಗಿದೆ. ಕೆಲವು ಗಮನಾರ್ಹ ಹೆಸರುಗಳು – ವಿಕಾಸ ಹೆಗಡೆ, ವಿದ್ಯಾಧರ ಚಿಪ್ಲಿ, ಶ್ರೀಕಾಂತ ಮಿಶ್ರಿಕೋಟಿ, ಡಾ.ವಿಶ್ವನಾಥ ಬದಿಕಾನ, ಡಾ. ಸೌಭಾಗ್ಯವತಿ, ಪ್ರಶಸ್ತಿ, ವಿಶ್ವನಾಥ, ಡಾ. ಕಿಶೋರ ಕುಮಾರ ರೈ, ಡಾ. ಸಿ.ಪಿ. ರವಿಕುಮಾರ್, …. ಇನ್ನೂ ಹಲವು ಹೆಸರುಗಳಿವೆ. ಅವರ ಹೆಸರು ಇಲ್ಲ ಬರೆದಿಲ್ಲ ಅಂದರೆ ಅವರ ಕೊಡುಗೆ ಕಡಿಮೆಯಿದೆ ಎಂದೇನೂ ಅರ್ಥವಲ್ಲ. ಪಟ್ಟಿ ದೊಡ್ಡದಿರುವುದರಿಂದ ಎಲ್ಲ ಹೆಸರುಗಳ ತಕ್ಷಣ ನೆನಪಾಗುತ್ತಿಲ, ಅಷ್ಟೆ. ಕನ್ನಡ ವಿಕಿಪೀಡಿಯಕ್ಕೆ ಶ್ರೇಷ್ಠ ಕೊಡುಗೆ ನೀಡಿದ ಹರಿಪ್ರಸಾದ ನಾಡಿಗ, ಓಂಶಿವಪ್ರಕಾಶ, ಹರೀಶ ಎಂ.ಜಿ, ತೇಜಸ್ ಜೈನ್, ಬಿ.ಎಸ್. ಚಂದ್ರಶೇಖರ, ಲಕ್ಷ್ಮಿವೆಂಕಟೇಶ, (ವಿಕಾಸ ಹೆಗಡೆ), ಇವರೆಲ್ಲ ನಾನು ಸಿಐಎಸ್‌ಗೆ ಸೇರುವ ಮೊದಲೇ ಕೆಲಸ ಮಾಡುತ್ತಿದ್ದವರು/ಮಾಡಿದವರು.

 

ತಾಂತ್ರಿಕವಾಗಿ: ವಿಕಿಮೀಡಿಯ ಫೌಂಡೇಶನ್ ಮತ್ತು ಕನ್ನಡ ವಿಕಿಪೀಡಿಯ ಸಮುದಾಯ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದ್ದೇನೆ. ಹಲವು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೊಡುಗೆ ನೀಡಿದ್ದೇನೆ. ಯುಎಲ್‌ಎಸ್, ವಿಶುವಲ್ ಎಡಿಟರ್ ಮತ್ತು ಇನ್ನೂ ಅನೇಕ ಚಿಕ್ಕಪುಟ್ಟ ತಂತ್ರಾಂಶ ಸವಲತ್ತುಗಳಲ್ಲಿ ಕನ್ನಡದ ಅಳವಡಿಕೆ ಸರಿಯಾಗಿರುವಂತೆ ಆಗಾಗ ಹಿಂಮಾಹಿತಿ ನೀಡಿದ್ದೇನೆ.

 

ಮೈಸೂರು ವಿ.ವಿ. ಹಾಗೂ ಇತರೆ ಸಂಸ್ಥೆಗಳ ಜೊತೆ ಸಹಭಾಗಿತ್ವ: ಮೈಸೂರು ವಿಶ್ವವಿದ್ಯಾಲಯವು ತಾನು ಪ್ರಕಟಿಸಿದ ವಿಶ್ವಕೋಶದ ಎಲ್ಲ ೧೪ ಸಂಪುಟಗಳನ್ನು ಮುಕ್ತ ಪರವಾನಗಿಯಲ್ಲಿ (ಕ್ರಿಯೇಟಿವ್ ಕಾಮನ್ಸ್) ಬಿಡುಗಡೆ ಮಾಡಿದೆ. ಇದಕ್ಕಾಗಿ ಮೈಸೂರು ವಿ.ವಿ.ಯ ಉಪಕುಲಪತಿ ಡಾ. ಕೆ.ಎಸ್. ರಂಗಪ್ಪ ಅವರನ್ನು ನಾವು ಅಭಿನಂದಿಸಿ ಧನ್ಯವಾದ ಅರ್ಪಿಸೋಣ. ಅವರನ್ನು ಈ ವಿಷಯಕ್ಕೆ ಒಪ್ಪಿಸಲು ನಾನು ಮೈಸೂರಿಗೆ ಕನಿಷ್ಠ ೮ ಸಲ ಪ್ರಯಾಣ ಬೆಳೆಸಿದ್ದೇನೆ. ನಂತರವೂ ಹಲವು ಸಲ ಪ್ರಯಾಣ ಬೆಳೆಸಿ ವಿಶ್ವಕೋಶದ ಲಭ್ಯವಿರುವ ಸಂಪುಟಗಳ ಪಿಡಿಎಫ್‌ ಫೈಲುಗಳನ್ನು ತಂದು  ಅವುಗಳನ್ನು ಕನ್ನಡ ವಿಕಿ ಸಮುದಾಯದ ಜೊತೆ ಹಂಚಿಕೊಂಡು ಅವರು ಅದರಿಂದ ಲೇಖನಗಳನ್ನು ಕನ್ನಡ ವಿಕಿಸೋರ್ಸ್‌ಗೆ ಮತ್ತು ಅಲ್ಲಿಂದ ಕನ್ನಡ ವಿಕಿಪೀಡಿಯಕ್ಕೆ ಸೇರಿಸುತ್ತಿದ್ದಾರೆ. ಈ ತನಕ ಸುಮಾರು ೭೪೦೦ ಲೇಖನಗಳು ಕನ್ನಡ ವಿಕಿಸೋರ್ಸ್‌ಗೆ ಸೇರ್ಪಡೆಯಾಗಿವೆ. ಬಹುತೇಕ ಲೇಖನಗಳನ್ನು ಶ್ರೀಕಾಂತ ಮಿಶ್ರಿಕೋಟಿ ಒಬ್ಬರೇ ಸೇರಿಸಿದ್ದಾರೆ ಮತ್ತು ಈಗಲೂ ಸೇರಿಸುತ್ತಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಾನು ಪ್ರಕಟಿಸಿದ ೧೨೨ ಪುಸ್ತಕಗಳನ್ನು ಮುಕ್ತ  ಪರವಾನಗಿಯಲ್ಲಿ ಮರು ಬಿಡುಗಡೆ ಮಾಡಿದೆ. ಇವುಗಳಲ್ಲಿ ಹಲವು ಪುಸ್ತಕಗಳನ್ನು ಕನ್ನಡ ವಿಕಿಸೋರ್ಸ್‌ಗೆ ಸೇರಿಸಲಾಗಿದೆ. ತೇಜಸ್ವಿನಿ ನಿರಂಜನ ಅವರು ತಮ್ಮ ತಂದೆ ದಿ. ನಿರಂಜನ ಅವರ ೫೫ ಪುಸ್ತಕಗಳನ್ನು ಮುಕ್ತ ಪರವಾನಗಿಯಲ್ಲಿ ಮರು ಬಿಡುಗಡೆ ಮಾಡಿದ್ದಾರೆ. ಅವುಗಳಲ್ಲಿ ಹಲವು ಪುಸ್ತಕಗಳನ್ನು ಕನ್ನಡ ವಿಕಿಸೋರ್ಸ್‌ಗೆ ಸೇರಿಸಲಾಗಿದೆ.

 

ವಿಕಿಪೀಡಿಯ ಶಿಕ್ಷಣ ಯೋಜನೆಗಳು: ಸಿಐಎಸ್ ಎ೨ಕೆ ವತಿಯಿಂದ ವಿಕಿಪೀಡಿಯ ಶಿಕ್ಷಣ ಯೋಜನೆ ಮೊದಲಿಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಯಿತು. ಅಲ್ಲಿಯ ಯೋಜನೆಯ ಪ್ರಾರಂಭದಿಂದಲೂ ನಾನು ಇದ್ದೆ. ಪ್ರಾರಂಭದಲ್ಲಿ ನಮಗೆ ಇದು ಹೇಗೆ ನಡೆಯಬಹುದು ಎಂಬ ಬಗ್ಗೆ ಸರಿಯಾದ ಅಂದಾಜಿಲ್ಲದೆ ತುಂಬ ಕಷ್ಟ ಪಡಬೇಕಾಯಿತು. ವರ್ಷದಿಂದ ವರ್ಷಕ್ಕೆ ಅನುಭವದ ಆಧಾರದಲ್ಲಿ ಅದನ್ನು ಸುಧಾರಿಸುತ್ತ ಬಂದು ಈಗ ಅದು ಒಂದು ರೀತಿಯಲ್ಲಿ ಪರಿಪಕ್ವತೆಯನ್ನು ಪಡೆದಿದೆ ಎನ್ನಬಹುದು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲೂ ವಿಕಿಪೀಡಿಯ ಶಿಕ್ಷಣ ಯೋಜನೆಗಳನ್ನು ನಡೆಸಲಾಗುತ್ತಿದೆ. ಕೆಲವು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಲೇಖನಗಳನ್ನು ಸೇರಿಸಿದ್ದಾರೆ. ಈ ಶಿಕ್ಷಣ ಯೋಜನೆಗಳನ್ನು ನಡೆಸಿದ ಅನುಭವದ ಬಗ್ಗೆ ಒಂದು ಪ್ರತ್ಯೇಕ ಬ್ಲಾಗ್ ಬರೆಯಬೇಕಾಗಿದೆ. ಯಾಕೆಂದರೆ ವಿಷಯ ವ್ಯಾಪ್ತಿ ಅಷ್ಟಿದೆ. ಈ ವಿಕಿಪೀಡಿಯ ಶಿಕ್ಷಣ ಯೋಜನೆಯಿಂದಾಗಿ ನಮಗೆ ಡಾ. ವಿಶ್ವನಾಥ ಬದಿಕಾನ ದೊರಕಿದ್ದಾರೆ! ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಿಂದ ಕನ್ನಡ ವಿಕಿಪೀಡಿಯ ಟ್ಯುಟೋರಿಯಲ್ ವಿಡಿಯೋಗಳನ್ನು ತಯಾರಿಸಲಾಗಿದೆ. ಹಲವು ವಿದ್ಯಾರ್ಥಿಗಳು ಉತ್ತಮ ಕೊಡುಗೆ ನೀಡಿದ್ದಾರೆ. ೩ ವರ್ಷಗಳಲ್ಲಿ ಒಟ್ಟು ಸುಮಾರು ೨೦೦೦ ವಿದ್ಯಾರ್ಥಿಗಳು ವಿಕಿಪೀಡಿಯದ ತೆಕ್ಕೆಗೆ ಬಂದಿದ್ದಾರೆ. ಅವರಲ್ಲಿ ಕೆಲವರು ತಮ್ಮ ಅಸೈನ್‌ಮೆಂಟ್‌ಗಾಗಿ ಮಾತ್ರವಲ್ಲ, ನಂತರವೂ, ರಜೆಯಲ್ಲೂ, ಇಂಟರ್ನ್ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಕೆಲವು ಹೆಸರುಗಳು ನನ್ನ ನೆನಪಿನಲ್ಲಿ ಉಳಿದಿವೆ – ತ್ತ್ರಿವೇಣಿ, ಕೋಮಲ್, ಗೌತಮ್, ಸ್ಮಿತಾ, ಪ್ರೀತಮ್, ನಯನ, ಸ್ಪಂದನ, ಗೋಪಾಲಕೃಷ್ಣ, ಲಾಸ್ಯ, ಸೌಂದರ್ಯ, ಅನೂಷ, ಇತ್ಯಾದಿ. ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನದು ವಿಶಿಷ್ಟ ಮಾದರಿ. ಅಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆ ಇಲ್ಲ. ಆದರೂ ವಿದ್ಯಾರ್ಥಿಗಳು ತಾವೇ ಮುಂದೆ ಬಂದು ವಿಕಿಪೀಡಿಯಕ್ಕೆ ವಿಷಯಾಧಾರಿತ ಸಂಪಾದನೋತ್ಸವಗಳನ್ನು ನಡೆಸಿ ಲೇನಗಳನ್ನು ಸೇರಿಸಿದ್ದಾರೆ. ಅಲ್ಲಿ ಪತ್ತೆಯಾದವರು ಧನಲಕ್ಷ್ಮಿ ಮತ್ತು ದಿವ್ಯ.

 

ತುಳು ವಿಕಿಪೀಡಿಯ: ತುಳುವರು ಯಾವತ್ತೂ ತಾವು ಕನ್ನಡದ ಒಂದು ಅವಿಭಾಜ್ಯ ಅಂಗ ಎಂದೇ ನಡೆದುಕೊಂಡಿದ್ದಾರೆ. ತುಳು ವಿಕಿಪೀಡಿಯವು ೨೦೧೬ ಆಗಸ್ಟ್ ತಿಂಗಳಲ್ಲಿ ಇನ್ಕ್ಯುಬೇಟರ್‌ನಿಂದ ಹೊರಬಂದು ಜೀವಂತವಾಯಿತು. ತುಳು ವಿಕಿಪೀಡಿಯವನ್ನು ಜೀವಂತ ಮಾಡಲು ನಾನು ತುಂಬ ಶ್ರಮ ಪಟ್ಟಿದ್ದೇನೆ. ಈ ವಿಷಯದಲ್ಲಿ ನನಗೆ ತುಂಬ ತೃಪ್ತಿ ಇದೆ.

 

ವಿಕಿಪೀಡಿಯ ಒಂದಲ್ಲ, ಹಲವು ರೀತಿಯಲ್ಲಿ ನಾನು ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು ೨೫ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಲೇ ಇದ್ದೇನೆ. ಮುಂದೆಯೂ ಮಾಡುತ್ತಿರುತ್ತೇನೆ. ನನ್ನನ್ನು pavanaja AT vishvakannada DOT com ಮೂಲಕ ಸಂಪರ್ಕಿಸಬಹುದು. Facebook, Twitter, Linkedin, Instagram, Quora ಎಲ್ಲ ಕಡೆ ನಾನು pavanaja ಎಂಬ ಹೆಸರಿನಲ್ಲೇ ಇದ್ದೇನೆ. ನನ್ನದೇ ಜಾಲತಾಣಗಳಾದ vishvakannada.com, pavanaja.com, techfocus.in ಗಳಲ್ಲೂ ಹಲವು ವಿಧದ ಕೃಷಿ ನಡೆಸುತ್ತಿದ್ದೇನೆ. ಅಲ್ಲೆಲ್ಲ ಸಿಗೋಣ.

 

ಇತಿ ನಿಮ್ಮವ,

ಪವನಜ

5 thoughts on “ಕನ್ನಡ ವಿಕಿ ಸಮುದಾಯಕ್ಕೆ ವಂದನೆಗಳು (ವಿದಾಯವಲ್ಲ)

  1. Kadengodlu Shankara Bhat says:

    Namaskara.
    We salute the selfless efforts of Dr. Ubaradkda Bellippady Pavanaja who was in BARC during my 12 yes Service from Oct 1984 there before I left abroad for by end of 1996.
    I wish him a bright future and in Kannada literary world.

  2. I am extremely thankful for your support and guidance. You are the one who made me to recognize my strength and potential. You are my real Mentor and the guide. You have helped me not only in Wikipedia works, but also helped me to grow professionally. The list of your contribution to my growth is very big. You are the guiding lamp for me. Above all you have fed me with the knowledge that I cannot measure. I am really thankful for your support and care.

  3. pavanaja sir,
    ನೀವು ಎಲ್ಲಿದ್ದರೂ ಅತ್ಯುತ್ತಮ ಕನ್ನಡ ಸೇವೆಯನ್ನು ಮಾಡುತ್ತಿರುತ್ತೀರಿ. ನನಗೇ ಖಾಸಗಿಯಾಗಿ ಬಹಳ ಸಹಾಯ, ಮಾರ್ಗದರ್ಶನ ಕೂಡಾ ಮಾಡಿದ್ದೀರಿ, ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಲು ಪ್ರಯತ್ನಿಸುತ್ತೇನೆ.
    ನನ್ನ ಮೊದಲ ಖಾಸಗಿ ವೆಬ್ ತಾಣ :https://nageshwrites.com ಗೆ ಕೂಡಾ ಬೇಟಿಯಿತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಿ. ನಾನು ಕಾದಿದ್ದೇನೆ.

  4. Niranjana Hegde B S says:

    Hello sir,
    It’s my privilege to have read your column in prajavani. Your initiative in forming Kannada and Tulu Wikipedia community is really heartwarming!
    I recently started editing in Wikipedia and I encountered a problem after submitting the write-up. I would be glad if you could look into it once and render me some valuable suggestions to fix it!

  5. ನಿಮ್ಮ ಕನ್ನಡ ಕಟ್ಟುವ ಕೆಲಸ ಹೀಗೆ ಮುಂದುವರಿಯಲಿ.
    ಧನ್ಯವಾದಗಳು

Leave a Reply

Your email address will not be published. Required fields are marked *

*
*