ಬಂತು ಖಾಸಾ ಗಣಕ
ಬಹುಶಃ ೧೯೮೬ ಇರಬೇಕು ಭಾರತಕ್ಕೆ ಖಾಸಾಗಣಕಗಳು (ಪರ್ಸನಲ್ ಕಂಪ್ಯೂಟರ‍್ = ಪಿಸಿ) ಕಾಲಿಟ್ಟವು. ಭಾಭಾ ಪರಮಾಣು ಸಂಶೋಧನಾ ಕೇಂದ್ರಕ್ಕೂ ಅವು ಕಾಲಿಟ್ಟವು. ಆದರೆ ಎರಡೇ ಎರಡು ಪಿಸಿಗಳು ಕಂಪ್ಯೂಟರ‍್ ವಿಭಾಗದಲ್ಲಿ ಬಂದು ಕುಳಿತಿದ್ದವು. ಬಹುಶಃ ಅವು ವಿಪ್ರೊ ಕಂಪೆನಿ ಉಚಿತವಾಗಿ ಕೊಟ್ಟಿದ್ದಿರಬೇಕು. ಅದರಲ್ಲಿ ಕಂಪ್ಯೂಟರ‍್ ವಿಬಾಗದ ತಂತ್ರಜ್ಞರು ಮಾತ್ರವೇ ಏನೋ ಮಾಡುತ್ತಿದ್ದರು. ಅದರ ಹೊರತಾಗಿ ಇಡಿ ಬಿಎಆರ್‌ಸಿಯಲ್ಲಿ ಇನ್ನೆಲ್ಲೂ ಪಿಸಿಗಳಿರಲಿಲ್ಲ. ಆಗಾಗಲೆ ನಾನು ಕೆಮಿಸ್ಟ್ರಿ ವಿಭಾಗದಲ್ಲಿ ಕಂಪ್ಯೂಟರ‍್ ತಜ್ಞ ಎಂಬ ಖ್ಯಾತಿ ಪಡೆದಿದ್ದೆ. ನನ್ನ ವಿಭಾಗದ ಮುಖ್ಯಸ್ಥರು ನಮ್ಮ ವಿಭಾಗಕ್ಕೂ ಒಂದು ಪಿಸಿ ತಂದರೆ ಹೇಗೆ ಎಂಬ ಆಲೋಚನೆ ಮಾಡಿದರು. ನನಗೆ ಈ ಬಗ್ಗೆ ಹೇಳಿದರು. ಒಂದು ದಿನ ನಾನು ಮತ್ತು ಅವರು ನಾರಿಮನ್ ಪಾಯಿಂಟ್‌ನಲ್ಲಿದ್ದ ವಿಪ್ರೊ ಕಚೇರಿಗೆ ಹೋಗಿ ಪಿಸಿ ಕೊಂಡುಕೊಳ್ಳುವ ಬಗ್ಗೆ ಮಾತನಾಡಿ ಬಂದೆವು. ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲ ಕೆಂಪು ಪಟ್ಟಿಗಳನ್ನು ದಾಟಿ ಒಂದು ವಿಪ್ರೊ ಪಿಸಿ ಬಂದು ನನ್ನ ಮೇಜಿನ ಮೇಲೆ ಕುಳಿತಿತ್ತು. ಇಡಿಯ ಬಿಎಆರ್‌ಸಿಯಲ್ಲಿ ಕಂಪ್ಯೂಟರ‍್ ವಿಭಾಗದ ಹೊರತಾಗಿ ಇದ್ದ ಪಿಸಿ ನನ್ನದಾಗಿತ್ತು.
ಪಿಸಿ ಏನೋ ಬಂತು. ಅದರಲ್ಲಿ ಏನು ಮಾಡುವುದು. ಆಗ ಬಳಕೆಯಲ್ಲಿದ್ದದ್ದು ಮೈಕ್ರೋಸಾಫ್ಟ್ ಡಾಸ್ (MS DOS) ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್). ಈಗಿನಂತೆ ವಿಂಡೋಸ್, ವರ್ಡ್, ಎಕ್ಸೆಲ್, ಇತ್ಯಾದಿಗಳಿರಲಿಲ್ಲ. ಆ ಪಿಸಿಯ ಸ್ಪೆಸಿಪಿಕೇಶನ್ ಕೇಳಿದರೆ ನಿಮಗೆ ನಗು ಬರಬಹುದು. ಅದರಲ್ಲಿ ೧೦ಮೆಗಾಬೈಟ್‌ನ ಒಂದು ಹಾರ್ಡ್‌ಡಿಸ್ಕ್ ಮತ್ತು ೫ ೧/೪ ಇಂಚು ಗಾತ್ರದ ಒಂದು ಫ್ಲಾಪಿ ಡ್ರೈವ್ ಇದ್ದವು. ಅದರ ಸಿಪಿಯು ವೇಗ ಕೇವಲ 8MHz ಆಗಿತ್ತು. ಮೆಮೊರಿ ಕೇವಲ ೧ ಮೆಗಾಬೈಟ್. ಅದರಲ್ಲೂ ಡಾಸ್ ಬಳಸುತ್ತಿದ್ದುದು ೬೪೦ ಕಿಲೋಬೈಟ್ ಮಾತ್ರ.
ನಾನು ಎಲ್ಲಿಂದಲೋ ತಂದು ಕೆಲವು ಉಪಯುಕ್ತ ತಂತ್ರಾಂಶಗಳನ್ನು ಅದರಲ್ಲಿ ಹಾಕಿದ್ದೆ. ಆಗ ಬಳಕೆಯಲ್ಲಿದ್ದ ವರ್ಡ್‌ಪ್ರೋಸೆಸಿಂಗ್ ತಂತ್ರಾಂಶ ವರ್ಡ್‌ಸ್ಟಾರ‍್. ಅದರಲ್ಲಿ ಈಗಿನಂತೆ ಸಮೀಕರಣ, ಕೋಷ್ಟಕ ಎಲ್ಲ ತಯಾರಿಸಲು ಆಗುತ್ತಿರಲಿಲ್ಲ. ಇದ್ದುದರಲ್ಲೇ ಹೇಗೋ ಬಳಕೆ ಮಾಡುತ್ತಿದ್ದರು. ಆಗ ಬಳಕೆಯಲ್ಲಿದ್ದ ಮುದ್ರಕವೂ ಡಾಟ್ ಮ್ಯಾಟ್ರಿಕ್ಸ್ ಮುದ್ರಕಗಳು. ಇಂತಹ ಮುದ್ರಕಗಳು ಈಗಲೂ ಬಳಕೆಯಲ್ಲಿವೆ. ನಿಧಾನವಾಗಿ ಡಾಟ್ ಮ್ಯಾಟ್ರಿಕ್ಸ್ ಮುದ್ರಕಗಳಲ್ಲೇ ಸ್ವಲ್ಪ ಉತ್ತಮ ಗುಣಮಟ್ಟದ ಮುದ್ರಕಗಳು ಬಳಕೆಗೆ ಬಂದವು. ನಮ್ಮ ಕೆಲಸಕ್ಕೆ ಅಗತ್ಯವಿರುವ ವೈಜ್ಞಾನಿಕ ಮಾಹಿತಿ ಸಂಸ್ಕರಣೆ ಮತ್ತು ವಿಶ್ಲೇಷಣೆಗೆ ಬೇಕಾದ ತಂತ್ರಾಂಶಗಳನ್ನು ನಾನೇ Fortran ಮತ್ತು ಕೆಲವೊಮ್ಮೆ GWBASIC ಭಾಷೆಗಳಲ್ಲಿ ತಯಾರಿಸಿದೆ.
ನನ್ನ ಉದಾಹರಣೆಯನ್ನು ಅನುಕರಿಸಿ ಇನ್ನೂ ಹಲವು ವಿಜ್ಞಾನಿಗಳು ಪಿಸಿಗಳನ್ನು ಕೊಂಡು ತಂದರು. ಪ್ರತಿಯೊಬ್ಬರೂ ಪಿಸಿ ಕೊಳ್ಳುವ ಮೊದಲು ನನ್ನ ಸಲಹೆ ಕೇಳುವುದು, ಕೊಂಡು ತಂದ ನಂತರ ನನ್ನಿಂದ ಸಲಹೆ ಮತ್ತು ತಂತ್ರಾಂಶ ಪಡೆದುಕೊಳ್ಳುವುದು ಸಹಜವಾಗಿತ್ತು. ಎರಡು ವರ್ಷ ಕಳೆದಾಗ ಸ್ವಲ್ಪ ಮುಂದವರೆದ ಪಿಸಿ ಬಂತು. ಆಗ ಲೇಸರ‍್ ಮುದ್ರಕವೂ ಬಂತು. ಈ ಲೇಸರ‍್ ಮುದ್ರಕ ವಿಜ್ಞಾನಿಗಳಿಗೆ ದೇವಲೋಕದಿಂದ ಬಂದ ವರದಂತೆ ಭಾಸವಾಯಿತು. ಅದರಲ್ಲಿ ವಿಜ್ಞಾನಿಗಳಿಗೆ ಅಗತ್ಯವಾದ ಸಮೀಕರಣ, ಗ್ರಾಫ್ ಎಲ್ಲ ಮುದ್ರಿಸಬಹುದಾಗಿತ್ತು.
ಆಗ ನಾವು ವರ್ಡ್‌ಪ್ರೋಸೆಸಿಂಗ್ (ಪದ ಸಂಸ್ಕರಣೆ) ಗೆ ಬಳಸುತ್ತಿದ್ದುದು ChiWriter ಎಂಬ ತಂತ್ರಾಂಶ. ಇದು ವಿಜ್ಞಾನಿಗಳಿಗೆಂದೆ ತಯಾರಿಸಿದ ತಂತ್ರಾಂಶ. ಸಮೀಕರಣಗಳನ್ನು ಸುಲಭವಾಗಿ ರಚಿಸಬಹುದಾಗಿತ್ತು. ಅದರಲ್ಲಿ ರಾಸಾಯನಿಕ ಸಮೀಕರಣ, ಪರಮಾಣು ಮತ್ತು ಅಣುಗಳ ರಚನೆ ಎಲ್ಲ ಮೂಡಿಸಬಹುದಿತ್ತು. ವಿಜ್ಞಾನದಲ್ಲಿ ಅಗತ್ಯವಾಗಿರುವ ಗ್ರೀಕ್ ಅಕ್ಷರಗಳನ್ನು (ಆಲ್ಫಾ, ಬೀಟಾ, ಒಮೆಗಾ, ಇತ್ಯಾದಿ) ಮೂಡಿಸಲು ವಿಶೇಷ ಫಾಂಟ್ ಇರುತ್ತಿತ್ತು. ಇಷ್ಟೇ ಅಲ್ಲದೆ ಫಾಂಟ್ ತಯಾರಿಸಲು ಒಂದು ಫಾಟ್ ಡಿಸೈನರ‍್ ಸವಲತ್ತು ಕೂಡ ಇತ್ತು. ಈ ಪಾಂಟ್ ಡಿಸೈನರ‍್ ಬಳಸಿ ನಾನು ಕನ್ನಡವನ್ನು ಮೂಡಿಸಲು ಅಗತ್ಯವದ ೬ ಫಾಂಟ್‌ಗಳನ್ನು ತಯಾರಿಸಿದೆ. ಇದು ಈಗಿನ ಫಾಂಟ್ ತಂತ್ರಜ್ಞಾನಕ್ಕಿಂತ ತುಂಬ ಭಿನ್ನವಾಗಿತ್ತು. ಕನ್ನಡದ ಪ್ರತಿ ಅಕ್ಷರವೂ ಒಂದು ಫಾಂಟ್ ಗ್ಲಿಫ್ (ಫಾಂಟ್‌ನಲ್ಲಿಯ ಒಂದು ಅಕ್ಷರ ಭಾಗ) ಆಗಬೇಕಿತ್ತು. ಮೂಲ ಅಕ್ಷರಗಳಿಗೆ ಒಂದು, “ಇ” ಕಾರ ಕ್ಕೆ ಒಂದು, ಒತ್ತುಗಳಿಗೆ ಒಂದು, ಹೀಗೆ ಹಲವು ಫಾಂಟ್‌ಗಳನ್ನು ತಯಾರಿಸಿದ್ದೆ. ಇದನ್ನು ಬಳಸಿ ಕನ್ನಡದಲ್ಲಿ ಬೆರಳಚ್ಚು ಮಾಡಲು ತುಂಬ ಸರ್ಕಸ್ ಮಾಡಬೇಕಿತ್ತು. ಒಂದು ಪ್ಯಾರಾ ತಯಾಡಿಸಲು ಸುಮಾರು ಅರ್ಧ ಗಂಟೆಯೇ ಹಿಡಿಯುತ್ತಿತ್ತು. ಇದನ್ನು ಬಳಸಿ ನಾನು ಕನ್ನಡದ ಯಾವ ಲೇಖನವನ್ನೂ ತಯಾರಿಸಿರಲಿಲ್ಲ. ಹೆಂಡತಿ ಊರಿಗೆ ಹೋಗಿದ್ದಾಗ ಒಂದು ಭಾನುವಾರ ಆಫೀಸಿಗೆ ಹೋಗಿ ಗಂಟೆಗಟ್ಟಲೆ ಕುಸ್ತಿ ಮಾಡಿ ಎರಡು ಪ್ಯಾರಾದ ಒಂದು ಪತ್ರ ತಯಾರಿಸಿ ಕಳುಹಿಸಿದ್ದೆ ಅಷ್ಟೆ.
pavanaja sir….. nimma anubhavagaLanna Odutiddare …. naanu 7ne taragtiyalli modala sala gaNaka yaMtra kaMDa nenapayitu 🙂
sri pavanajare,
nimma circus nodi /oodi khushi yaadaroo nimma kasarattu nodi
bahala vyathe yaayitu-andare nimma kastha tilidu.